ಭಿನ್ನಮತ ಶಮನಕ್ಕೆ ವಿಜಯೇಂದ್ರ ಯತ್ನ: ರಮೇಶ್ ಜಾರಕಿಹೊಳಿ ಮನೆಯಲ್ಲಿ 30 ನಿಮಿಷಗಳ ಕಾಲ ಚರ್ಚೆಯಾಗಿದ್ದೇನು?
ಬೆಂಗಳೂರು, ನವೆಂಬರ್ 23: ವಿಧಾನಸಭಾ ಚುನಾವಣಾ ಫಲಿತಾಂಶ ಬಂದು ಆರು ತಿಂಗಳ ಬಳಿಕ ಬಿಜೆಪಿ ಹೈಕಮಾಂಡ್ ಕರ್ನಾಟಕದ ಪ್ರತಿಪಕ್ಷ ನಾಯಕರನ್ನಾಗಿ ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ಅವರನ್ನ ಆಯ್ಕೆ ಮಾಡಿದ್ದು, ಉತ್ತರ ಕರ್ನಾಟಕ ಭಾಗ ಬಿಜೆಪಿ ನಾಯಕರು ಅಸಮಾಧಾನಕ್ಕೆ ಕಾರಣವಾಗಿದೆ.
ಹೌದು, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಕ್ಕೆ ಕಮಲ ಪಾಳಯದ ಹಲವು ನಾಯಕರು ಅಸಮಾಧಾನಗೊಂಡಿದ್ರು, ಅಲ್ಲದೇ ವಿಪಕ್ಷ ಸ್ಥಾನಕ್ಕಾಗಿ ಉತ್ತರ ಕರ್ನಾಟಕದ ಹಲವು ನಾಯಕರು ಬೇಡಿಕೆ ಇಟ್ಟಿದ್ದು, ಆರ್ ಅಶೋಕ್ ಅವರಿಗೆ ವಿಪಕ್ಷ ಸ್ಥಾನವನ್ನ ನೀಡಿದ್ದಕ್ಕೆ ಉತ್ತರ ಕರ್ನಾಟಕ ಭಾಗ ನಾಯಕರಾದ ರಮೇಶ್ ಜಾರಕಿಹೊಳಿ, ಅರವಿಂದ್ ಬೆಲ್ಲದ್, ಬಸವನಗೌಡ ಪಾಟೀಲ್ ಯತ್ನಾಳ್ ಪ್ರತ್ಯೇಕವಾಗಿ ಸಭೆ ನಡೆಸಿದ್ದು, ಬಿಜೆಪಿ ನಾಯಕರಿಗೆ ನಡುಕ ಹುಟ್ಟಿಸುವಂತೆ ಮಾಡಿತ್ತು.

ಇನ್ನೂ ಬಿಜೆಪಿ ಹಿರಿಯ ನಾಯಕರಲ್ಲಿನ ಅಸಮಾಧಾನವನ್ನ ಶಮನಗೊಳಿಸುವ ನಿಟ್ಟಿನಲ್ಲಿ ಬಿ ವೈ ವಿಜಯೇಂದ್ರ ಮುಂದಾಗಿದ್ದು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸದಾಶಿವನಗರದ ಅವರ ನಿವಾಸದಲ್ಲಿ ನೂತನ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಭೇಟಿಯಾಗಿ ಅಸಮಾಧಾನ ಶಮನಕ್ಕೆ ಮುಂದಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕನ ಆಯ್ಕೆ ಬಳಿಕ ಉತ್ತರ ಕರ್ನಾಟಕದ ಭಾಗದ ನಾಯಕರೆಲ್ಲಾ ಸಭೆ ಸೇರಿದ್ದು, ಮೌನಕ್ಕೆ ಜಾರಿದ್ರು. ಇನ್ನೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಆಗುವ ಹೊಡೆತದಿಂದಾಗಿ ವಿಜಯೇಂದ್ರ ಅವರು ಮಾಜಿ ಸಚಿವ ಹಾಗೂ ಉತ್ತರ ಕರ್ನಾಟಕ ಭಾಗದ ಪ್ರಭಾವಿ ನಾಯಕ ರಮೇಶ್ ಜಾರಕಿಹೊಳಿ ಅವರ ಜೊತೆಗೆ 30 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ.
ಈ ವೇಳೆ ರಮೇಶ್ ಜಾರಕಿಹೊಳಿ ಅವರು ವಿಜಯೇಂದ್ರ ಅವರ ಮುಂದೆ ಪಕ್ಷದ ಒಳಗೆ ಆಗುತ್ತಿರುವ ಹಲವು ವಿಚಾರಗಳನ್ನ ಚರ್ಚಿಸಿದ್ದು, ಕೆಲ ಪಕ್ಷದ ನಾಯಕರ ನಡೆಯ ಕುರಿತು ಸುದೀರ್ಘವಾಗಿ ಚರ್ಚಿಸಿದ್ದಾರೆ. ಇನ್ನೂ ಈ ವೇಳೆ ಪಕ್ಷದಲ್ಲಿನ ಸಮಸ್ಯೆಯನ್ನ ಬಗೆಹರಿಸುವುದಾಗಿ ನೂತನ ಬಿಜೆಪಿ ರಾಜ್ಯಾಧ್ಯಕ್ಷರವರು ಭರವಸೆಯನ್ನ ನೀಡಿದ್ದಾರೆ ಎನ್ನಲಾಗಿದೆ.

ಇನ್ನೂ ರಮೇಶ್ ಜಾರಕಿಹೊಳಿ ಜೊತೆಗೆ ಮಾತುಕತೆ ನಡೆಸಿದ ಬಳಿಕ ವಿಜಯೇಂದ್ರ ಮಾತನಾಡಿ, ಪಕ್ಷದ ಹಿರಿಯರು ಏನೇ ಹೇಳಿಕೆ ಕೊಟ್ಟರೂ ಅದನ್ನು ಗಂಭೀರವಾಗಿ ಪರಿಗಣಿಸುವೆ. ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವೆ. ಯಾರು ಏನೇ ಹೇಳಿಕೆ ಕೊಟ್ಟರೂ ಅದನ್ನು ಅಪಾರ್ಥ ಮಾಡಿಕೊಳ್ಳದೆ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗರಿಷ್ಠ ಸ್ಥಾನಗಳನ್ನು ಗೆಲ್ಲಲು ಒಟ್ಟಾಗಿ ಶ್ರಮಿಸೋಣ ಎಂದು ರಮೇಶ್ ಜಾರಕಿಹೊಳಿ ಅವರಿಗೆ ತಿಳಿಸಿದ್ದಾಗಿ ಹೇಳಿದರು. ರಮೇಶ್ ಜಾರಕಿಹೊಳಿ ಅವರ ನಡೆ ಬಗ್ಗೆ ಹಲವಾರು ರೀತಿಯ ಚರ್ಚೆಗಳು ನಡೆಯುತ್ತಿದ್ದವು. ಕೆಲವು ಸಂದರ್ಭದಲ್ಲಿ ಅವರು ಅಸಮಾಧಾನವನ್ನೂ ತೋಡಿಕೊಂಡಿದ್ದರು. ನಾನು ಬಿಜೆಪಿ ರಾಜ್ಯಾಧ್ಯಕ್ಷನಾದ ಮೇಲೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದರು. ದಿನನಿತ್ಯ ಇದನ್ನು ಹೇಳುತ್ತಿದ್ದೇನೆ ಎಂದು ತಿಳಿಸಿದರು.
ಇವತ್ತು ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಸುಮಾರು 30 ನಿಮಿಷ ಮಾತನಾಡಿದ್ದೇನೆ. ಕೆಲವು ನೋವುಗಳನ್ನೂ ತೋಡಿಕೊಂಡಿದ್ದಾರೆ ಎಂದರಲ್ಲದೆ, ರಾಷ್ಟ್ರೀಯ ನಾಯಕರು, ವರಿಷ್ಠರು ಕೊಟ್ಟ ಜವಾಬ್ದಾರಿ ನಿರ್ವಹಿಸುತ್ತೇನೆ. ಎಲ್ಲರೂ ಜೊತೆಯಾಗಿ ನರೇಂದ್ರ ಮೋದಿಜೀ ಅವರ ಕೈಯನ್ನು ಬಲಪಡಿಸುತ್ತೇವೆ ಎಂದು ಹೇಳಿದರು.
ನಾನೊಬ್ಬ ರಾಜ್ಯಾಧ್ಯಕ್ಷ. ನನ್ನ ಕೆಲಸ ಮಾತನಾಡಬೇಕು. ಕಾರ್ಯಕರ್ತನಾಗಿ, ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡುವ ಮೂಲಕ, ಸಂಘಟನೆಗೆ ಒತ್ತು ಕೊಡುವ ಮೂಲಕ, ಕಾರ್ಯಕರ್ತರಿಗೆ ಉತ್ಸಾಹ ತುಂಬುವ ಮೂಲಕ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನಗಳನ್ನು ಗೆದ್ದು ಅವರನ್ನು ದೆಹಲಿಗೆ ಕಳಿಸುವ ಮೂಲಕ ನಾನು ಕರ್ತವ್ಯ ನಿರ್ವಹಿಸುತ್ತೇನೆ ಎಂದು ಹೇಳಿದರು.
ಇನ್ನೂ ನಮ್ಮದು ರಾಷ್ಟ್ರೀಯ ಪಕ್ಷ. ರಾಷ್ಟ್ರೀಯ ನಾಯಕರು ಈ ಜವಾಬ್ದಾರಿ ನೀಡಿದ್ದಾರೆ. ಯಾರೇನೇ ಹೇಳಿದರೂ ಅದನ್ನು ಆಶೀರ್ವಾದ ಎಂದು ಭಾವಿಸಿ, ಎಲ್ಲರ ಮನವೊಲಿಸಿ ಅವರ ಸಹಕಾರದೊಂದಿಗೆ ಮುನ್ನಡೆಯುತ್ತೇನೆ ಎಂದು ತಿಳಿಸಿದರು.












Click it and Unblock the Notifications