ಎಸ್‌ಐಟಿಯಿಂದ ರೋಷನ್ ಬೇಗ್ ವಶ: ಬೆಂಬಲಕ್ಕೆ ನಿಂತ ರಾಜ್ಯ ಬಿಜೆಪಿ
ಬೆಂಗಳೂರು, ಜುಲೈ 16: ವರ್ಷದ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ರೋಷನ್ ಬೇಗ್ ವಿರುದ್ಧ ಪುಂಖಾನುಪುಂಖವಾಗಿ ಆರೋಪಗಳನ್ನು ಮಾಡಿದ್ದ ರಾಜ್ಯ ಬಿಜೆಪಿ ಈಗ ಹಠಾತ್ತನೆ ರೋಷನ್ ಬೇಗ್ ಅವರ ಪರವಾಗಿ ನಿಂತಿದೆ.
ನಿನ್ನೆ ರಾತ್ರಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೋಷನ್ ಬೇಗ್ ಅವರನ್ನು ಎಸ್‌ಐಟಿಯು ವಶಪಡಿಸಿಕೊಂಡಿರುವುದನ್ನು ರಾಜ್ಯ ಬಿಜೆಪಿ ಖಂಡಿಸಿದೆ. ಕುಮಾರಸ್ವಾಮಿ ಅವರು ಪೊಲೀಸ್ ಬಲವ್ನು ರಾಜಕೀಯದ ಕಾರಣಕ್ಕೆ ಬಳಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಐಎಂಎ ಹಗರಣದ ಆರೋಪಿ ಆಗಿರುವ ರೋಷನ್ ಬೇಗ್ ಅವರಿಗೆ ವಿಚಾರಣೆಗೆ ಹಾಜರಾಗಲು ಎಸ್‌ಐಟಿಯು ಜುಲೈ 19 ರ ವರೆಗೆ ಕಾಲಾವಕಾಶ ನೀಡಿದೆ ಆದರೂ ಸಹ ನಿನ್ನೆಯೇ ಉದ್ದೇಶಪೂರ್ವಕವಾಗಿ ರೋಷನ್ ಬೇಗ್ ಅವರನ್ನು ಬಲವಂತದಿಂದ ವಶಕ್ಕೆ ಪಡೆಯಲಾಗಿದೆ ಎಂದು ಬಿಜೆಪಿ ಆರೋಪಿಸಿದ್ದು, ಎಸ್‌ಐಟಿಯು ರೋಷನ್ ಬೇಗ್ ಅವರಿಗೆ ಬರೆದಿರುವ ಪತ್ರದ ಪ್ರತಿಯನ್ನು ಲಗತ್ತಿಸಿ ಟ್ವೀಟ್ ಮಾಡಿದೆ.

ರೋಷನ್ ಬೇಗ್ ಅವರ ಜೊತೆಗೆ ಬಿಎಸ್‌ವೈ ಆಪ್ತ ಸಂತೋಷ್ ಅವರು ಇದ್ದರು ಎಂಬ ಕುಮಾರಸ್ವಾಮಿ ಅವರ ಆರೋಪವನ್ನು ಬಿಜೆಪಿ ತಳ್ಳಿ ಹಾಕಿದ್ದು, ರೋಷನ್ ಬೇಗ್ ಒಬ್ಬರೇ ಚಾರ್ಟೆಡ್ ಫ್ಲೈಟ್‌ನಲ್ಲಿ ಪ್ರಯಾಣ ಬೆಳೆಸಿದ್ದರು, ಎರಡನೇಯ ಪ್ರಯಾಣಿಕರು ಯಾರೂ ಇರಲಿಲ್ಲ ಎಂದು ಬಿಜೆಪಿ ಹೇಳಿದೆ.
ಸಿಎಂ ಕುಮಾರಸ್ವಾಮಿ ಅವರು ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ, ರಾಜ್ಯದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಬೋರ್ಡಿಂಗ್ ಪಾಸ್‌ಗಳನ್ನು ತಪಾಸಣೆ ಮಾಡಲಿ ಎಂದು ನಾವು ಒತ್ತಾಯಿಸುತ್ತೇವೆ ಎಂದು ಬಿಜೆಪಿ ಹೇಳಿದೆ.












Click it and Unblock the Notifications