ಕೊರಟಗೆರೆಯಲ್ಲಿ ಗೆದ್ದಾಗ ಇವಿಎಂ ಸರಿಯಾಗಿತ್ತಾ..? ಪರಮೇಶ್ವರ್ ಹೇಳಿಕೆಗೆ ಬಿಜೆಪಿ ಕೆಂಡ
ಚುನಾವಣೆಗಳಲ್ಲಿ ಇವಿಎಂ ಹ್ಯಾಕ್ ಆಗಿರುವ ಸಾಧ್ಯತೆ ಇದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ರಾಜ್ಯ ಬಿಜೆಪಿಯು ಪರಮೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದೆ. ಚುನಾವಣೆ ಸೋತ ನಂತರ ಆ ಸೋಲನ್ನು ಸ್ವೀಕರಿಸುವ ಮನೋಭಾವವನ್ನು ಇನ್ನೂ ಮೈಗೂಡಿಸಿಕೊಳ್ಳದ ಕಾರಣ ಕಾಂಗ್ರೆಸ್ ಪರಿಸ್ಥಿತಿ ಇಂದು ಹೀನಾಯವಾಗಿದೆ ಎಂದು ವ್ಯಂಗ್ಯ ಮಾಡಿದೆ.
ಕರ್ನಾಟಕ, ತೆಲಂಗಾಣ, ಜಾರ್ಖಂಡ್‌ನಲ್ಲಿ ಇವಿಎಂ ಸರಿಯಿದೆ. ಆದರೆ ಮಹಾರಾಷ್ಟ್ರದಲ್ಲಿ ಸರಿಯಿಲ್ಲ! ಇದು ಯಾವ ರೀತಿಯ ಲಾಜಿಕ್? ಎಂದು ಪ್ರಶ್ನೆ ಮುಂದಿಟ್ಟಿದೆ. ಇವಿಎಂ ಸುರಕ್ಷಿತ, ವಿಶ್ವಾಸಾರ್ಹ ಎಂದು ಸುಪ್ರೀಂ ಕೋರ್ಟ್‌ನಲ್ಲೂ ಸಾಬೀತಾಗಿದೆ. ಇವಿಎಂ ಹ್ಯಾಕ್ ಕುರಿತಂತೆ ಸಾಬೀತುಪಡಿಸಲು ಚುನಾವಣಾ ಆಯೋಗ ಮುಕ್ತ ಅವಕಾಶ ಕೊಟ್ಟಿತ್ತು. ಆಗ ಪರಮೇಶ್ವರ್ ಅವರೇ ಎಲ್ಲಿಗೆ ಹೋಗಿದ್ರಿ? ಎಂದು ಕೆಣಕಿದೆ.

ಕಳೆದ ಬಾರಿ ಕೊರಟಗೆರೆ ಕ್ಷೇತ್ರದಲ್ಲಿ ತಾವು ಗೆದ್ದಾಗ ಇವಿಎಂ ಕುರಿತು ಅನುಮಾನ ಬಂದಿಲ್ಲವೇ? ಆ ಗೆಲುವಿನ ಬಗ್ಗೆ ಅನುಮಾನವಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಸವಾಲ್ ಹಾಕಿದೆ.
ಸೋಲನ್ನು ಸ್ವೀಕರಿಸಿ ಎಂದ ಸುಧಾಕರ್
ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಗೃಹ ಸಚಿವ ಜಿ.ಪರಮೇಶ್ವರ್ ಅವರ ಹೇಳಿಕೆ ಸಂಬಂಧ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಕೂಡ ಮಾತನಾಡಿದ್ದಾರೆ. ಸೋಲಾಗಲಿ, ಗೆಲುವಾಗಲಿ, ಪ್ರಜಾಪ್ರಭುತ್ವದಲ್ಲಿ ಜನಾದೇಶವನ್ನು ಒಪ್ಪಿಕೊಳ್ಳಲೇಬೇಕು, ಜನಾದೇಶಕ್ಕೆ ತಲೆಬಾಗಲೇಬೇಕು ಎಂದು ಸಲಹೆ ನೀಡಿದ್ದಾರೆ.

ವಿಶ್ವದ ಅತ್ಯಂತ ಮುಂದುವರೆದ ದೇಶಗಳೇ ಇವತ್ತು ಭಾರತದ ಚುನಾವಣಾ ವ್ಯವಸ್ಥೆಯ ಪಾರದರ್ಶಕತೆ, ದಕ್ಷತೆಯನ್ನ ಕೊಂಡಾಡುತ್ತಿವೆ. ಕಾಂಗ್ರೆಸ್ ಪಕ್ಷ ಗೆದ್ದಾಗ ಬೀಗುವುದು, ಸೋತಾಗ ಮತಯಂತ್ರಗಳನ್ನು ದೂಷಣೆ ಮಾಡುವುದು ಜವಾಬ್ದಾರಿಯುತ ಸ್ಥಾನದಲ್ಲಿರುವ ಹಿರಿಯ ನಾಯಕರಿಗೆ ಶೋಭೆ ತರುವುದಿಲ್ಲ. ಕಾಂಗ್ರೆಸ್ ಪಕ್ಷ ತನ್ನ ವೈಫಲ್ಯವನ್ನ ಮುಚ್ಚಿಕೊಳ್ಳಲು ನಮ್ಮ ಚುನಾವಣಾ ವ್ಯವಸ್ಥೆಯನ್ನೇ ದೂರುವುದು ಸಂವಿಧಾನಕ್ಕೆ, ಪ್ರಜಾಪ್ರಭುತ್ವಕ್ಕೆ, ಮತದಾರರಿಗೆ ಮಾಡುವ ಅಪಮಾನ ಎಂದು ಖಂಡಿಸಿದ್ದಾರೆ.
ಪರಮೇಶ್ವರ್ ಹೇಳಿದ್ದೇನು?: ಮಹಾರಾಷ್ಟ್ರ ಚುನಾವಣೆಯಲ್ಲಿ ಇವಿಎಂ ಹ್ಯಾಕ್‌ನಿಂದಲೇ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಬೇಕಾಯಿತು. ಅಲ್ಲಿ ಕಾರ್ಯತಂತ್ರ ರೂಪಿಸುವುದರಲ್ಲಿಯೂ ನಾವು ವಿಫಲರಾಗಿದ್ದೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದರು.
ಮಹಾರಾಷ್ಟ್ರದಲ್ಲಿ ನಾವು ಈ ಬಾರಿ ಕಾಂಗ್ರೆಸ್ ಒಕ್ಕೂಟದ ಅಘಾಡಿ ಗೆಲುವು ಸಾಧಿಸುತ್ತದೆ ಎಂದು ನಿರೀಕ್ಷಿಸಿದ್ದೆವು. ಆದರೆ ಎಲ್ಲವೂ ಏರುಪೇರಾಗಿದೆ. ಅಲ್ಲಿ ಹಲವೆಡೆ ಇವಿಎಂ ಹ್ಯಾಕ್ ಮಾಡಿರುವ ಬಗ್ಗೆ ಚರ್ಚೆ ನಡೆದಿದೆ. ಆದರೆ ಜಾರ್ಖಂಡ್ ಚುನಾವಣೆಯಲ್ಲಿ ಯಾಕೆ ಈ ರೀತಿ ಆಗಲಿಲ್ಲ? ಎಂದು ಪ್ರಶ್ನಿಸಿದ್ದರು.
ಇವಿಎಂ ಮೇಲೆ ನಂಬಿಕೆ ಬರಲಿ ಎಂದು ಕೆಲವು ರಾಜ್ಯಗಳಲ್ಲಿ ಇವಿಎಂ ಹ್ಯಾಕ್ ಮಾಡೋದಿಲ್ಲ. ನನ್ನ ಪ್ರಕಾರ ಇವಿಎಂ ಹ್ಯಾಕ್‌ನಿಂದಲೇ ಮಹಾರಾಷ್ಟ್ರವನ್ನು ನಾವು ಕಳೆದುಕೊಂಡಿದ್ದೇವೆ ಎನಿಸುತ್ತಿದೆ. ಬಹುಶಃ ಇವಿಎಂ ವ್ಯವಸ್ಥೆ ಇರುವವರೆಗೆ ಬಿಜೆಪಿಯವರೇ ಗೆಲ್ಲುತ್ತಾರೆ ಅನಿಸುತ್ತೆ. ಈ ಕಾರಣಕ್ಕಾಗಿಯೇ ಬ್ಯಾಲೆಟ್ ಪೇಪರ್ ವ್ಯವಸ್ಥೆ ಬರಬೇಕು ಎಂದು ಮೊದಲಿನಿಂದಲೂ ಕೇಳಿಕೊಳ್ಳುತ್ತಿದ್ದೇವೆ ಎಂದು ಜಿ.ಪರಮೇಶ್ವರ್ ಹೇಳಿದ್ದರು.












Click it and Unblock the Notifications