Karnataka Budget 2023; ಸಾರಿಗೆ ಇಲಾಖೆಗೆ ನೀಡಿದ ಕೊಡುಗೆಗಳು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24ನೇ ಸಾಲಿನ ಬಜೆಟ್‌ನಲ್ಲಿ ಮಂಡನೆ ಮಾಡಿದ್ದಾರೆ. ಬಜೆಟ್‌ನಲ್ಲಿ ಸಾರಿಗೆ ಇಲಾಖೆಗೆ ನೀಡಿರುವ ಕೊಡುಗೆಗಳು ಏನು?
ಬೆಂಗಳೂರು, ಫೆಬ್ರವರಿ 17; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ವಿದ್ಯುತ್ ಚಾಲಿತ ವಾಹನಗಳ ಉಪಯೋಗವನ್ನು ಉತ್ತೇಜಿಸುವ ಮೂಲಕ ವಾಯುಮಾಲಿನ್ಯವನ್ನು ಕಡಿಮೆಗೊಳಿಸುವ ದೃಷ್ಟಿಯಿಂದ ರಾಜ್ಯದಲ್ಲಿನ ಸರ್ಕಾರಿ ಕಛೇರಿಗಳು ಮತ್ತು ರಾಜ್ಯ ರಸ್ತೆ ಸಾರಿಗೆ ನಿಗಮಗಳ ಡಿಪೋಗಳಲ್ಲಿ ಹಸಿರು ತೆರಿಗೆ ನಿಧಿಯ ಅನುದಾನದಡಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿರುತ್ತದೆ ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದರು.
ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿಗಳು ದೇವನಹಳ್ಳಿ, ಕೋಲಾರ, ಹೊಸಪೇಟೆ, ಗದಗ, ಬಳ್ಳಾರಿ, ವಿಜಯಪುರ, ಬೀದರ್, ಯಾದಗಿರಿ ಮತ್ತು ದಾವಣಗೆರೆಗಳಲ್ಲಿ 80 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥಗಳ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದರು.
ಸಾರಿಗೆ ಇಲಾಖೆಯ ಘೋಷಣೆಗಳು
* ರಾಜ್ಯದ ಸಾರಿಗೆ ಇಲಾಖೆಯ ವಾಹನ ಹಾಗೂ ಸಾರಥಿ ಸೇವೆಗೆ ಸಂಬಂಧಿಸಿದ 31 ಸೇವೆಗಳನ್ನು ಸಂಪರ್ಕ ರಹಿತವಾಗಿ ಸಾರ್ವಜನಿಕರಿಗೆ ಆನ್‌ಲೈನ್ ಮೂಲಕ ಒದಗಿಸಲಾಗುತ್ತಿದೆ. ಅಲ್ಲದೇ, ಕೇಂದ್ರ ಸರ್ಕಾರದ ಮಾದರಿಯಲ್ಲಿ 'ನೊಂದಾಯಿತ ವಾಹನಗಳ ನಾಶಪಡಿಸುವಿಕೆ ನೀತಿ-2022'ನ್ನು (Registered Vehicle Scrapping Policy-2022) ಜಾರಿಗೊಳಿಸಿದೆ. ಕೇಂದ್ರದ ಸಹಭಾಗಿತ್ವದಲ್ಲಿ 22 ಕೋಟಿ ರೂ. ವೆಚ್ಚದಲ್ಲಿ Vehicle Location Tracking System (VLTS) ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.

* ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವುದು ನಮ್ಮ ಸರ್ಕಾರದ ಬದ್ಧತೆಯಾಗಿರುತ್ತದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿನ ಆಟೋ ಚಾಲಕರು, ಟ್ಯಾಕ್ಸಿ ಚಾಲಕರು ಮತ್ತು ಲಾರಿ ಚಾಲಕರಿಗೆ ಹಾಗೂ ಇ-ಕಾಮರ್ಸ್‌ನಡಿ ಡೆಲಿವರಿ ಸೇವೆಯನ್ನು ನೀಡುತ್ತಿರುವವರ ಅವಲಂಬಿತರಿಗೆ ಭದ್ರತೆಯನ್ನು ಒದಗಿಸುವ ದೃಷ್ಟಿಯಿಂದ, ಇಂತಹವರು ಮರಣ ಹೊಂದಿದಲ್ಲಿ 2 ಲಕ್ಷ ರೂ. ಗಳ ವಿಮಾ ಸೌಲಭ್ಯ ಹಾಗೂ ಅಪಘಾತದಲ್ಲಿ ಮರಣ ಹೊಂದಿದಲ್ಲಿ 2 ಲಕ್ಷ ರೂ. ಗಳಂತೆ ಒಟ್ಟು 4 ಲಕ್ಷ ರೂ. ಗಳ ವಿಮಾ ಸೌಲಭ್ಯ ಕಲ್ಪಿಸಲು 'ಮುಖ್ಯಮಂತ್ರಿ ವಿಮಾ ಯೋಜನೆ'ಯನ್ನು ರೂಪಿಸಲಾಗುವುದು. ಇದರಿಂದ ಒಟ್ಟು 16.50 ಲಕ್ಷ ಜನರಿಗೆ ಸಹಾಯವಾಗುತ್ತಿದೆ.
* ತುಮಕೂರು, ಹಾವೇರಿ, ಯಲಹಂಕ, ಕಸ್ತೂರಿನಗರ, ಸಕಲೇಶಪುರ, ಕೆಜಿಎಫ್, ಚಿಂತಾಮಣಿ, ಸಾಗರ, ಗೋಕಾಕ್, ರಾಣೆಬೆನ್ನೂರು, ದಾಂಡೇಲಿ, ಶಿರಸಿ ಮತ್ತು ಭಾಲ್ಕಿ ನಗರಗಳಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು ಒಟ್ಟು 85 ಕೋಟಿ ರೂ. ಗಳ ವೆಚ್ಚದಲ್ಲಿ ರಸ್ತೆ ಸುರಕ್ಷತಾ ನಿಧಿಯ ಅನುದಾನದಿಂದ ನಿರ್ಮಿಸಲಾಗುವುದು.
* ಸಾರಿಗೆ ಇಲಾಖೆಯಲ್ಲಿ ಇ-ಚಲನ್ ವ್ಯವಸ್ಥೆಯಡಿ ಪ್ರವರ್ತನ ಚಟುವಟಿಕೆಗಳಲ್ಲಿ ಸಂಗ್ರಹವಾದ ರಾಜಿ ದಂಡವನ್ನು ಪಾವತಿಸಿಕೊಳ್ಳುವ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಯನ್ನು ಪ್ರಾಯೋಗಿಕವಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ರಾಜಾಜಿನಗರದಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು ಹಂತ ಹಂತವಾಗಿ ರಾಜ್ಯಾದ್ಯಂತ ಜಾರಿಗೊಳಿಸಲಾಗುವುದು.

* ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿನ ವ್ಯವಸ್ಥೆಯನ್ನು ಸುಧಾರಿಸುವ ಮತ್ತು ನಿಗಮಗಳನ್ನು ಬಲಪಡಿಸುವ ಉದ್ದೇಶದಿಂದ ರಚಿಸಲಾಗಿದ್ದ ಎಂ. ಆರ್ ಶ್ರೀನಿವಾಸಮೂರ್ತಿ ಸಮಿತಿಯು ಸರ್ಕಾರಕ್ಕೆ ವರದಿ ನೀಡಿದ್ದು, ಅದರಲ್ಲಿನ ಶಿಫಾರಸ್ಸುಗಳ ಅನುಸಾರ ನಿಗಮಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಬಸ್ಸುಗಳ ಕಾರ್ಯಾಚರಣೆ ಸೇರಿದಂತೆ ವಿವಿಧ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
* ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ 2022-23ನೇ ಸಾಲಿನಲ್ಲಿ 2,335 ಕೋಟಿ ರೂ. ಗಳ ಮೊತ್ತದ ಆರ್ಥಿಕ ಸಹಾಯವನ್ನು ಒದಗಿಸಲಾಗಿದೆ. ಇದಲ್ಲದೇ 1,505 ಕೋಟಿ ರೂ. ಮೊತ್ತದಲ್ಲಿ ವಾಹನ ತೆರಿಗೆಯಿಂದ ವಿನಾಯಿತಿ ಹಾಗೂ ತೆರಿಗೆಯನ್ನು ಬಂಡವಾಳವಾಗಿ ಪರಿವರ್ತಿಸಿಕೊಳ್ಳಲು ಮತ್ತು ಉಳಿಸಿಕೊಳ್ಳಲು ವಿಶೇಷ ಅವಕಾಶವನ್ನು ಮಾಡಿಕೊಡಲಾಗಿರುತ್ತದೆ. ಒಟ್ಟಾರೆಯಾಗಿ 3,840 ಕೋಟಿ ರೂ. ಗಳ ಸಹಾಯವನ್ನು ಒದಗಿಸಲಾಗಿರುತ್ತದೆ.
* 2022-23ನೇ ಸಾಲಿನಲ್ಲಿ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ ಒಟ್ಟು 3,526 ಹೊಸ ಬಸ್ಸುಗಳನ್ನು ಸೇರ್ಪಡೆ ಮಾಡಿಕೊಳ್ಳಲು ಕ್ರಮ ವಹಿಸಲಾಗಿರುತ್ತದೆ. 2023-24ನೇ ಸಾಲಿನಲ್ಲಿ 1,200 ಹೊಸ ಬಸ್ಸುಗಳನ್ನು ಸಂಸ್ಥೆಗಳಿಗೆ ಸೇರ್ಪಡೆ ಮಾಡಲು ರಾಜ್ಯ ಸರ್ಕಾರದಿಂದ 500 ಕೋಟಿ ರೂ. ಗಳ ಆರ್ಥಿಕ ಸಹಾಯವನ್ನು ಒದಗಿಸಲಾಗುವುದು. ಪ್ರಪ್ರಥಮ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಸಾರಿಗೆ ಸಂಸ್ಥೆಗಳಿಗೆ ಹೊಸ ಬಸ್ ಖರೀದಿಗಾಗಿ ಸರ್ಕಾರದಿಂದ ನೆರವು ನೀಡಲಾಗುತ್ತಿದೆ.
* ವಾಯುಮಾಲಿನ್ಯ ನಿಯಂತ್ರಣ ದೃಷ್ಟಿಯಿಂದ ಸಾರಿಗೆ ನಿಗಮಗಳಲ್ಲಿ ಈಗಾಗಲೇ ವಿದ್ಯುತ್ ಚಾಲಿತ ಬಸ್ಸುಗಳನ್ನು ಅಳವಡಿಸಲು ಆರಂಭಿಸಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 1,311 ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ 50 ಬಸ್ಸುಗಳ ಕಾರ್ಯಾಚರಣೆ ಪ್ರಾರಂಭಿಸಿದೆ. ಮುಂಬರುವ ವರ್ಷಗಳಲ್ಲಿ ವಿದ್ಯುತ್ ಚಾಲಿತ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು.
* ದೇಶದ ರಸ್ತೆ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ಒಂದು ಕೋಟಿ ರೂ. ಮೊತ್ತದ ಅಪಘಾತ ವಿಮಾ ಯೋಜನೆ ಸೌಲಭ್ಯ ಜಾರಿಗೆ ತರಲಾಗಿದೆ.












Click it and Unblock the Notifications