ಬಜೆಟ್ ಮಂಡನೆ ಬಳಿಕವೇ ಬಿಜೆಪಿಗೆ ಬಜೆಟ್ ಪ್ರತಿ: ಎಚ್‌ಡಿಕೆ ತಂತ್ರ
ಬೆಂಗಳೂರು, ಫೆಬ್ರವರಿ 07: ಬಜೆಟ್ ಮಂಡಿಸಿದ ಬಳಿಕವಷ್ಟೆ ಬಜೆಟ್ ಪ್ರತಿಯನ್ನು ವಿರೋಧ ಪಕ್ಷಕ್ಕೆ ನೀಡಲು ಸರ್ಕಾರ ತೀರ್ಮಾನಿಸಿದೆ.
ಬಜೆಟ್ ಮಂಡನೆಗೆ ಮುನ್ನವೇ ಪ್ರತಿಗಳನ್ನು ವಿರೋಧ ಪಕ್ಷ ಸೇರಿ ಎಲ್ಲರಿಗೂ ಹಂಚುವ ಪರಿಪಾಠ ಮುಂಚಿನಿಂದಲೂ ಇತ್ತು. ಆದರೆ ಈ ಬಾರಿ ಈ ಪರಿಪಾಠವನ್ನು ಸರ್ಕಾರ ಮುರಿಯುವ ಸಾಧ್ಯತೆ ಇದೆ.
ಕುಮಾರಸ್ವಾಮಿ ಅವರು ಬಜೆಟ್ ಭಾಷಣ ಮುಗಿಯುವವರೆಗೂ ವಿಪಕ್ಷದವರಿಗೆ ಬಜೆಟ್ ಪ್ರತಿ ನೀಡದಿರಲು ಬ್ಯುಸಿನೆಸ್ ಅಡ್ವೈಸರಿ ಕಮಿಟಿ (ಬಿಎಸಿ) ಸಮಿತಿ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ವಿಪಕ್ಷಗಳು ಬಜೆಟ್ ಪ್ರತಿಗಳನ್ನು ಹರಿಯುವುದನ್ನು ತಡೆಯಲು ಈ ನಿರ್ಣಯ ತಳೆಯಲಾಗಿದೆ ಎನ್ನಲಾಗಿದೆ. ಲೋಕಸಭೆಯಲ್ಲಿ ಸಹ ಇದೇ ರೀತಿ ಸಂಪ್ರದಾಯ ಇದ್ದು, ಬಜೆಟ್ ಭಾಷಣ ಮುಗಿದ ನಂತರವೇ ವಿಪಕ್ಷಗಳು ಸೇರಿ ಎಲ್ಲರಿಗೂ ಬಜೆಟ್ ಪ್ರತಿಗಳನ್ನು ನೀಡಲಾಗುತ್ತದೆ.
ನಾಳೆ ಬೆಳಿಗ್ಗೆ ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರದ ಎರಡನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಇದಕ್ಕೆ ಬಿಜೆಪಿಯು ಅಡ್ಡಗಾಲು ಹಾಕಲು ಸರ್ವರೀತಿಯಲ್ಲೂ ಸನ್ನದ್ಧವಾಗಿದೆ. ಸರ್ಕಾರವು ಬಜೆಟ್ ಪ್ರತಿಗಳನ್ನು ಆರಂಭದಲ್ಲಿ ನೀಡದಿದ್ದರೆ ಬಿಜೆಪಿಯು ಗದ್ದಲ ಎಬ್ಬಿಸುವ ಸಾಧ್ಯತೆ ಇದೆ.
ಬಜೆಟ್ ಪ್ರತಿಗಳನ್ನು ಮೊದಲಿಗೆ ನೀಡದೇ ಇರುವಲ್ಲಿ ಸಿಎಂ ತಂತ್ರಗಾರಿಕೆಯೂ ಇದೆ, ಬಜೆಟ್ ಪ್ರತಿ ಮೊದಲೇ ನೀಡಿದರೆ ಭಾಷಣ ಮುಗಿಯುವ ಮೊದಲೆ ವಿಪಕ್ಷಗಳು ಬಜೆಟ್ ನಲ್ಲಿನ ಕೊರತೆಗಳನ್ನು ಎತ್ತಿತೋರಿಸಲು ಮುಂದಾಗುತ್ತವೆ. ಬಜೆಟ್ ಅನುಮೋದನೆಗೂ ಕಷ್ಟವಾಗುತ್ತದೆ ಎಂಬ ದೂರಾಲೋಚನೆ ಸಹ ಇದರ ಹಿಂದೆ ಇದೆ.












Click it and Unblock the Notifications