ರಾಜ್ಯ ಬಜೆಟ್‌ನಲ್ಲಿ 3,000 ಹೊಸ ಸಾರಿಗೆ ಬಸ್‌ಗಳಿಗೆ ಬೇಡಿಕೆ
ಬೆಂಗಳೂರು, ಫೆಬ್ರವರಿ 28: ಸಿಎಂ ಸಿದ್ದರಾಮಯ್ಯ ಅವರು ಮಾರ್ಚ್ 6ರಂದು ರಾಜ್ಯ ಅಯ್ಯವ್ಯಯವನ್ನು ಮಂಡನೆ ಮಾಡಲಿದ್ದಾರೆ. ಇನ್ನೂ ಈ ಬಜೆಟ್‌ನಲ್ಲಿ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರು, ರಾಜ್ಯ ಸಾರಿಗೆ ಸಂಸ್ಥೆಗಳು 3,000 ಹೊಸ ಬಸ್‌ಗಳನ್ನು ನೀಡುವುದಾಗಿ ಬೇಡಿಕೆ ಇಟ್ಟಿವೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, "ನಮಗೆ ಎಷ್ಟು ಬಸ್ಸುಗಳು ಸಿಗಲಿವೆ ಎಂಬುದರ ಕುರಿತು ಇನ್ನೂ ಯಾವುದೇ ಸ್ಪಷ್ಟನೆ ದೊರೆತಿಲ್ಲ," ಎಂದು ಹೇಳಿದರು. ಇನ್ನೂ ಇತ್ತೀಚೆಗೆ ಸಚಿವ ಸಂಪುಟದಿಂದ ಅನುಮೋದನೆ ಪಡೆದಿರುವ ಸ್ಮಾರ್ಟ್ ಕಾರ್ಡ್ ಯೋಜನೆಗೆ ಸಂಬಂಧಿಸಿದ ಟೆಂಡರ್‌ಗಳನ್ನು ಶೀಘ್ರದಲ್ಲೇ ಆಹ್ವಾನಿಸಲಾಗುತ್ತದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮತ್ತೆ ವಿಷಯವನ್ನು ಸಂಪುಟದ ಮುಂದೆ ಇಡಲಾಗುತ್ತದೆ. ಆರಂಭಿಕ ಹಂತದಲ್ಲಿ ಸುಮಾರು ಮೂರು ಕೋಟಿ ನಾಗರಿಕರು ಸ್ಮಾರ್ಟ್ ಕಾರ್ಡ್ ಸೌಲಭ್ಯವನ್ನು ಪಡೆಯುವ ನಿರೀಕ್ಷೆಯಿದೆ," ಎಂದು ಅವರು ಹೇಳಿದರು.

ಸ್ಮಾರ್ಟ್ ಕಾರ್ಡ್‌ಗಳ ಪ್ರಯೋಜನಗಳು
ಸ್ಮಾರ್ಟ್ ಕಾರ್ಡ್‌ಗಳ ಪರಿಚಯದಿಂದ ಪ್ರಯಾಣಿಕರ ಮಾಹಿತಿಯನ್ನು ನಿಖರವಾಗಿ ಸಂಗ್ರಹಿಸುವುದಕ್ಕೆ ಸಾಧ್ಯವಾಗುತ್ತದೆ. ಇದರಿಂದ ಬಸ್ ಸೇವೆಯನ್ನು ಪಡೆಯುವ ಪ್ರಯಾಣಿಕರು, ವಿದ್ಯಾರ್ಥಿಗಳ ಕುರಿತು ಸಮಗ್ರ ಮತ್ತು ಖಚಿತ ಮಾಹಿತಿಯನ್ನು ಪಡೆಯಲು ಸಹಕಾರಿ ಆಗುತ್ತದೆ ಎಂದು ರಾಮಲಿಂಗಾರೆಡ್ಡಿ ಅವರು ಅಭಿಪ್ರಾಯಪಟ್ಟರು.
'5K ಸೇಫ್-ಎ-ಥಾನ್' ಕಾರ್ಯಕ್ರಮದ ಲೋಗೋವನ್ನು ಅನಾವರಣಗೊಳಿಸಿದ ಅವರು, ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ವಿವಿಧ ಇಲಾಖೆಗಳ ಮುಂದಾಳತ್ವದಲ್ಲಿ ಈ ಕಾರ್ಯಕ್ರಮವನ್ನು ಮಾರ್ಚ್ 7ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ. 'ನಮ್ಮ ರಸ್ತೆ - ನಮ್ಮ ಸುರಕ್ಷತೆ' ಎಂಬ ಘೋಷವಾಕ್ಯದಡಿ ಸೇಫ್-ಎ-ಥಾನ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನಡಿಗೆ, ಸೈಕ್ಲಿಂಗ್ ಮತ್ತು ಓಟ ಸ್ಪರ್ಧೆಗಳು ಸೇರಿರಲಿವೆ. ಭಾಗವಹಿಸಲು ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ ಎಂದು ಹೇಳಿದರು.
ಆಸಕ್ತರು www.saferoadskarnataka.com ವೆಬ್‌ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ಶಾಂತಿನಗರದ ಕೆಎಸ್‌ಆರ್‌ಟಿಸಿ ಮುಖ್ಯ ಕಚೇರಿಯಲ್ಲಿ ಅವರು ಹೇಳಿದರು. ಇನ್ನೂ 'ಸೇಫ್-ಎ-ಥಾನ್' ಕಾರ್ಯಕ್ರಮಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಗುತ್ತದೆ. ಭಾಗವಹಿಸುವವರು 5 ಕಿಲೋ ಮೀಟರ್ ದೂರವನ್ನು ಕ್ರಮಿಸಿ, ಕಸ್ತೂರಬಾ ರಸ್ತೆ, ಕ್ವೀನ್ಸ್ ರಸ್ತೆ, ಅಂಬೇಡ್ಕರ್ ಬೀದಿ ಹಾಗೂ ಕಾರ್ಪೊರೇಷನ್ ವೃತ್ತ ಮಾರ್ಗವಾಗಿ ಮತ್ತೆ ಕಂಠೀರವ ಕ್ರೀಡಾಂಗಣಕ್ಕೆ ಬಂದು ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಅಪಘಾತದಲ್ಲಿ ಸಾವನ್ನಪ್ಪುವರರ ಸಂಖ್ಯೆ ಹೆಚ್ಚಳ
ಸಚಿವ ರಾಮಲಿಂಗಾರೆಡ್ಡಿ ಅವರ ಪ್ರಕಾರ, ಭಾರತದಲ್ಲಿ ಪ್ರತಿವರ್ಷ ರಸ್ತೆ ಅಪಘಾತಗಳಲ್ಲಿ ಸುಮಾರು 1.70 ಲಕ್ಷ ಮಂದಿ ಮೃತಪಟ್ಟರೆ, 4.50 ಲಕ್ಷಕ್ಕೂ ಹೆಚ್ಚು ಜನರು ಗಾಯಗೊಳ್ಳುತ್ತಾರೆ. ಕರ್ನಾಟಕದಲ್ಲಿ ಮಾತ್ರವೇ ಪ್ರತಿ ವರ್ಷ ಸುಮಾರು 11,000 ಮಂದಿ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಾರೆ ಹಾಗೂ 25,000 ಮಂದಿ ಗಾಯಗೊಳ್ಳುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಸಂಭವಿಸುವ ಅಪಘಾತಗಳಲ್ಲಿ ಸುಮಾರು ಶೇಕಡಾ 70ರಷ್ಟು ಪ್ರಕರಣಗಳು ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದ್ದಾಗಿವೆ. ಸಾವಿನ ಪ್ರಕರಣಗಳಲ್ಲಿಯೂ ಸುಮಾರು ಶೇಕಡಾ 70ರಷ್ಟು ಮಂದಿ ದ್ವಿಚಕ್ರ ವಾಹನ ಸವಾರರೇ ಒಳಗೊಂಡಿದ್ದಾರೆ. ಈ ಅಂಕಿಅಂಶಗಳು ಆತಂಕಕಾರಿ ಆಗಿದ್ದು, ಪ್ರತಿ ವರ್ಷವೂ ಹೆಚ್ಚುತ್ತಿವೆ. ಆದ್ದರಿಂದ ವ್ಯಾಪಕ ಜಾಗೃತಿ ಅಭಿಯಾನದ ಅಗತ್ಯವಿದೆ. ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಜಾಗೃತಿ ಅಭಿಯಾನದ ಒಂದು ಭಾಗವಾಗಬೇಕು ಎಂದು ನಾವು ವಿನಂತಿಸುತ್ತೇವೆ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು, ಕರ್ನಾಟಕದಲ್ಲಿ ಒಟ್ಟು 747 ಬ್ಲ್ಯಾಕ್ ಸ್ಪಾಟ್‌ಗಳು ಎಂದು ಗುರುತಿಸಲ್ಪಟ್ಟಿವೆ. ಅವುಗಳಲ್ಲಿ 684 ಸ್ಥಳಗಳಲ್ಲಿ ವಿವಿಧ ಸರ್ಕಾರಿ ಇಲಾಖೆಗಳು ದುರಸ್ತಿ ಹಾಗೂ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದು, ಉಳಿದ ಸ್ಥಳಗಳಲ್ಲಿ ಕೆಲಸ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಇಲಾಖೆಗಳು ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಮತ್ತು ವೈಜ್ಞಾನಿಕ ರೀತಿಯಲ್ಲಿ ಪರಿಹರಿಸುವತ್ತ ಕ್ರಮಗಳನ್ನು ಕೈಗೊಂಡಿವೆ. ಜಂಕ್ಷನ್ ಸುಧಾರಣೆ, ರಸ್ತೆ ಗುರುತುಗಳ ಅಳವಡಿಕೆ ಮತ್ತು ಬ್ಯಾರಿಕೇಡ್ ವ್ಯವಸ್ಥೆ ಸೇರಿದಂತೆ ಹಲವು ಕಾರ್ಯಗಳನ್ನು ನಡೆಸಲಾಗುತ್ತಿದೆ. ಜೊತೆಗೆ, ಟ್ರಾಫಿಕ್ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಅಂತಲೂ ಅವರು ತಿಳಿಸಿದರು.
1,000ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳಲ್ಲಿ ಸಮಸ್ಯೆ
ಕಳೆದ ಎರಡೂವರೆ ವರ್ಷಗಳಲ್ಲಿ 1,000 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳಲ್ಲಿ ಸಮಸ್ಯೆಗಳು ಕಂಡುಬಂದಿವೆ ಎಂದು ವರದಿಯಾಗಿದೆ. ಈ ವಿಷಯದ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಸಂಬಂಧಿತ ಕಂಪನಿಗಳಿಗೆ ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.












Click it and Unblock the Notifications