ಅಧಿವೇಶನಕ್ಕೆ ಕೆಲವೇ ಕ್ಷಣ ಬಾಕಿ, ಆದರೆ ಉಮೇಶ್ ಜಾಧವ್ ನಾಪತ್ತೆ!
ಬೆಂಗಳೂರು, ಫೆಬ್ರವರಿ 06: ಬುಧವಾರದಿಂದ ಆರಂಭವಾಗಲಿರುವ ಬಜೆಟ್ ಅಧಿವೇಶನಕ್ಕೆ ಇನ್ನು ಕೆಲವೇ ಕ್ಷಣ ಬಾಕಿ ಉಳಿದಿದ್ದು, ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ನಾಪತ್ತೆಯಾಗಿದ್ದಾರೆ!
ಕಳೆದ ಎರಡು ದಿನಗಳ ಮೊದಲು ಜಾಧವ್ ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರನ್ನು ಭೇಟಿಯಾಗಿ ಮಾತನಾಡಿದ್ದಾರೆ ಮತ್ತು ಎಲ್ಲ ಸಮಸ್ಯೆಗಳೂ ಇತ್ಯರ್ಥವಾಗಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಆದರೆ ಅವರು ಯಾವುದೇ ನಾಯಕರನ್ನು ಭೇಟಿಯಾಗಿಲ್ಲ. ಹಾಗೆಯೇ ಕಾಂಗ್ರೆಸ್ ನಾಯಕರು ಸಹ ಜಾಧವ್ ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ.
ಶಾಸಕಾಂಗ ಪಕ್ಷದ ಸಭೆಗೂ ಹಾಜರಾಗದೆ, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನೀಡಿದ್ದ ನೋಟಿಸ್ ಗೂ ಕ್ಯಾರೇ ಅನ್ನದ ಜಾಧವ್, ಕಾಂಗ್ರೆಸ್ಸಿಗೆ ಬಹುದೊಡ್ಡ ತಲೆನೋವು ಎನ್ನಿಸಿದ್ದಾರೆ.

ಖಂಡ್ರೆ ಅವರೊಂದಿಗೆ ಮಾತ್ರ ಸಂಪರ್ಕ
ಜಾಧವ್ ಅವರ ಆಪ್ತ ಸ್ನೇಹಿತರಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರೊಂದಿಗೆ ಜಾಧವ್ ನಿರತರ ಸಂಪರ್ಕದಲ್ಲಿ ಇರುವುದು ನಿಜವಾದರೂ, ಕಾಂಗ್ರೆಸ್ ನ ಕೆಲ ಮುಖಂಡರ ಬಗ್ಗೆ ಬೇಸರಗೊಂಡಿರುವ ಅವರು ಪಕ್ಷದಿಂದ ದೂರವೇ ಉಳಿದಿದ್ದಾರೆ ಎನ್ನಲಾಗಿದೆ.

ಮನೆಗೂ ಬಂದಿಲ್ಲ ಜಾಧವ್!
ಅವರ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ಆಸ್ಪತ್ರೆಯಿಂದ ಮಂಗಳವಾರ ಡಿಸ್ಚಾರ್ಜ್ ಮಾಡಲಾಗಿದೆಯಾದರೂ, ಜಾಧವ್ ಅವರು ಮಾತ್ರ ಮನೆಗೂ ತೆರಳದೆ ಮಂಗಳವಾರ ಸಂಜೆಯಿಂದಲೂ ನಾಪತ್ತೆಯಾಗಿದ್ದಾರೆ. ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲ.

ಖರ್ಗೆದ್ವಯರ ಬಗ್ಗೆ ಬೇಸರ
ಕಲಬುರಗಿ ರಾಜಕೀಯದಲ್ಲಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಪುತ್ರ ಸಚಿವ ಪ್ರಿಯಾಂಕ್ ಖರ್ಗೆ ಅವರು ತಲೆಹಾಕುತ್ತಿರುವುದರ ಬಗ್ಗೆ ಜಾಧವ್ ಅವರಲ್ಲಿ ಬೇಸರವಿದ್ದು, ಆ ಕಾರಣದಿಂದಲೇ ಅವರು ಪಕ್ಷದ ನಾಯಕರೊಂದಿಗೆ ಮುನಿಸಿಕಂಡಿದ್ದಾರೆ ಎನ್ನಲಾಗಿದೆ.

ಅತೃಪ್ತರ ನಡೆ ಏನು?
ಇಂದಿನ ಬಜೆಟ್ ಅಧಿವೇಶನ ತೀವ್ರ ಕುತೂಹಲ ಕೆರಳಿಸಿದ್ದು, ಶಾಸಕರಾದ ರಮೇಶ್ ಜಾರಕಿಹೊಳಿ, ಉಮೇಶ್ ಜಾಧವ್, ಮಹೇಶ್ ಕಮಟಹಳ್ಳಿ, ಬಿ.ನಾಗೇಂದ್ರ, ಆನಂದ್ ಸಿಂಗ್, ಶಾಸಕ ಗಣೇಶ್ ಅವರು ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದು, ಅವರೆಲ್ಲ ಅಧಿವೇಶನಕ್ಕೆ ಹಾಜರಾಗುತ್ತಾರಾ ಎಂಬುದು ಈಗಿರುವ ಪ್ರಶ್ನೆ. ಅಕಸ್ಮಾತ್ ಅವರು ಅಧಿವೇಶನಕ್ಕೆ ಹಾಜರಾಗದೆ ಇದ್ದರೆ ಬಿಜೆಪಿ ಅವಿಶ್ವಾಸ ಗೊತ್ತುವಳಿ ಮಂಡಿಸಿ, ಬಜೆಟ್ ಗೆ ಅನುಮೋದನೆ ನೀಡದೆ ಇರಬಹುದು. ಆಗ ಫೆಬ್ರವರಿ 08 ರಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಬಜೆಟ್ ಮಂಡಿಸುವುದು ಸಾಧ್ಯವಾಗುವುದಿಲ್ಲ.












Click it and Unblock the Notifications