BJP Manifesto 2023: ಕರ್ನಾಟಕದಲ್ಲಿ "ವಿವಾದಾತ್ಮಕ" ಯೂನಿಫಾರಂ ಸಿವಿಲ್ ಕೋಡ್‌ಗೆ ಕೈ ಹಾಕಿದ ಬಿಜೆಪಿ!
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಉನ್ನತ ಮಟ್ಟದ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಕರ್ನಾಟಕದಲ್ಲಿ ಏಕರೂಪ ನಾಗರಿಕ ಸಂಹಿತೆ ( Uniform Civil Code) ಜಾರಿಗೊಳಿಸುವುದಾಗಿ ಬಿಜೆಪಿ ಹೇಳಿದೆ.
ರಾಜ್ಯ ಸಾರ್ವತ್ರಿಕ ಚುನಾವಣೆಗೆ ಮತದಾರರನ್ನು ಸೆಳೆಯಲು ಇಂದು ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ರಾಜ್ಯದ ಜನತೆಗೆ ಹಲವಾರು ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ. ಈ ಪೈಕಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ವಿಚಾರ ಕೂಡ ಒಂದು. ಅಷ್ಟಕ್ಕೂ ಏನಿದು ಏಕರೂಪ ನಾಗರಿಕ ಸಂಹಿತೆ? ಇದು ರಾಜ್ಯದಲ್ಲಿ ಯಾಕೆ ಬರಬೇಕು? ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರುವುದರಿಂದಾಗುವ ಲಾಭ ನಷ್ಟಗಳೇನು ತಿಳಿಯೋಣ.

ಭಾರತೀಯ ಜನತಾ ಪಕ್ಷ ಒಂದು ದೇಶದಲ್ಲಿ ಎರಡು ಗುರಿ, ಇಬ್ಬರ ನಾಯಕತ್ವ, ಎರಡು ಕಾನೂನುಗಳ ವಿರುದ್ಧ ಯಾವಾಗಲೂ ಧ್ವನಿಯೆತ್ತಿದೆ. ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಲೇ ಇದೆ. ಬಲಪಂಥೀಯ ಗುಂಪುಗಳು ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಒತ್ತಾಯಿಸುತ್ತಿವೆ.
ಆದರೆ ಜನರು ತಮ್ಮ ಧಾರ್ಮಿಕ ಕಾನೂನುಗಳನ್ನು ಬಿಟ್ಟುಕೊಡಲು ಬಯಸುವುದಿಲ್ಲ, ಅದಕ್ಕಾಗಿಯೇ ಯಾವುದೇ ಸರ್ಕಾರವು ಈವರೆಗೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಧೈರ್ಯ ಮಾಡಿಲ್ಲ. ಆದರೆ ಇದು ಬಿಜೆಪಿ ಸರ್ಕಾರದ ಪ್ರಮುಖ ಅಜೆಂಡಾಗಳಲ್ಲಿ ಒಂದಾಗಿದೆ. ಹೀಗಾಗಿ ಈ ಬಾರಿ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಪಿ) ಜಾರಿಗೊಳಿಸುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಬಿಜೆಪಿ ಭರವಸೆ ನೀಡಿದೆ.
ಏಕರೂಪ ನಾಗರಿಕ ಸಂಹಿತೆ ಎಂದರೇನು?
ವಕೀಲರಾದ ಅನುರಾಗ್ ಅವರು ವಿವರಿಸುವಂತೆ, 'ಇಸ್ಲಾಂನಲ್ಲಿ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಪುರುಷರಿಗೆ ಹೆಚ್ಚಿನ ಹಕ್ಕುಗಳಿವೆ. ಮಹಿಳೆಯರ ಹಕ್ಕುಗಳು ಬಹಳ ಸೀಮಿತವಾಗಿವೆ. ಇಸ್ಲಾಂನಲ್ಲಿ ಪ್ರೌಢಾವಸ್ಥೆಯ ವಯಸ್ಸು ಮತ್ತು ವಿವಾಹದ ನಿಯಮಗಳು ಇತರ ಧರ್ಮಗಳಿಗಿಂತ ಭಿನ್ನವಾಗಿವೆ. ಏಕರೂಪ ನಾಗರಿಕ ಸಂಹಿತೆ ಜಾರಿಯಾದರೆ, ಮದುವೆ ಮತ್ತು ಭೂಮಿ-ಆಸ್ತಿ ಮತ್ತು ಉಯಿಲಿಗೆ ಸಂಬಂಧಿಸಿದಂತೆ ಒಂದೇ ಕಾನೂನನ್ನು ಎಲ್ಲರೂ ಪಾಲಿಸಬೇಕಾಗುತ್ತದೆ. ಪ್ರಸ್ತುತ, ಧರ್ಮಗಳ ವಿವಿಧ ಕಾನೂನುಗಳಿವೆ, ಅದರ ಪ್ರಕಾರ ನ್ಯಾಯಾಲಯಗಳಲ್ಲಿ ಪ್ರಕರಣಗಳು ನಡೆಯುತ್ತಿವೆ. ಏಕರೂಪ ನಾಗರಿಕ ಸಂಹಿತೆ ಜಾರಿಯಾದರೆ ವೈಯಕ್ತಿಕ ಕಾನೂನುಗಳು ಕೊನೆಗೊಳ್ಳುತ್ತವೆ'.

ಏಕರೂಪ ನಾಗರಿಕ ಸಂಹಿತೆಯು ಜಾತ್ಯತೀತ ಕಾನೂನಾಗಿದ್ದು, ಅದರ ಅನುಷ್ಠಾನದ ನಂತರ ಎಲ್ಲಾ ಧರ್ಮಗಳ ವೈಯಕ್ತಿಕ ಕಾನೂನುಗಳು ಕೊನೆಗೊಳ್ಳುತ್ತವೆ. ಇದೀಗ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಪಾರ್ಸಿ ಸಮುದಾಯಗಳು ವಿಭಿನ್ನ ಧಾರ್ಮಿಕ ಕಾನೂನುಗಳನ್ನು ಹೊಂದಿವೆ. ಇಂತಹ ಪರಿಸ್ಥಿತಿಯಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾದರೆ ಈ ಎಲ್ಲ ವೈಯಕ್ತಿಕ ಕಾನೂನುಗಳು ಕೊನೆಗೊಳ್ಳಲಿವೆ ಹಾಗೂ ನಾಗರಿಕರು ಏಕರೂಪ ನಾಗರಿಕ ಸಂಹಿತೆ ಪಾಲಿಸಬೇಕಾಗುತ್ತದೆ.
ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದು ಸುಲಭವಲ್ಲ ಯಾಕೆ?
ಆದರೆ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದು ಸುಲಭವಲ್ಲ. ಇದರ ಹಿಂದಿನ ಕಾರಣ ರಾಜಕೀಯದಾಟ. ಧಾರ್ಮಿಕ ಸಂಘಟನೆಗಳೂ ಇದರ ವಿರುದ್ಧ ನಿಂತಿವೆ. ಹಿಂದೂ ಸಂಘಟನೆಗಳು ತಮ್ಮ ವೈಯಕ್ತಿಕ ಕಾನೂನನ್ನು ಬಿಟ್ಟುಕೊಟ್ಟಿವೆ. ಆದರೆ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಚರ್ಚೆಯಾದಾಗಲೆಲ್ಲಾ ಇಸ್ಲಾಮಿಕ್ ಸಂಘಟನೆಗಳು ಅದರ ವಿರುದ್ಧ ನಿಲ್ಲುತ್ತವೆ.
ಷರಿಯತ್ ಕಾನೂನುಗಳ ಬಗ್ಗೆ ಮುಸ್ಲಿಂ ಸಮಾಜವು ತುಂಬಾ ಮತಾಂಧವಾಗಿದೆ ಎಂದು ವಕೀಲ ಅನುರಾಗ್ ಹೇಳುತ್ತಾರೆ. ಇಸ್ಲಾಮಿಕ್ ಸಂಘಟನೆಗಳು ಇದನ್ನು ಹೆಚ್ಚು ವಿರೋಧಿಸಲು ಇದು ಕಾರಣವಾಗಿದೆ. ಪೌರತ್ವ ಕಾನೂನು ಮತ್ತು ಎನ್‌ಆರ್‌ಸಿ ವಿರುದ್ಧ ದೇಶವು ಹಿಂಸಾತ್ಮಕ ಪ್ರತಿಭಟನೆಗಳನ್ನು ಕಂಡಿದೆ. ಸರ್ಕಾರಗಳು ಪ್ರತಿಭಟನೆಗೆ ಹೆದರುತ್ತಿವೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ನಡೆದ ಹಿಂಸಾತ್ಮಕ ಪ್ರತಿಭಟನೆಯನ್ನು ದೇಶದ ಜನತೆ ಇನ್ನೂ ಮರೆತಿಲ್ಲ. ಧಾರ್ಮಿಕ ಸಂಘಟನೆಗಳು ಇದನ್ನು ವೈಯಕ್ತಿಕ ಕಾನೂನುಗಳ ಮೇಲಿನ ದಾಳಿ ಎಂದು ನೋಡುತ್ತವೆ. ಗಲಾಟೆ ತಪ್ಪಿಸಲು ಸರ್ಕಾರಗಳು ಈ ವಿಷಯವನ್ನು ಮುಟ್ಟುವುದಿಲ್ಲ.
ಗೋವಾದಲ್ಲಿ ಏಕರೂಪ ನಾಗರಿಕ ಸಂಹಿತೆ ಅನ್ವಯಿಸುತ್ತದೆ. ಇತ್ತೀಚೆಗೆ ಗುಜರಾತ್ ಸರ್ಕಾರ ಏಕರೂಪ ನಾಗರಿಕ ಸಂಹಿತೆಗಾಗಿ ಸಮಿತಿಯನ್ನು ರಚಿಸಿದೆ. ಅಸ್ಸಾಂ ಸರ್ಕಾರ ಇದನ್ನು ಜಾರಿಗೆ ತರಲು ಯೋಚಿಸುತ್ತಿದೆ. ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆಯ ಕರಡನ್ನು ಸಿದ್ಧಪಡಿಸಲಾಗಿದೆ. ಕರ್ನಾಟಕ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಪರಿಗಣನೆಯಲ್ಲಿದೆ.
ಈ ವಿಚಾರಗಳೆಲ್ಲವನ್ನು ತಿಳಿದೂ ಬಿಜೆಪಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ. ಇದರಿಂದ ಕೆಲ ಮತಗಳು ಬಿಜೆಪಿ ಕೈತಪ್ಪುವ ಸಾಧ್ಯತೆ ಕೂಡ ಇದೆ. ಮತದಾರರು ಈ ಬಗ್ಗೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆಂದು ಮುಂದಿನ ದಿನಗಳಲ್ಲಿ ಕಾದು ನೊಡಬೇಕಿದೆ.












Click it and Unblock the Notifications