ಬಿಎಲ್ ಸಂತೋಷ್ ಸಭೆಗೆ ಗೈರಾದ ಸೋಮಶೇಖರ್, ಹೆಬ್ಬಾರ್, ರೇಣುಕಾಚಾರ್ಯ: ಆಪರೇಷನ್ ಹಸ್ತ ವದಂತಿಗೆ ಪುಷ್ಟಿ
ಬೆಂಗಳೂರು, ಆಗಸ್ಟ್ 31: ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್ ಅವರು ಕರೆದಿದ್ದ ಸಭೆಗೆ ಶಾಸಕರಾದ ಎಸ್‌ಟಿ ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಗೈರಾಗಿದ್ದರು. ಮಹತ್ವದ ಸಭೆಗೆ ಇಬ್ಬರು ನಾಯಕರು ಗೈರು ಹಾಜರಾಗಿರುವುದು ಆಪರೇಷನ್ ಹಸ್ತ ವದಂತಿಗೆ ಪುಷ್ಟಿ ನೀಡಿದೆ.
ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸಲು ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲಿ ಪಕ್ಷದ ಶಾಸಕರು ಮತ್ತು ಸಂಸದರೊಂದಿಗೆ ಸಂತೋಷ್ ಸಭೆ ನಡೆಸಿದರು. ಸೋಮಶೇಖರ್, ಹೆಬ್ಬಾರ್, ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಹೊರತುಪಡಿಸಿ ಬಹುತೇಕ ಶಾಸಕರು ಸಭೆಯಲ್ಲಿ ಭಾಗವಹಿಸಿದ್ದರು.

ಮೇ 2023 ರ ಲೋಕಸಭೆ ಚುನಾವಣೆಗೆ ಮತದಾರರ ಜಾಗೃತಿ ಅಭಿಯಾನವನ್ನು ಯೋಜಿಸಲು ಸಭೆ ನಡೆಸಲಾಯಿತು. ಈ ಸಭೆಗೆ ಗೈರಾಗಿದ್ದ ಇನ್ನುಳಿದ ಶಾಸಕರು ಪುರ್ವಾನುಮತಿ ಪಡೆದಿದ್ದರು ಎಂದು ತಿಳಿದುಬಂದಿದೆ.
2019 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಶಾಸಕರಲ್ಲಿ ಸೋಮಶೇಖರ್ ಮತ್ತು ಹೆಬ್ಬಾರ್ ಸಹ ಸೇರಿದ್ದಾರೆ.
ಬಿಜೆಪಿ ಅಧಿಕಾರ ಕಳೆದುಕೊಂಡ ನಂತರ ಪಕ್ಷದಲ್ಲಿ ಆಂತರಿಕ ಕಚ್ಚಾಟ ಹೆಚ್ಚಾಗಿದೆ ಎಂದು ಈ ಇಬ್ಬರು ನಾಯಕರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷ ಬದಲಾಯಿಸುವ ಸುಳಿವು ನೀಡಿದ್ದಾರೆ. ಇಬ್ಬರೂ ನಾಯಕರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಆದರೆ, ಅವರು ಕಾಂಗ್ರೆಸ್ ಸೇರುವ ಊಹಾಪೋಹಗಳನ್ನು ತಳ್ಳಿ ಹಾಕಿದ್ದಾರೆ.

ಸಭೆಗೆ ರೇಣುಕಾಚಾರ್ಯ ಗೈರು
ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರು ರಾಜ್ಯದ ಕೆಲ ನಾಯಕರ ವಿರುದ್ಧ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ಇದರಿಂದ ಅವರು ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಶೋಕಾಸ್ ನೋಟಿಸ್ ವಾಪಸ್ ಪಡೆಯದ ಹೊರತು ಯಾವುದೇ ಸಭೆಗೆ ಹಾಜರಾಗುವುದಿಲ್ಲ ಎಂದು ಹೇಳಿದ್ದಾರೆ.
'ಪಕ್ಷದಲ್ಲಿ ಏನೇ ನಡೆದರೂ ಬಹಿರಂಗವಾಗಿ ಹೇಳಿದ್ದೇನೆ. ಅವರು ನೋಟಿಸ್ ವಾಪಸ್ ಪಡೆಯದ ಹೊರತು ನಾನು ಪಕ್ಷದ ಯಾವುದೇ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ. ಬಿಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ ಬಿವೈ ವಿಜಯೇಂದ್ರ ಅವರನ್ನು ಕಡೆಗಣಿಸಲಾಗುತ್ತಿದೆ. ನಾಯಕರನ್ನು ಪಕ್ಷದಲ್ಲಿ ಬೆಳೆಯಲು ಬಿಡುತ್ತಿಲ್ಲ' ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.

ಸಭೆಯ ನಂತರ ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಎಂಜಿ ಮಹೇಶ್ ಮಾತನಾಡಿ, ಲೋಕಸಭೆ ಚುನಾವಣೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು ಎಂದು ಹೇಳಿದ್ದಾರೆ.
'ಎಲ್ಲಾ ಶಾಸಕರನ್ನು ಸಭೆಗೆ ಆಹ್ವಾನಿಸಲಾಗಿತ್ತು. ಆದರೆ ಅವರಲ್ಲಿ ಕೆಲವರು ಯಾವುದೇ ಕಾರಣ ನೀಡದೆ ಗೈರಾಗಿದ್ದಾರೆ. ನಮ್ಮ ನಾಯಕರನ್ನು ಕಾಂಗ್ರೆಸ್ ಸೆಳೆಯುತ್ತಿರುವ ಬಗ್ಗೆ ನಾವು ಚರ್ಚಿಸಿದ್ದೇವೆ. ಇದು ಬಿಜೆಪಿಯನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆ' ಎಂದು ಮಹೇಶ್ ಆರೋಪಿಸಿದ್ದಾರೆ.
ಪೂರ್ವ ಸೂಚನೆಯೊಂದಿಗೆ ಸಭೆಯಿಂದ ಹೊರಗುಳಿದ ಇತರರಲ್ಲಿ ಬಸವರಾಜ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ, ನಳೀನ್ ಕುಮಾರ್ ಕಟೀಲ್, ಮುನಿರತ್ನ ಮತ್ತು ಕೆಲವರು ಸೇರಿದ್ದಾರೆ.












Click it and Unblock the Notifications