Karnataka Budget 2024: ಹಿರಿಯ ನಾಗರಿಕರಿಗೆ ಆಶಾಕಿರಣ ಈ ಸಿದ್ದರಾಮಯ್ಯ ಘೋಷಿಸಿದ 'ಅನ್ನ ಸುವಿಧಾ'
ಬೆಂಗಳೂರು, ಫೆಬ್ರವರಿ.16: ಫೆಬ್ರವರಿ 16 ರಂದು ಸಿಎಂ ಸಿದ್ದರಾಮಯ್ಯ 2024-25ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಎಲ್ಲಾ ವರ್ಗಗಳನ್ನು ಪರಿಗಣಿಸಲಾಗಿದ್ದು, ಹಿರಿಯ ನಾಗರಿಕರಿಗೆ ಅನ್ನ ಸುವಿಧಾ ಎಂಬ ಯೋಜನೆಯನ್ನು ಘೋಷಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಮಂಡಿಸುತ್ತಿರುವ 15ನೇ ಬಜೆಟ್ ಇದು.
ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಕನಸಿನೊಂದಿಗೆ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಉಚಿತ ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆ ಜಾರಿಗೆ ತರಲಾಗಿತ್ತು. ಇದನ್ಉ ಹಿರಿಯರಿಗೆ ಸರಿಯಾಗಿ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಇದೆ ಕಾರಣಕ್ಕೆ ಯೋಜನೆಯೊಂದನ್ನು ಜಾರಿ ಮಾಡಿದೆ. ಅದೇ 'ಅನ್ನ ಸುವಿಧಾ'.

ಅನ್ನ ಸುವಿಧಾ
ಅನ್ನ ಸುವಿಧಾ ಎಂಬ ಹೊಸ ಯೋಜನೆಯಡಿಯಲ್ಲಿ ಹೋಮ್ ಡೆಲಿವೆರಿ ಆಪ್ ಮೂಲಕ 80 ವರ್ಷ ದಾಟಿದ ಹಿರಿಯ ನಾಗರಿಕರು ಮಾತ್ರ ಇರುವ ಮನೆಯ ಬಾಗಿಲಿಗೆ ಆಹಾರ ಧಾನ್ಯಗಳನ್ನು ತಲುಪಿಸುವ ಸಾಮಾಜಿಕ ಭದ್ರತಾ ವ್ಯವಸ್ಥೆ. 'ಅನ್ನ ಸುವಿಧಾ' ಯೋಜನೆ ಮೂಲಕ ವಯಸ್ಸಾದವರಿಗೆ ಶೀಘ್ರದಲ್ಲೇ ಅವರ ಮನೆ ಬಾಗಿಲಿಗೆ ಅನ್ನ ಭಾಗ್ಯದ ಅಡಿಯಲ್ಲಿ ಅಕ್ಕಿ ವಿತರಣೆಯನ್ನು ಮಾಡಲಾಗುತ್ತದೆ. ಈ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಈ ಹಿಂದೆ ಮಾಹಿತಿ ನೀಡಿದ್ದರು.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳು
ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಕನಸಿನೊಂದಿಗೆ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಉಚಿತ ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆ ಜಾರಿಗೆ ತರಲಾಗಿತ್ತು. ಈ ಬಾರಿ ನಾವು ನೀಡಿದ್ದ ಭರವಸೆಯಂತೆ ಹೆಚ್ಚುವರಿಯಾಗಿ ಐದು ಕೆ.ಜಿ. ಆಹಾರ ಧಾನ್ಯ ನೀಡಲು ತೀರ್ಮಾನಿಸಲಾಗಿದೆ. ಆದರೆ ಕೇಂದ್ರ ಸರ್ಕಾರದ ಅಸಹಕಾರ ಧೋರಣೆಯಿಂದಾಗಿ ಅಕ್ಕಿ ಲಭ್ಯವಾಗದ ಕಾರಣ, ನಮ್ಮ ಸರ್ಕಾರವು ಪ್ರತಿ ಫಲಾನುಭವಿಗೆ ಪ್ರತಿ ಕೆ.ಜಿ. ಅಕ್ಕಿಗೆ 34 ರೂ.ನಂತೆ ಪ್ರತಿ ಮಾಹೆ 170 ರೂ. ನೇರ ನಗದು ವರ್ಗಾವಣೆ ಮಾಡುವ ಮೂಲಕ ನಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದೇವೆ. ಜನವರಿ 2024ರ ಅಂತ್ಯದವರೆಗೆ 4.02 ಕೋಟಿ ಫಲಾನುಭವಿಗಳಿಗೆ 4,595 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ.

ಡಾ.ಮನ್‌ಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು 2013 ರಲ್ಲಿ ಜಾರಿಗೆ ತರಲಾಯಿತು. ಪಡಿತರ ಹಾಗೂ ಆಹಾರ ಧಾನ್ಯ ವಿತರಣಾ ವ್ಯವಸ್ಥೆಯನ್ನು ತಳಹಂತದಲ್ಲಿ ಬಲಪಡಿಸುವ ಮೂಲಕ ಜಾಗೃತಿ ಸಮಿತಿಗಳಲ್ಲಿ ಜನರ ಸಹಭಾಗಿತ್ವವನ್ನು ಹೆಚ್ಚಿಸಲಾಗುವುದು. ಇದರಿಂದ ಆಹಾರ ಭದ್ರತಾ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ, ಹಾಗೂ ಹಸಿವು ಮುಕ್ತ ಕರ್ನಾಟಕದ ನಮ್ಮ ಆಶಯವನ್ನು ಈಡೇರಿಸಲು ನೆರವಾಗಲಿದೆ ಎಂದು ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ತಿಳಿಸಿದ್ದಾರೆ.
ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಆನ್‌ಲೈನ್‌ನಲ್ಲಿ ನೋಂದಾಯಿಸಬೇಕು. ಸರ್ಕಾರದ ಡೇಟಾ ಪ್ರಕಾರ ಸುಮಾರು 80,000 ವೃದ್ಧ ಫಲಾನುಭವಿಗಳು ಸೌಲಭ್ಯಕ್ಕೆ ಅರ್ಹರಾಗಿದ್ದಾರೆ ಎಂದು ಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.











Click it and Unblock the Notifications