Karnataka Budget 2023; ಕಂದಾಯ ಇಲಾಖೆಗೆ ಕೊಡುಗೆಗಳೇನು?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24ನೇ ಸಾಲಿನ ಬಜೆಟ್‌ನಲ್ಲಿ ಮಂಡನೆ ಮಾಡಿದ್ದಾರೆ. ಬಜೆಟ್‌ನಲ್ಲಿ ಕರ್ನಾಟಕದ ಕಂದಾಯ ಇಲಾಖೆಗೆ ನೀಡಿರುವ ಕೊಡುಗೆಗಳು ಏನು?

ಬೆಂಗಳೂರು, ಫೆಬ್ರವರಿ 17; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24ನೇ ಸಾಲಿನ ಬಜೆಟ್ ಮಂಡಿಸಿದರು. ಬಜೆಟ್‌ನಲ್ಲಿ ಕಂದಾಯ ಇಲಾಖೆಗೆ ಹಲವಾರು ಕೊಡುಗೆಗಳನ್ನು ನೀಡಲಾಗಿದೆ. ಗ್ರಾಮ ಸಹಾಯಕರ ಹುದ್ದೆಯನ್ನು 'ಜನಸೇವಕ' ಎಂದು ಬದಲಾವಣೆ ಮಾಡಲಾಗುತ್ತದೆ ಎಂದು ಘೋಷಿಸಲಾಗಿದೆ.

ಶುಕ್ರವಾರ ಸುಮಾರು 2 ಗಂಟೆಗೂ ಹೆಚ್ಚು ಕಾಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24ನೇ ಸಾಲಿನ ಬಜೆಟ್‌ ಮಂಡಿಸಿದರು. ಬಜೆಟ್ ಭಾಷಣದಲ್ಲಿ ಕಂದಾಯ ಇಲಾಖೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಬಜೆಟ್ ಭಾಷಣದಲ್ಲಿ'ಹಲೋ ಕಂದಾಯ ಸಚಿವರೇ' ಸಹಾಯವಾಣಿ ಯೋಜನೆಯಡಿ ಒಂದು ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ 79,951 ಅರ್ಹ ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಆದೇಶ ನೀಡಲಾಗಿದೆ ಎಂದರು.

ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಗಳನ್ನು ಮಾದರಿ ಉಪನೋಂದಣಿ ಕಛೇರಿಗಳಾಗಿ ಪರಿವರ್ತಿಸಲಾಗುವುದು. ಮೊದಲನೇ ಹಂತದಲ್ಲಿ ಪ್ರಸಕ್ತ ಸಾಲಿನಲ್ಲಿ 8 ಕಛೇರಿಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಕಂದಾಯ ಇಲಾಖೆಗೆ ಕೊಡುಗೆಗಳು

ಕಂದಾಯ ಇಲಾಖೆಗೆ ಕೊಡುಗೆಗಳು

ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿಗಳು, ರಾಜ್ಯ ಸರ್ಕಾರವು 1,475 ತಾಂಡ, ಗೊಲ್ಲರಹಟ್ಟಿ, ಕುರುಬರಹಟ್ಟಿ ಮತ್ತು ಇತರೆ ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿದೆ. ಈ ಪೈಕಿ ಕಲಬುರಗಿ, ರಾಯಚೂರು, ವಿಜಯನಗರ, ಯಾದಗಿರಿ ಮತ್ತು ಬೀದರ್‌ ಜಿಲ್ಲೆಗಳಲ್ಲಿ 342 ದಾಖಲೆರಹಿತ ಜನವಸತಿಗಳ 52,000 ಫಲಾನುಭವಿಗಳಿಗೆ ಮಾನ್ಯ ಪ್ರಧಾನ ಮಂತ್ರಿಗಳ ಮೂಲಕ ಹಕ್ಕು ಪತ್ರಗಳನ್ನು ವಿತರಿಸಿ ದಾಖಲೆ ನಿರ್ಮಿಸಿದ್ದೇವೆ ಎಂದರು.

ಸರ್ಕಾರಿ ಜಮೀನನ್ನು ದಶಕಗಳಿಂದ ಒತ್ತುವರಿ ಮಾಡಿಕೊಂಡು ಕಾಫಿ, ಟೀ, ಮತ್ತು ಇನ್ನಿತರೆ ಪ್ಲಾಂಟೇಶನ್‌ ಬೆಳೆಗಳನ್ನು ಬೆಳೆಯುತ್ತಿರುವ ಜಮೀನುಗಳನ್ನು 30 ವರ್ಷಗಳ ಅವಧಿಗೆ ಗರಿಷ್ಠ 25 ಎಕರೆ ಮಿತಿಗೆ ಒಳಪಟ್ಟು ಗುತ್ತಿಗೆ ನೀಡಲು ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, 2023-24ನೇ ಸಾಲಿನಲ್ಲಿ ಈ ಕಾಯ್ದೆ ಜಾರಿಗೊಳಿಸಲು ನಿಯಮಗಳನ್ನು ರೂಪಿಸಲಾಗುವುದು. ಇದೇ ರೀತಿ ಸಮಸ್ಯೆಗಳಿರುವ ಮತ್ತಿತರೆ ಪ್ರಕರಣಗಳನ್ನೂ ಸಹ ಕಾನೂನಿನ ಚೌಕಟ್ಟಿನಲ್ಲಿ ಪರಿಶೀಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಘೋಷಿಸಿದರು.

ಗ್ರಾಮ ಒನ್ ಕೇಂದ್ರಗಳ ಬಗ್ಗೆ

ಗ್ರಾಮ ಒನ್ ಕೇಂದ್ರಗಳ ಬಗ್ಗೆ

ಮುಖ್ಯಮಂತ್ರಿಗಳು ಭಾಷಣದಲ್ಲಿ ವಿವಿಧ ನಾಗರಿಕ ಸೇವೆಗಳನ್ನು ಜನರಿಗೆ ಸ್ಥಳೀಯವಾಗಿ ದೊರಕಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಿದೆ. ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ನೀಡಲಾಗುತ್ತಿದ್ದ ಹಲವು ಸೇವೆಗಳನ್ನು ನಾಡ ಕಛೇರಿ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ನೀಡುವ ಮೂಲಕ ಜನರ ಮನೆ ಬಾಗಿಲಿಗೇ ಆಡಳಿತವನ್ನು ತಲುಪಿಸುವಲ್ಲಿ ಮಹತ್ತರ ಹೆಜ್ಜೆಗಳನ್ನಿಟ್ಟಿದ್ದೇವೆ. ಈಗಾಗಲೇ ಈ ವರ್ಷದಲ್ಲಿ ಗ್ರಾಮ ಒನ್‌ ಕೇಂದ್ರ ಹಾಗೂ ನಾಡಕಛೇರಿಗಳ ಮೂಲಕ 1.5 ಕೋಟಿ ಅರ್ಜಿಗಳನ್ನು ವಿಲೇ ಮಾಡಲಾಗಿದೆ ಎಂದರು.

ಗೋಮಾಳ, ಗಾಯರಾಣ, ಹುಲ್ಲುಬನ್ನಿ, ಸೊಪ್ಪಿನ ಬೆಟ್ಟ ಇತ್ಯಾದಿ ಗ್ರಾಮೀಣ ಪ್ರದೇಶದ ಸರ್ಕಾರಿ ಜಮೀನುಗಳನ್ನು ಮಂಜೂರು ಮಾಡುವ ಕುರಿತು ಒಂದು ನೀತಿಯನ್ನು ರೂಪಿಸುವ ಸಲುವಾಗಿ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಲಾಗಿದ್ದು, ಅದರ ಶಿಫಾರಸ್ಸಿನನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಘೋಷಣೆ ಮಾಡಿದರು.

ಭೂ ಮಂಜೂರಾತಿ ನಿಯಮ

ಭೂ ಮಂಜೂರಾತಿ ನಿಯಮ

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೇರು ಕೃಷಿ ಉದ್ದೇಶಕ್ಕಾಗಿ ಗುತ್ತಿಗೆಗೆ ನೀಡಲಾಗಿರುವ ಸುಮಾರು 4,292 ಎಕರೆ ಜಮೀನನ್ನು ಮಾರ್ಗಸೂಚಿ ಮೌಲ್ಯವನ್ನು ವಿಧಿಸಿ ಖಾಯಂ ಆಗಿ ಮಂಜೂರು ಮಾಡಲು ಕರ್ನಾಟಕ 'ಭೂ ಮಂಜೂರಾತಿ ನಿಯಮಗಳು 1969' ಗೆ ತಿದ್ದುಪಡಿ ತರಲು ಕರಡು ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮಾಡುತ್ತಿರುವ ಸಾಗುವಳಿಯನ್ನು ಸಕ್ರಮಗೊಳಿಸಲು ನಮೂನೆ-57 ರಲ್ಲಿ ಅರ್ಜಿ ಸಲ್ಲಿಸಲು ದಿನಾಂಕ 30/05/2022 ರಿಂದ ಒಂದು ವರ್ಷದ ಅವಧಿಯವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ ಎಂದರು.

ರೈತರಿಗೆ ತುರ್ತಾಗಿ ಭೂಮಾಪನಾ ನಕ್ಷೆ ಬೇಕಾಗಿದ್ದಲ್ಲಿ 'ಸ್ವಾವಲಂಬಿ' ಯೋಜನೆಯಡಿ ಸ್ವತಃ ನಕ್ಷೆ ತಯಾರಿಸಲು ಅವಕಾಶ ಕಲ್ಪಿಸಲಾಗಿದ್ದು, 5 ಸಾವಿರಕ್ಕಿಂತ ಹೆಚ್ಚು ಜನ ಈಗಾಗಲೇ ಈ ಸೌಲಭ್ಯ ಪಡೆದುಕೊಂಡಿದ್ದಾರೆ. ಪೋಡಿ ಮುಕ್ತ ಅಭಿಯಾನ ಯೋಜನೆಯನ್ನು ಗಣಕೀಕೃತಗೊಳಿಸಿ ಮೋಜಣಿ ಗಣಕ ವ್ಯವಸ್ಥೆಯಲ್ಲಿ ಅನುಷ್ಠಾನಗೊಳಿಸಲಾಗುವುದು. ಈ ಸಾಲಿನಲ್ಲಿ 3,000 ಗ್ರಾಮಗಳನ್ನು ಪೋಡಿ ಮುಕ್ತಗೊಳಿಸಲಾಗುವುದು ಎಂದು ಹೇಳಿದರು.

14,000 ರೂ. ಗಳಿಗೆ ಏರಿಕೆ

14,000 ರೂ. ಗಳಿಗೆ ಏರಿಕೆ

ಮುಖ್ಯಮಂತ್ರಿಗಳು ಗ್ರಾಮ ಸಹಾಯಕರ ಹುದ್ದೆಯನ್ನು 'ಜನಸೇವಕ' ಎಂದು ಮರುನಾಮಕರಣ ಮಾಡಿ ಸರ್ಕಾರದ ವತಿಯಿಂದ ನೀಡುತ್ತಿರುವ ವಿವಿಧ ಸೌಲಭ್ಯಗಳನ್ನು ಸರಿಯಾಗಿ ಜನರಿಗೆ ತಲುಪುತ್ತಿದೆಯೇ ಎಂದು ಖಾತರಿ ಪಡಿಸುವ ಜವಾಬ್ದಾರಿಯನ್ನು ನೀಡಲಾಗುವುದು. ಇವರಿಗೆ ನೀಡುತ್ತಿರುವ ಮಾಸಿಕ ಗೌರವಧನವನ್ನು 13,000 ರೂ. ಗಳಿಂದ 14,000 ರೂ. ಗಳಿಗೆ ಹೆಚ್ಚಿಸಲಾಗುವುದು ಎಂದರು.

ಕರ್ನಾಟಕ ರಾಜ್ಯದೆಲ್ಲೆಡೆ 7,363 ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಇಲ್ಲಿಯವರೆಗೆ 1.5 ಕೋಟಿ ನಾಗರಿಕ ಸೇವೆಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+