ಕಾಂಗ್ರೆಸ್ ಸೇರಲು ಮುಂದಾದ ಬಿಜೆಪಿ ಶಾಸಕರು: ಕೈಕಟ್ಟಿ ಕುಳಿತ ಜೋಶಿ, ಡಲ್ ಹೊಡೆದ ಬಿಎಸ್‌ವೈ, ಏನನ್ನೋ ಯೋಚಿಸುತ್ತಿರುವ ಬೊಮ್ಮಾಯಿ
ಬೆಂಗಳೂರು, ಆಗಸ್ಟ್ 21: 2019ರಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಗೊಂಡ ಕೆಲ ಶಾಸಕರು ಮತ್ತೆ ಕಾಂಗ್ರೆಸ್‌ಗೆ ಸೇರಿಕೊಳ್ಳುವ ವದಂತಿಗಳು ದಟ್ಟವಾಗುತ್ತಿವೆ. ಯಶವಂತಪುರ ಶಾಸಕ ಎಸ್‌ಟಿ ಸೋಮಶೇಖರ್, ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್, ಕೆಆರ್ ಪುರದ ಶಾಸಕ ಬೈರತಿ ಬಸವರಾಜ್ ಸೇರಿದಂತೆ ಕೆಲ ನಾಯಕರು ಕಾಂಗ್ರೆಸ್ ಸೇರಲಿದ್ದಾರೆ ಎಂದು ವರದಿಯಾಗಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರು ವಿಚಲಿತರಾಗಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.
2019ರಲ್ಲಿ ಯಡಿಯೂರಪ್ಪ ನಾಯಕತ್ವದಲ್ಲಿ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಈ ಶಾಸಕರನ್ನು ಪಕ್ಷವನ್ನು ತೊರೆಯದಂತೆ ನೋಡಿಕೊಳ್ಳಲು ಹೈಕಮಾಂಡ್ ಮತ್ತೆ ಯಡಿಯೂರಪ್ಪ ಅವರಿಗೆ ಜವಾಬ್ದಾರಿ ಹೊರಿಸಿದೆ ಎಂದು ಹೇಳಲಾಗುತ್ತಿದೆ.

ಒಂದು ವೇಳೆ 17 ಶಾಸಕರಲ್ಲಿ ಕೆಲವರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರೆ, 2024ರ ಲೋಕಸಭೆ ಚುನಾವಣೆಯಲ್ಲಿ ಸುಮಾರು 15 ಸ್ಥಾನಗಳ ಮೇಲೆ ಪರಿಣಾಮ ಬೀರಬಹುದು ಎಂದು ರಾಜಕೀಯ ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.
2019ರಲ್ಲಿ ರಾಜ್ಯದಲ್ಲಿ ಗೆದ್ದಿದ್ದ 28 ಸ್ಥಾನಗಳನ್ನು ಉಳಿಸಿಕೊಳ್ಳಲು ಬಿಜೆಪಿಗೆ ಅಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಯಡಿಯೂರಪ್ಪ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಲವು ಬಂಡಾಯ ಶಾಸಕರು ( ಹಳೇ ಮೈಸೂರು ಭಾಗದವರು ) ಯಡಿಯೂರಪ್ಪ ಅವರ ಮಾತಿಗೆ ಬೆಲೆ ಕೊಡುತ್ತಿಲ್ಲವೆಂದು ತಿಳಿದುಬಂದಿದೆ. ಇದನ್ನು ಅರಿತಿರಿರುವ ಹೈಕಮಾಂಡ್ ಸಿಟಿ ರವಿ, ಶೋಭಾ ಕರಂದ್ಲಾಜೆ, ಡಿವಿ ಸದಾನಂದಗೌಡ ಸೇರಿದಂತೆ ಒಕ್ಕಲಿಗ ಸಮುದಾಯದ ಇತರ ರಾಜ್ಯ ನಾಯಕರಿಗೆ ಶಾಸಕರನ್ನು ತಡೆಹಿಡಿಯುವ ಟಾಸ್ಕ್ ನೀಡಿದೆ.

ಕಾಂಗ್ರೆಸ್ ಸೇರಲು ಮನಸ್ಸು ಮಾಡಿರುವ ( ಒಕ್ಕಲಿಗರೂ ಆದ ) ಯಶವಂತಪುರ ಶಾಸಕ ಎಸ್‌ಟಿ ಸೋಮಶೇಖರ್ ಅವರನ್ನು ಸಮಾಧಾನಪಡಿಸಲು ಯತ್ನಿಸಲಾಗುತ್ತಿದೆ.
ಯಶವಂತಪುರದ ಸ್ಥಳೀಯ ಬಿಜೆಪಿ ನಾಯಕರು ತಮ್ಮ ವಿರುದ್ಧ ಕೆಲಸ ಮಾಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಲು ತಂತ್ರ ರೂಪಿಸಿದ್ದರು ಎಂದು ಸೋಮಶೇಖರ್ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ಕಾರ್ಯಕರ್ತರಾದ ಸಿಎಂ ಮಾರೇಗೌಡ ಮತ್ತು ಧನಂಜಯ ಅವರನ್ನು ಬಿಜೆಪಿ ಅಮಾನತುಗೊಳಿಸಿದೆ. ಇದೂ ಸಹ ಸೋಮಶೇಖರ್ ಅವರ ಮನವೊಲಿಸುವ ಕೊನೆಯ ಪ್ರಯತ್ನವಾಗಿದೆ ಎಂದು ಹೇಳಲಾಗುತ್ತಿದೆ.
ಇಷ್ಟೆಲ್ಲಾ ಆದರೂ, ಸೋಮಶೇಖರ್ ಅವರು ಭಾನುವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಕಾಂಗ್ರೆಸ್ ಸೇರ್ಪಡೆ ಕುರಿತು ತಮ್ಮ ಬೆಂಬಲಿಗರ ಅಭಿಪ್ರಾಯವನ್ನು ಸಂಗ್ರಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕೆಆರ್ ಪುರಂ ಶಾಸಕ ಬೈರತಿ ಬಸವರಾಜು ಅವರು ಇತ್ತೀಚೆಗೆ ಯಡಿಯೂರಪ್ಪ ಕರೆದಿದ್ದ ಸಭೆಗೆ ಹಾಜರಾಗಲಿಲ್ಲ. ಅವರು ಬಿಜೆಪಿ ತೊರೆಯಬಹುದು ಎಂಬ ವದಂತಿ ಮತ್ತೆ ಮನ್ನೆಲೆಗೆ ಬಂದಿವೆ.

ಈ ನಾಯಕರಿಗೆ ಈಗ ಯಡಿಯೂರಪ್ಪನವರ ಮಾತುಗಳು ಬೇಕಿಲ್ಲ. ಅವರ ಮಾತುಗಳನ್ನು ಕೇಳಲು ಯಾವುದೇ ಕಾರಣವಿಲ್ಲ. ಈ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಗುರುತಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಅವರೆಲ್ಲರೂ ಅವಕಾಶವಾದಿಗಳಾಗಿದ್ದಾರೆ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.
ಉತ್ಸಾಹ ಕಳೆದುಕೊಂಡ ಬಿಜೆಪಿ ನಾಯಕರು
ಈ ಮಹತ್ವದ ಬೆಳವಣಿಗೆಗಳು ಕುರಿತು ಚರ್ಚಿಸಲು ಬಿಜೆಪಿ ನಾಯಕರು ಬೆಂಗಳೂರಿನ ಕಚೇರಿಯಲ್ಲಿ ಸಭೆ ಸೇರಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೊಗಳನ್ನು ಕರ್ನಾಟಕ ಬಿಜೆಪಿ ಘಟಕ ಶೇರ್ ಮಾಡಿಕೊಂಡಿದೆ. ಈ ಫೋಟೊದಲ್ಲಿ ನಾಯಕರು ವಿಚಲಿತರಾಗಿರುವುದು ಹಾಗೂ ಉತ್ಸಾಹವನ್ನು ಕಳೆದುಕೊಂಡಿರುವುದು ಕಂಡುಬರುತ್ತದೆ.
'ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ರಾಜ್ಯ ಕೋರ್ ಕಮಿಟಿ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ನಳೀನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿಎಸ್ ಯಡಿಯೂರಪ್ಪ, ಶ್ರೀ ಬಸವರಾಜ ಬೊಮ್ಮಾಯಿ, ಶ್ರೀ ಡಿವಿ ಸದಾನಂದಗೌಡ, ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ, ಮಾಜಿ ಸಚಿವರಾದ ಶ್ರೀ ಕೆಎಸ್ ಈಶ್ವರಪ್ಪ, ಶ್ರೀ ಗೋವಿಂದ ಕಾರಜೋಳ, ಶ್ರೀ ಸಿಟಿ ರವಿ, ಶ್ರೀ ಆರ್ ಅಶೋಕ್, ಶ್ರೀ ಅಶ್ವತ್ಥನಾರಾಯಣ, ಶ್ರೀ ರಾಮುಲು ಉಪಸ್ಥಿತರಿದ್ದರು' ಎಂದು ಬಿಜೆಪಿ ಟ್ವೀಟಿಸಿದೆ.












Click it and Unblock the Notifications