Karnataka Budget 2023: ಇಂದು ಬಜೆಟ್ ಮಂಡನೆ- ಕಾಂಗ್ರೆಸ್ ಗ್ಯಾರಂಟಿಗಳಿಗೆ ಸಿಗುತ್ತಾ ಗ್ಯಾರಂಟಿ?
ಬೆಂಗಳೂರು ಜುಲೈ 7: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ ಇಂದು 14ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಬಜೆಟ್‌ನಲ್ಲಿ ಚುನಾವಣೆಗೂ ಮುನ್ನ ಘೋಷಿಸಿದ ಪಂಚ ಗ್ಯಾರಂಟಿಗಳಿಗೆ ಅನುದಾನ ಹಂಚಿಕೆ ಮಾಡುವ ನಿರೀಕ್ಷೆ ಇದೆ. ಮುಂಬರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಬಜೆಟ್ ಮಂಡನೆ ಮಾಡಬೇಕಾಗಿರುವುದರಿಂದ ಎಲ್ಲರ ಚಿತ್ತ ಬಜೆಟ್‌ನತ್ತ ನೆಟ್ಟಿದೆ.
ಕಾಂಗ್ರೆಸ್ ಕೊಟ್ಟ ಗ್ಯಾರಂಟಿಗಳಿಗೆ ಅದೆಷ್ಟು ಗ್ಯಾರಂಟಿ ಸಿಗಲಿದೆ ಎನ್ನುವುದು ಈ ಬಜೆಟ್ ಮೂಲಕ ಅರ್ಥವಾಗಲಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಹೊರಡಿಸುತ್ತಿರುವ ಬಜೆಟ್ ಬಹುದೊಡ್ಡ ಸವಾಲಾಗಿದೆ. ಜನರ ನಿರೀಕ್ಷೆಗಳಿಗೆ ಅನುಗುಣವಾಗಿ ಬಜೆಟ್ ಮಂಡನೆ ಮಾಡಬೇಕಿದೆ. ಇದರೊಂದಿಗೆ ಕಾಂಗ್ರೆಸ್ ನ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ಸರ್ಕಾರ ಹೇಗೆ ಸಂಪನ್ಮೂಲಗಳನ್ನು ಕ್ರೋಢೀಕರಿಸುತ್ತದೆ, ಹೆಚ್ಚುವರಿ ಅನುದಾನವನ್ನು ಯಾವ ರೀತಿ ಬಿಡುಗಡೆ ಮಾಡುತ್ತದೆ ಎಂಬುದೇ ಎಲ್ಲರ ಕುತೂಹಲವಾಗಿದೆ.

ಈಗಾಗಲೇ ಬಜೆಟ್‌ನ ವೆಚ್ಚ 3.39 ಲಕ್ಷ ಕೋಟಿ ರೂಪಾಯಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವರ್ಷದ ಫೆಬ್ರವರಿಯಲ್ಲಿ 3.09 ಲಕ್ಷ ಕೋಟಿ ರೂ.ಗಳ ಪೂರಕ ಬಜೆಟ್ ಮಂಡಿಸಿದ್ದರು. ಕಾಂಗ್ರೆಸ್ ಸರ್ಕಾರ ಜನತೆಗೆ ನೀಡಿರುವ ಆಶ್ವಾಸನೆಗಳನ್ನು ಜಾರಿಗೆ ತರಲು ವರ್ಷಕ್ಕೆ 59 ಸಾವಿರ ಕೋಟಿ ರೂಪಾಯಿ ಅನುದಾನ ಮೀಸಲಿಡಬೇಕಾಗುತ್ತದೆ. ಹೀಗಾಗಿ ಯಾವ ಯೋಜನೆಗಳಿಗೆ ಎಷ್ಟು ಅನುದಾನ ಸಿಗಲಿದೆ? ಎನ್ನುವ ನಿರೀಕ್ಷೆ ಹುಟ್ಟಿದೆ.
ಇನ್ನೂ ಸಾಕಷ್ಟು ಕುತೂಹಲ ಕೆರಳಿಸಿದ್ದ ಐದು ಗ್ಯಾರಂಟಿಗಳ ಘೋಷಣೆ ಕಾಂಗ್ರೆಸ್ ಪಾಲಿಗೆ ಮುಂದಿನ ಚುನಾವಣೆಯಲ್ಲಿ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ. ಮಹಿಳೆಯರಿಗೆ ಬಸ್ ಟಿಕೆಟ್ ಉಚಿತ ಘೋಷಣೆ ಮಾಡುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಮುಂದಿನ ಲೋಕಸಭಾ ಚುನಾವಣೆಯ ಅಖಾಡಕ್ಕೆ ಇಳಿಯಲು ಕಾಂಗ್ರೆಸ್ ನಾಯಕರು ಸಜ್ಜಾಗುತ್ತಿದ್ದಾರೆ.
ಸದ್ಯ ಬಜೆಟ್‌ನಲ್ಲೂ ಗ್ಯಾರಂಟಿಗಳಿಗೆ ಅನುದಾನ ನಿರೀಕ್ಷೆಯಂತೆ ಮೀಸಲಿಟ್ಟಿದ್ದೇ ಆದರೆ ಕಾಂಗ್ರೆಸ್ ಪಾಲಿಗೆ ಮುಂದಿನ ಲೋಕಸಭೆ ಚುನಾವಣೆ ಅಮೃತವಾದರೂ ಆಶ್ಚರ್ಯವಿಲ್ಲ. ಯಾಕೆಂದರೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳು ದೊಡ್ಡ ಮಟ್ಟದಲ್ಲಿ ಲಾಭವನ್ನು ತಂದುಕೊಟ್ಟಿದ್ದವು. 135 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಪ್ರಧಾನಿ ಮೋದಿ ಸರಣಿ ರೋಡ್ ಶೋಗಳನ್ನು ನಡೆಸಿದ್ದರೂ ಅದು ದೊಡ್ಡ ಮಟ್ಟದಲ್ಲಿ ಪ್ರಭಾವವನ್ನು ಬೀರಿಲ್ಲ. ಸರ್ಕಾರ ಬಂದ ಬೆನ್ನಲ್ಲೇ ಐದು ಗ್ಯಾರಂಟಿ ಘೋಷಣೆಗಳನ್ನು ಜಾರಿಗೊಳಿಸಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದಿವೆ.
ಹೀಗಾಗಿ ಸಿದ್ದರಾಮಯ್ಯ ಇಂದು ಮಂಡಿಸಲಿರುವ ಬಜೆಟ್ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. ವರದಿಗಳ ಪ್ರಕಾರ, ಕಾಂಗ್ರೆಸ್‌ನ ಯೋಜನೆಗಳಿಗೆ ಹಣವನ್ನು ಮುಕ್ತಗೊಳಿಸಲು ಮುಖ್ಯಮಂತ್ರಿಗಳು ಇತರ ಅನುದಾನ ಹಂಚಿಕೆಯನ್ನು ಕಡಿಮೆ ಮಾಡಬಹುದು ಅಥವಾ ಕೆಲವು ಯೋಜನೆಗಳನ್ನು ಅಸ್ತಿತ್ವದಲ್ಲಿರುವ ಅಥವಾ ಹೊಸ ಯೋಜನೆಗಳೊಂದಿಗೆ ವಿಲೀನಗೊಳಿಸಬಹುದು ಎನ್ನಲಾಗಿದೆ. ಕ್ಷೇತ್ರವಾರು ಹಂಚಿಕೆ ಮಾಡಿದ ಹಿಂದಿನ ಸರ್ಕಾರಗಳಿಗಿಂತ ಭಿನ್ನವಾಗಿ, ಸಿದ್ದರಾಮಯ್ಯ ಅವರು ಇಲಾಖಾವಾರು ಹಣ ಮಂಜೂರು ಮಾಡುವ ಸಾಧ್ಯತೆಯಿದೆ.
ಗೃಹ ಲಕ್ಷ್ಮೀ, ಗೃಹ ಜ್ಯೋತಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆಗಳನ್ನು ಜಾರಿಗೆ ತಂದಿದೆ. ಕಾಂಗ್ರೆಸ್ನ ಈ ಪಂಚ ಗ್ಯಾರಂಟಿಗಳಿಗೆ ಅನುದಾನ ಮೀಸಲಿಡಬೇಕಾಗಿದೆ. ಇದರ ನಡುವೆ ಅನೇಕ ಸರ್ಕಾರದ ಯೋಜನಗಳಿಗೂ ಪೂರಕವಚಾಗಿ ಬಜೆಟ್ ಮಂಡಿಸಬೇಕಿದೆ. ಹೀಗಾಗಿ ಈ ಬಾರಿ ಸಿಎಂ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್ ನಿರೀಕ್ಷೆಗಳಿಗೆ ಪೂರಕವಾಗಿರುತ್ತಾ? ಇಲ್ವಾ? ಅನ್ನೋದನ್ನು ಕಾದು ನೋಡಬೇಕಿದೆ.












Click it and Unblock the Notifications