ಸುಮಲತಾಗೆ ಕೊನೆ ಕ್ಷಣದಲ್ಲಿ ಶಾಕ್! ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ; ಯಾರಿಗೆ ಸಿಕ್ತು ಟಿಕೆಟ್?

ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿನ ದ್ವೈವಾರ್ಷಿಕ ಚುನಾವಣೆಗೆ ಭಾರತೀಯ ಜನತಾ ಪಾರ್ಟಿ ತಡರಾತ್ರಿ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಪಟ್ಟಿಯನ್ನು ಪ್ರಕಟಿಸಿದೆ. ನಿರೀಕ್ಷೆಯಂತೆ ಘಟಾನುಘಟಿ ನಾಯಕರಿಗೆ ಮಣೆಹಾಕುವ ಬದಲು, ಪಕ್ಷದ ನಿಷ್ಠಾವಂತ ಮತ್ತು ತಳಮಟ್ಟದ ಕಾರ್ಯಕರ್ತರಿಗೆ ಹೈಕಮಾಂಡ್ ಮಣೆಹಾಕಿದೆ. ಈ ಮೂಲಕ ಹಲವು ದಿನಗಳಿಂದ ತೀವ್ರ ಕುತೂಹಲ ಕೆರಳಿಸಿದ್ದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ತೆರೆ ಬಿದ್ದಿದೆ.

ರಾಜ್ಯಸಭೆಯ ಒಂದು ಸ್ಥಾನಕ್ಕೆ ಬಿಜೆಪಿಯ ಮಾಜಿ ರಾಜ್ಯ ಉಪಾಧ್ಯಕ್ಷ ಹಾಗೂ ಹುಬ್ಬಳ್ಳಿ-ಧಾರವಾಡ ಮೂಲದ ಪ್ರೊ. ಎಂ. ನಾಗರಾಜ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಇನ್ನು ವಿಧಾನ ಪರಿಷತ್ತಿನ (ಎಂಎಲ್‌ಸಿ) ಎರಡು ಸ್ಥಾನಗಳಿಗೆ ಪಕ್ಷದ ಶಿಸ್ತು ಸಮಿತಿಯ ಮಾಜಿ ಉಪಾಧ್ಯಕ್ಷ ಲಿಂಗರಾಜು ಪಾಟೀಲ್ ಹಾಗೂ ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ ಅವರನ್ನು ಅಧಿಕೃತ ಅಭ್ಯರ್ಥಿಗಳನ್ನಾಗಿ ಘೋಷಣೆ ಮಾಡಲಾಗಿದೆ.

BJP Rajya Sabha Candidate

ಸುಮಲತಾ ಅಂಬರೀಶ್‌ಗೆ ಮತ್ತೆ ಭ್ರಮನಿರಸನ!

ರಾಜ್ಯಸಭಾ ಟಿಕೆಟ್ ಘೋಷಣೆಯ ಬೆನ್ನಲ್ಲೇ ಮಂಡ್ಯದ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಮತ್ತೆ ತೀವ್ರ ಭ್ರಮನಿರಸನವಾಗಿದೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಂಡ್ಯ ಕ್ಷೇತ್ರವನ್ನು ಮೈತ್ರಿ ಪಕ್ಷ ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದ ಸುಮಲತಾ, ಪಕ್ಷದ ಹೈಕಮಾಂಡ್ ಸೂಚನೆಯ ಮೇರೆಗೆ ಬಿಜೆಪಿ ಸೇರ್ಪಡೆಯಾಗಿದ್ದರು. ಅಂದು ಅವರಿಗೆ ರಾಜ್ಯಸಭೆ ಅಥವಾ ವಿಧಾನ ಪರಿಷತ್ ಸ್ಥಾನದ ಭರವಸೆ ನೀಡಲಾಗಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯ ಘಟಕದಿಂದ ರಾಜ್ಯಸಭಾ ಚುನಾವಣೆಗೆ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಮಾಜಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ಹಾಗೂ ಸುಮಲತಾ ಅಂಬರೀಶ್ ಅವರ ಹೆಸರುಗಳನ್ನು ಶಿಫಾರಸು ಮಾಡಿ ಕಳುಹಿಸಲಾಗಿತ್ತು. ಆದರೆ, ಅಂತಿಮವಾಗಿ ವರಿಷ್ಠರು ಸುಮಲತಾ ಅವರನ್ನು ಕಡೆಗಣಿಸಿ ಪ್ರೊ. ನಾಗರಾಜ್ ಅವರಿಗೆ ಟಿಕೆಟ್ ನೀಡಿದ್ದಾರೆ.

ಯಾರು ಈ ಪ್ರೊ. ಎಂ. ನಾಗರಾಜ್?

ರಾಜ್ಯಸಭೆಗೆ ದಿಢೀರ್ ಎಂಟ್ರಿ ಕೊಟ್ಟಿರುವ ಪ್ರೊ. ಎಂ. ನಾಗರಾಜ್ ಅವರು ಹುಬ್ಬಳ್ಳಿ-ಧಾರವಾಡ ಭಾಗದ ಪ್ರಮುಖ ನಾಯಕರು. ದೀರ್ಘಕಾಲದವರೆಗೆ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಇವರು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದವರು. ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಇವರು, ಕೆಪಿಎಸ್‌ಸಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಯಾವುದೇ ಪ್ರಚಾರದ ಗೀಳಿಲ್ಲದೆ, ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿದ್ದ ನಾಗರಾಜ್ ಅವರಿಗೆ ಈ ಬಾರಿಯ ಟಿಕೆಟ್ ಒಲಿದುಬಂದಿದೆ. ಮತ್ತೊಂದೆಡೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಮತ್ತೊಂದು ಅವಧಿಗೆ ರಾಜ್ಯಸಭಾ ಸದಸ್ಯರನ್ನಾಗಿ ಮುಂದುವರಿಸುವ ಪ್ರಸ್ತಾವನೆಗೂ ಇದರಿಂದ ಬ್ರೇಕ್ ಬಿದ್ದಂತಾಗಿದೆ.

ಪರಿಷತ್ ಟಿಕೆಟ್: ಹಳಬರಿಗೆ ನಿರಾಸೆ, ಹೊಸಬರಿಗೆ ಮಣೆ

ವಿಧಾನ ಪರಿಷತ್ ಚುನಾವಣೆಗೆ ರಾಜ್ಯ ಘಟಕದಿಂದ ಪ್ರಮೋದ್ ಮಧ್ವರಾಜ್, ನಳಿನ್ ಕುಮಾರ್ ಕಟೀಲ್, ಲಿಂಗರಾಜು ಪಾಟೀಲ್, ರಘು ಕೌಟಿಲ್ಯ, ಮಂಜುಳಾ ಹಾಗೂ ಶರಣು ತಳ್ಳಿಕೇರಿ ಅವರ ಹೆಸರುಗಳನ್ನು ರವಾನಿಸಲಾಗಿತ್ತು. ಇದರಲ್ಲಿ ಹಿಂದುಳಿದ ವರ್ಗಗಳ ಮತಬ್ಯಾಂಕ್ ಅನ್ನು ದೃಷ್ಟಿಯಲ್ಲಿಟ್ಟುಕೊಂಡು ಒಬಿಸಿ ಮೋರ್ಚಾದ ರಘು ಕೌಟಿಲ್ಯ ಹಾಗೂ ಪಕ್ಷದ ಶಿಸ್ತು ಸಮಿತಿಯಲ್ಲಿ ಕೆಲಸ ಮಾಡಿದ್ದ ಲಿಂಗರಾಜು ಪಾಟೀಲ್ ಅವರಿಗೆ ಅವಕಾಶ ನೀಡಲಾಗಿದೆ.

ಕಾಂಗ್ರೆಸ್‌ಗೆ ಟಕ್ಕರ್: ಮೇಲ್ಮನೆಗೆ ಎನ್‌ಡಿಎ ಮೂರನೇ ಅಭ್ಯರ್ಥಿ

ವಿಧಾನ ಪರಿಷತ್ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ಪ್ರಬಲ ಪೈಪೋಟಿ ನೀಡಲು ಜೆಡಿಎಸ್-ಬಿಜೆಪಿ ಮೈತ್ರಿ (ಎನ್‌ಡಿಎ) ರಣತಂತ್ರ ಹೆಣೆದಿದ್ದು, ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ. ಜೆಡಿಎಸ್ ವಲಯದಲ್ಲಿ ಬಿ.ಎಂ. ಫಾರೂಕ್, ನಿವೃತ್ತ ಐಎಎಸ್ ಅಧಿಕಾರಿ ಇಂಚರ ಗೋವಿಂದರಾಜು, ಹಾಗೂ ಜೆಡಿಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ ಸೇರಿದಂತೆ ನಾಲ್ವರು ಪ್ರಮುಖರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಬಿಜೆಪಿ ಸಮ್ಮತಿಸುವ ಮೂಲಕ ಮೇಲ್ಮನೆಯಲ್ಲಿ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.

ಒಂದು ಕಡೆ ನಿಷ್ಠಾವಂತರಿಗೆ ಮಣೆ ಹಾಕುವ ಮೂಲಕ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದರೆ, ಇನ್ನೊಂದೆಡೆ ಮಾಸ್ ಲೀಡರ್ ಆಗಿದ್ದರೂ ಸುಮಲತಾ ಅಂಬರೀಶ್ ಅವರಂತಹ ನಾಯಕಿಯರಿಗೆ ಟಿಕೆಟ್ ನಿರಾಕರಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮುಂಬರುವ ದಿನಗಳಲ್ಲಿ ಸುಮಲತಾ ಅವರ ರಾಜಕೀಯ ನಡೆ ಏನು ಎಂಬುದು ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+