ಸರ್ಕಾರ ಕೆಡವಲು ಶಾಸಕರಿಗೆ 50 ಕೋಟಿಯಲ್ಲ, 100 ಕೋಟಿ ಆಫರ್ ಕೊಟ್ಟವರು ಯಾರು?: ಸ್ಪೋಟಕ ಹೇಳಿಕೆ ನೀಡಿದ ರವಿಕುಮಾರ್
ಮಂಡ್ಯ, ನವೆಂಬರ್ 18: ರಾಜ್ಯ ಸರ್ಕಾರವನ್ನು ಪದಚ್ಯುತಗೊಳಿಸಲು ಪ್ರತಿಪಕ್ಷ ಬಿಜೆಪಿ ನಾಯಕರು 50 ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿ ರೂಪಾಯಿ ಆಫರ್ ನೀಡಿದ್ದಾರೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಆದರೆ ಇದೀಗ ಆಡಳಿತಾರೂಢ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಕಡೆಯಿಂದ 50 ಕೋಟಿ ಅಲ್ಲ 100 ಕೋಟಿ ರೂಪಾಯಿ ಆಫರ್ ಬಂದಿತ್ತು ಎಂದು ಶಾಸಕ ರವಿಕುಮಾರ್ ಗೌಡ ಗಣಿಗ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರ ಖರೀದಿಗೆ ಬಿಜೆಪಿಯವರು 50 ಕೋಟಿ ರೂಪಾಯಿ ಅಲ್ಲ, 100 ಕೋಟಿ ರೂ. ಆಮಿಷ ಒಡ್ಡಿದ್ದಾರೆ. ಶಾಸಕರ ಭೇಟಿಯ ಆಡಿಯೋ, ವೀಡಿಯೋ ರೆಕಾರ್ಡ್ ಇದೆ. ಸಮಯ ನೋಡಿ ಬಿಡುಗಡೆ ಮಾಡುತ್ತೇವೆ ಎಂದು ಶಾಸಕ ರವಿಕುಮಾರ್ ಗೌಡ ಗಣಿಗ ಹೇಳಿದ್ದಾರೆ.

ಪ್ರತಿಪಕ್ಷ ಬಿಜೆಪಿ ನಾಯಕರು 50 ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿ ರೂಪಾಯಿ ಆಫರ್ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿರುವ ಮಾತು ಸತ್ಯ. ನಮ್ಮ ಶಾಸಕರನ್ನು ವಿಪಕ್ಷದವರು ಎಲ್ಲಿ ಭೇಟಿ ಮಾಡಿದ್ದರು, ಯಾವ ಗೆಸ್ಟ್‌ಹೌಸ್‌ಗೆ ಬಂದಿದ್ದರು, ಯಾವ ವಿಮಾನ ನಿಲ್ದಾಣದಲ್ಲಿ ಸಿಕ್ಕಿದ್ದರು ಎನ್ನುವುದರ ವೀಡಿಯೋ, ಆಡಿಯೋ ರೆಕಾರ್ಡ್ ಇದೆ. ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇವೆ ಎಂದರು
ಇನ್ನೂ ಸರ್ಕಾರ ಕೆಡವಲು ಕಾಂಗ್ರೆಸ್ ನಾಯಕರಿಗೆ ಹಣದ ಆಫರ್ ಕೊಟ್ಟಿದ್ದು ಯಾರು ಎಂಬುದು ಮಾತನಾಡಿದವರಿಗೂ ಗೊತ್ತು. ಮಾತನಾಡಿಸಿದವರಿಗೂ ಗೊತ್ತು. ನಮ್ಮತ್ರ ದಾಖಲೆಗಳಿವೆ. ಸೂಕ್ತ ಸಮಯದಲ್ಲಿ ಮಾಧ್ಯಮಗಳ ಮುಂದೆ ಬಿಡುಗಡೆ ಮಾಡುತ್ತೇವೆ. ಬಿಜೆಪಿಯವರಿಗೆ ಹಿಂದಿನ ಸರ್ಕಾರದಲ್ಲಿ ಮಾಡಿದ್ದ ಹಗರಣಗಳ ಕಂಟಕ ಸುತ್ತಿಕೊಂಡಿದೆ. ಅದರಿಂದ ಬಚಾವಾಗಲು, ಆ ಅಕ್ರಮದ ದುಡ್ಡನ್ನೇ ಮುಂದಿಟ್ಟುಕೊಂಡು ಸರ್ಕಾರ ಬೀಳಿಸಲು ಯತ್ನಿಸುತ್ತಿದ್ದಾರೆ. ಅದರ ಜತೆಗೆ ಕೇಂದ್ರ ಸರ್ಕಾರದ ಬೆಂಬಲ ಇದೆ. ಇದೀಗ ಜೆಡಿಎಸ್ ಕೂಡ ಜತೆಗೂಡಿದೆ. ಕಿತ್ತೂರು ಶಾಸಕ ಬಾಬು, ಚಿಕ್ಕಮಗಳೂರು ಶಾಸಕ ತಮ್ಮಣ್ಣರನ್ನ ಯಾಕೆ ಸಂಪರ್ಕಿಸಿದ್ದರು ಎಂದು ಪ್ರಶ್ನಿಸಿದ ಅವರು, ನಮ್ಮ ಬಳಿ ಆಪರೇಷನ್ ಕಮಲಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳಿವೆ ಎಂದು ಹೇಳಿದರು.
ಇನ್ನೂ ರವಿ ಕುಮಾರ್ ಗಣಿಗ ಅವರ ಹೇಳಿಕೆ ಕುರಿತು ಬಾಬಾಸಾಹೇಬ್ ಪಾಟೀಲ್ ಅವರು ಮಾತನಾಡಿ, ಬಿಜೆಪಿಯ ಯಾವ ನಾಯಕರು ಕೂಡ ನನ್ನನ್ನು ಈಗ ಸಂಪರ್ಕ ಮಾಡಿಲ್ಲ. ಸರ್ಕಾರದ ಆರಂಭದಲ್ಲಿ ಬಿಜೆಪಿಯಿಂದ ಆಫರ್ ಬಂದಿತ್ತು. ಆಗ ಸ್ನೇಹ, ವಿಶ್ವಾಸದ ಮೇಲೆ ಬಿಜೆಪಿಯಲ್ಲಿನ ಸ್ನೇಹಿತರು ಆಹ್ವಾನ ನೀಡಿದ್ದರು ಅಷ್ಟೆ. ಆದರೆ ಈಗ ಯಾರೂ ಸಂಪರ್ಕಿಸಿಲ್ಲ. ರವಿ ಗಣಿಗ ಯಾಕೆ ಹಾಗೇ ಹೇಳಿದ್ದಾರೋ ನನಗೆ ಗೊತ್ತಿಲ್ಲ. ನನಗೆ ಯಾವುದೇ ಆಫರ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನನಗೆ ಯಾವುದೇ ದುಡ್ಡಿನ ಆಫರ್ ಬಂದಿಲ್ಲ. ರವಿಕುಮಾರ್ ಗಣಿಗ ನೀಡಿರುವ ಹೇಳಿಕೆ ಸಂಪೂರ್ಣ ಸುಳ್ಳು. ಅವರು ಯಾಕೆ ಹೀಗೆ ಹೇಳಿದ್ದಾರೆ ಎಂಬುದಾಗಿ ಅವರನ್ನೇ ಕೇಳಿ. ಅವರ ಬಳಿ ಆಡಿಯೋ, ವಿಡಿಯೋ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಬಾಬಾಸಾಹೇಬ್ ಪಾಟೀಲ್ ಹೇಳಿದ್ದಾರೆ.












Click it and Unblock the Notifications