Gruha Lakshmi Apply: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಜುಲೈ 16ರಿಂದ ಚಾಲನೆ: ಸಿಎಂ ಸಿದ್ದರಾಮಯ್ಯ ಅಧಿಕೃತ ಘೋಷಣೆ!
ಬೆಂಗಳೂರು: ಕರ್ನಾಟಕದ ಮಹಿಳೆಯರಿಗೆ ಪ್ರತಿ ತಿಂಗಳು ₹2000 ಸಹಾಯಧನ ನೀಡುವ, 'ಗೃಹಲಕ್ಷ್ಮಿ' ಯೋಜನೆಗೆ ಸಿಎಂ ಸಿದ್ದರಾಮಯ್ಯ ಭರ್ಜರಿ ಗಿಫ್ಟ್ ನೀಡಿದ್ದಾರೆ. ಬರೋಬ್ಬರಿ 30 ಸಾವಿರ ಕೋಟಿ ರೂಪಾಯಿ ವೆಚ್ಚದ ಭದ್ರತಾ ಯೋಜನೆ ಇದಾಗಿದೆ. 'ಗೃಹಲಕ್ಷ್ಮಿ'ಗೆ ಅರ್ಜಿ ಸಲ್ಲಿಸುವ ದಿನಾಂಕ ಕೂಡ ಫೈನಲ್ ಆಗಿದೆ. ಹಾಗೇ ಮಹಿಳೆಯರಿಗೆ ಈ ಯೋಜನೆ ಅಡಿಯಲ್ಲಿ ಯಾವಾಗ ಹಣ ಬಂದು ಸೇರಲಿದೆ ಎಂಬುದನ್ನೂ ರಾಜ್ಯ ಸರ್ಕಾರ ವಿವರಿಸಿದೆ.
ಗೃಹಲಕ್ಷ್ಮಿ ಯೋಜನೆ ಜಾರಿಗೆ ತರಲು ರಾಜ್ಯ ಸರ್ಕಾರ ಭರ್ಜರಿ ತಯಾರಿ ನಡೆಸಿದೆ. ಹಾಗೆ ಅರ್ಜಿ ಸಲ್ಲಿಕೆಗೆ ಎದುರಾಗುವ ಸರ್ವರ್ ಸಮಸ್ಯೆ ತಪ್ಪಿಸಲು ಪ್ರತ್ಯೇಕ ಆ್ಯಪ್ ಕೂಡ ಸಿದ್ಧವಾಗುತ್ತಿದೆ. ಈ ಹೊತ್ತಲ್ಲೇ ರಾಜ್ಯದ ಮಹಿಳೆಯರು ಕೂಡ 'ಗೃಹಲಕ್ಷ್ಮಿ' ಯೋಜನೆಗೆ ಅರ್ಜಿ ಸಲ್ಲಿಸೋದಕ್ಕೆ ಕಾಯುತ್ತಿದ್ದರು. ಇಂದು 2023ನೇ ಸಾಲಿನ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ತಿಳಿಸಿದ್ದಾರೆ. ಇನ್ನೇನು ಮುಂದಿನ ತಿಂಗಳಿಂದಲೇ ಮನೆಯ ಯಜಮಾನಿಯರು 2000 ರೂಪಾಯಿ ಮೊತ್ತದ ಭದ್ರತಾ ಯೋಜನೆ ಲಾಭ ಪಡೆಯಲಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ.

ಆಗಸ್ಟ್ ತಿಂಗಳಿಂದಲೇ ಸಿಗಲಿದೆ ₹2000!
ಚುನಾವಣೆಗೆ ಮುನ್ನ ಕಾಂಗ್ರೆಸ್ ಘೋಷಿಸಿದ್ದಂತೆ ಪ್ರತಿ ಮನೆ ಯಜಮಾನಿಗೆ 2000 ಸಾವಿರ ರೂ. ತಿಂಗಳಿಗೆ ಸಿಗಲಿದೆ. ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ₹2000 ಸಾವಿರ ಬ್ಯಾಂಕ್ ಖಾತೆಗೆ ಬರಲಿದೆ. ಆದರೆ ಕೆಲ ತಾಂತ್ರಿಕ ಸಮಸ್ಯೆಯಿಂದ ಅರ್ಜಿ ಸ್ವೀಕಾರ ತಡವಾಗಿತ್ತು ಎಂದು ಸಿದ್ದರಾಮಯ್ಯ ಸರ್ಕಾರ ಹಿಂದೆ ತಿಳಿಸಿತ್ತು. ಈಗ ಕೋಟ್ಯಂತರ ಮಹಿಳಾ ಫಲಾನುಭವಿಗಳ ಕುತೂಹಲಕ್ಕೆ ತೆರೆ ಬಿದ್ದಿದ್ದು, ಜುಲೈ 16ರಿಂದಲೇ 'ಗೃಹಲಕ್ಷ್ಮಿ' ಯೋಜನೆಗೆ ಅರ್ಜಿಯನ್ನ ಸಲ್ಲಿಸಲು ಮುಹೂರ್ತ ಫಿಕ್ಸ್ ಆಗಿದೆ. ಇದರ ಜೊತೆಗೆ ಆಗಸ್ಟ್ ತಿಂಗಳಿಂದಲೇ ರಾಜ್ಯದಲ್ಲಿನ ಮನೆಯ ಯಜಮಾನಿಗೆ ₹2000 ಸಾವಿರ ಬ್ಯಾಂಕ್ ಖಾತೆಗೆ ಬಂದು ಸೇರಲಿದೆಯಂತೆ.
'ಗೃಹಲಕ್ಷ್ಮಿ'ಗೆ ಅರ್ಜಿ ಸಲ್ಲಿಸುವುದು ಹೇಗೆ?
ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಅವರು ಸೇವಾ ಸಿಂಧು ಪೋರ್ಟಲ್, ಬೆಂಗಳೂರು ಒನ್, ಕರ್ನಾಟಕ ಒನ್ ಸೇರಿದಂತೆ ಗ್ರಾಮ ಒನ್‌ಗಳ ಕೇಂದ್ರಗಳಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಹಾಗೂ ಅರ್ಜಿದಾರರು ತಮ್ಮ & ಪತಿಯ ಆಧಾರ್ ಕಾರ್ಡ್ ಒದಗಿಸಬೇಕು. ಯಾವುದೇ ಅನುಮಾನವಿದ್ದಲ್ಲಿ 1902 ಸಹಾಯವಾಣಿಯ ಸಂಖ್ಯೆಗೆ ಕರೆ ಮಾಡಬಹುದು ಎಂದು ರಾಜ್ಯಸರ್ಕಾರ ತಿಳಿಸಿದೆ. ಇನ್ನೊಂದು ಪ್ರಮುಖವಾದ ವಿಚಾರವೆಂದರೆ ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ ಇರುವುದಿಲ್ಲ. ಅರ್ಜಿಗಳನ್ನು ಸ್ವೀಕರಿಸುವ ಪ್ರಕ್ರಿಯೆಯು ವರ್ಷಪೂರ್ತಿ ಇರುತ್ತದೆ ಎಂದು ಸರ್ಕಾರ ತಿಳಿಸಿದೆ.

ಯೋಜನೆ ಜಾರಿಗೆ ಬರೋದು ಯಾವಾಗ?
'ಗೃಹಲಕ್ಷ್ಮಿ' ಯೋಜನೆಯಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕ 30 ಸಾವಿರ ಕೋಟಿ ರೂಪಾಯಿ ವೆಚ್ಚವಾಗುವ ನಿರೀಕ್ಷೆ ಇದೆ. ಆಗಸ್ಟ್ 18 ರಂದು ಸಿದ್ದರಾಮಯ್ಯ ಹುಬ್ಬಳ್ಳಿ ಅಥವಾ ಬೆಳಗಾವಿ ನಗರಗಳಲ್ಲಿ ಯೋಜನೆಗೆ ಚಾಲನೆ ನೀಡುವ ನಿರೀಕ್ಷೆ ಇದೆ. ಈ ಮೂಲಕ ಚುನಾವಣೆ ಮುನ್ನ ಕಾಂಗ್ರೆಸ್ ಘೋಷಿಸಿದ್ದ 5 ಗ್ಯಾರಂಟಿಗಳ ಪೈಕಿ ಪ್ರಮುಖ ಗ್ಯಾರಂಟಿ ಯೋಜನೆ ಗೃಹಲಕ್ಷ್ಮಿಗೆ ಮುಹೂರ್ತ ಫಿಕ್ಸ್ ಆಗಿದೆ. ಅಲ್ಲದೆ ದೇಶದಲ್ಲೇ ಈ ಯೋಜನೆ ಅತಿದೊಡ್ಡ ಆರ್ಥಿಕ ಭದ್ರತಾ ಯೋಜನೆ ಎನಿಸಿಕೊಳ್ಳಲಿದೆ. ಪ್ರಮುಖವಾಗಿ ಮಧ್ಯಮ ಹಾಗೂ ಬಡವರ್ಗ ಸೇರಿ ಯೋಜನೆ ಅಗತ್ಯ ಇರುವ ಮಹಿಳೆಯರಿಗೆ ಗೃಹಲಕ್ಷ್ಮಿ ಆರ್ಥಿಕ ಸ್ವಾತಂತ್ರ್ಯ ನೀಡುವ ನಿರೀಕ್ಷೆ ಇದೆ.
ಯಾರಿಗೆಲ್ಲಾ ಗೃಹಲಕ್ಷ್ಮಿ ಅನ್ವಯ ಆಗುತ್ತೆ?
ಗೃಹಲಕ್ಷ್ಮಿ ಯೋಜನೆಗೆ ಬೆಂಗಳೂರು ಒನ್ ಅಥವಾ ಆ್ಯಪ್ ಮೂಲಕ ಅರ್ಜಿ ಸಲ್ಲಿಸಬಹುದು. ಆದರೆ ಸರ್ಕಾರದಿಂದ 'ಆ್ಯಪ್' ಇನ್ನೂ ಬಿಡುಗಡೆಗೆ ಮಾಡಿಲ್ಲ. ಹಾಗೇ ಅರ್ಜಿ ಸಲ್ಲಿಸಲು ಬ್ಯಾಂಕ್ ಖಾತೆಯೊಂದಿಗೆ ಮೊಬೈಲ್ ನಂ. ಲಿಂಕ್ ಆಗಿರಬೇಕು. BPL, APL, ಅಂತ್ಯೋದಯ ಕಾರ್ಡ್‌ನಲ್ಲಿ ಮನೆ ಯಜಮಾನಿಯ ಹೆಸರು ಇರಬೇಕು. ಒಂದು ಮನೆಯಲ್ಲಿ ಒಬ್ಬರಿಗೆ ಮಾತ್ರ ಯೋಜನೆ ಅನ್ವಯ. ಯಜಮಾನಿಯ ಮೊಬೈಲ್ ನಂಬರ್ ಕಡ್ಡಾಯವಾಗಿ ನೀಡಬೇಕಾಗುತ್ತೆ. ಹಾಗೇ ಯಜಮಾನಿ ಅಥವಾ ಪತಿ ಆದಾಯ ತೆರಿಗೆ ಪಾವತಿ ಮಾಡುವವರಾಗಿರಬಾರದು. ಹೀಗೆ ಇದ್ದಲ್ಲಿ ಅವರಿಗೆ ಯೋಜನೆ ಅನ್ವಯ ಆಗುವುದಿಲ್ಲ. ಹಾಗೇ ಮನೆ ಒಡತಿಯ ಯಜಮಾನ ಜಿಎಸ್ಟಿ ರಿರ್ಟನ್ಸ್ ಮಾಡಿರಬಾರದು ಎಂಬ ನಿಯಮಗಳನ್ನ ರಾಜ್ಯ ಸರ್ಕಾರ ತಿಳಿಸಿದೆ.
ಫೋನ್‌ನಲ್ಲಿ ಬ್ಯಾಂಕ್ ಮಾಹಿತಿ ಕೇಳಿದರೆ ಕೊಡಬೇಡಿ!
ಒಟ್ನಲ್ಲಿ ಮೋಸ ಹೋಗುವವರು ಇರೋ ತನಕ ಮೋಸ ಮಾಡುವವರು ಕೂಡ ಇರ್ತಾರೆ. ಹೀಗಾಗಿ ನಕಲಿ ಅಥವಾ ಫೇಕ್ ಅಪ್ಲಿಕೇಷನ್‌ಗಳ ಬಗ್ಗೆ ಎಚ್ಚರಿಕೆಯಿಂದ ಇರಿ. ಅನಾವಶ್ಯಕ ಕರೆ ಸ್ವೀಕರಿಸದಿರಿ. ಅಲ್ಲದೆ ನಿಮಗೆ ಬರುವ ವಾಟ್ಸಾಪ್ ಅಥವಾ ಟೆಲಿಗ್ರಾಂ ಮೆಸೇಜ್‌ನ ಸೂಕ್ಷ್ಮವಾಗಿ ಗಮನಿಸಿ. ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಎಂದು ನಕಲಿ ಲಿಂಕ್ ಹಾಕಿರುವ ಸಾಧ್ಯತೆ ಹೆಚ್ಚು. ಹೀಗಾಗಿ ಇಂತಹ ಯಾವುದೇ ಸಂದೇಶ ನಂಬಬೇಡಿ. ಸರ್ಕಾರ ಸೂಚಿಸಿದ ಹಾಗೇ ಅಧಿಕೃತ ಸಂಸ್ಥೆಗಳಿಗೆ ತೆರಳಿ ಅರ್ಜಿ ಸಲ್ಲಿಸಿ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ ಎಂದು ಸರ್ಕಾರ ಹೇಳಿದೆ. ಅಕಸ್ಮಾತ್ ಈ ರೀತಿ ಹಣ ಕೇಳುವ ಘಟನೆ ನಡೆದರೆ ಸರ್ಕಾರ ಅಥವಾ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತನ್ನಿ.












Click it and Unblock the Notifications