Karnataka Budget 2023 : ಫೆಬ್ರವರಿ 17ರಂದು ವಿಶೇಷ ಸಚಿವ ಸಂಪುಟ ಸಭೆ
ಫೆಬ್ರವರಿ 17ರ ಶುಕ್ರವಾರ ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಇದಕ್ಕೂ ಮೊದಲು ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ.
ಬೆಂಗಳೂರು, ಫೆಬ್ರವರಿ 15; ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೆಬ್ರವರಿ 17ರಂದು ಕರ್ನಾಟಕ ಬಜೆಟ್ 2023-24 ಮಂಡನೆ ಮಾಡಲಿದ್ದಾರೆ. ಚುನಾವಣೆ ಹಿನ್ನಲೆಯಲ್ಲಿ ಬಜೆಟ್‌ನಲ್ಲಿ ಹಲವಾರು ಕೊಡುಗೆ ನಿರೀಕ್ಷೆ ಮಾಡಲಾಗಿದೆ.
ಫೆಬ್ರವರಿ 17ರ ಶುಕ್ರವಾರ ಬೆಳಗ್ಗೆ 10.15ಕ್ಕೆ ಬಸವರಾಜ ಬೊಮ್ಮಾಯಿ ಬಜೆಟ್ ಮಂಡನೆ ಮಾಡಲಿದ್ದಾರೆ. ಇದಕ್ಕೂ ಮೊದಲು ಬೆಳಗ್ಗೆ 9.45ಕ್ಕೆ ವಿಧಾನಸೌಧದಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ.
ಬಜೆಟ್ ಮಂಡನೆಗೂ ಮೊದಲು ಮುಖ್ಯಮಂತ್ರಿಗಳು ಸಂಪ್ರದಾಯದಂತೆ ಸಚಿವ ಸಂಪುಟದ ಒಪ್ಪಿಗೆ ಪಡೆಯಲಿದ್ದಾರೆ. ಬಳಿಕ ವಿಧಾನಸಭೆ ಕಲಾಪ ಆರಂಭವಾಗಲಿದ್ದು, 10.15ಕ್ಕೆ ಬಜೆಟ್ ಮಂಡನೆ ಆರಂಭವಾಗಲಿದೆ.

2019ರಲ್ಲಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಇದಾಗಿದೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದೆ. ಏಪ್ರಿಲ್ ಅಂತ್ಯ ಅಥವ ಮೇ ತಿಂಗಳಿನಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ.
ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ವಿವಿಧ ವಲಯಗಳಿಗೆ ಹಲವಾರು ಕೊಡುಗೆಗಳನ್ನು ನಿರೀಕ್ಷೆ ಮಾಡಲಾಗಿದೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಮತ್ತೆ ಅಧಿಕಾರಕ್ಕೆ ಬರುವ ಗುರಿ ಹೊಂದಿರುವ ಬಿಜೆಪಿ ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಲಿದೆಯೇ? ಕಾದು ನೋಡಬೇಕು.
ಫೆಬ್ರವರಿ 23ರ ತನಕ ಬಜೆಟ್ ಅಧಿವೇಶನ ನಡೆಯಲಿದೆ. ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿಗಳು ಅಧಿವೇಶನದ ಕೊನೆಯ ದಿನ ಉತ್ತರ ನೀಡಲಿದ್ದಾರೆ. ಇದು ಈ ವಿಧಾನಸಭೆಯ ಕೊನೆಯ ಅಧಿವೇಶನವಾಗಿದೆ.ಫೆಬ್ರವರಿ 10ರಂದು ಬಜೆಟ್ ಅಧಿವೇಶನ ಆರಂಭವಾಗಿದೆ.
ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯುತ್ತಿದೆ. ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಮಾರು 1 ಗಂಟೆಗಳ ಕಾಲ ಬಜೆಟ್ ಮಂಡಿಸಲಿದ್ದಾರೆ. ಫೆಬ್ರವರಿ 20 ರಿಂದ 22ರ ತನಕ ಬಜೆಟ್ ಮೇಲೆ ಚರ್ಚೆಗಳು ನಡೆಯಲಿವೆ.
ಈ ಬಜೆಟ್‌ನಲ್ಲಿ ಘೋಷಣೆ ಮಾಡುವ ಹಲವು ಅಂಶಗಳು ಕೇವಲ ಘೋಷಣೆಯಾಗಿಯೇ ಉಳಿಯಲಿವೆ. ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದರೆ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಕೊಡುಗೆಗಳ ಜಾರಿಗೆ ಅಡ್ಡಿಯಾಗಲಿವೆ. ಒಂದು ವೇಳೆ ಮುಂದೆ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬಂದರೆ ಮಾತ್ರ ಯೋಜನೆಗಳು ಜಾರಿಗೆ ಬರಲಿವೆ.












Click it and Unblock the Notifications