ಕಟೀಲ್‌ರನ್ನು ಬದಲಾಯಿಸಿ, ಬಿವೈ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿ: ಬಿಜೆಪಿ ಹೈಕಮಾಂಡ್‌ಗೆ ರಕ್ತದಲ್ಲಿ ಪತ್ರ
ಬೆಂಗಳೂರು, ಜೂನ್ 30: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಕೂಗು ಹೆಚ್ಚಾಗುತ್ತಿದೆ. ಈಗಿರುವ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಬದಲಾಯಿಸಬೇಕೆಂದು ಒತ್ತಾಯಿಸಲಾಗುತ್ತಿದೆ.
ಬೆಳವಣಿಗೆಗಳ ನಡುವೆಯೇ ಪಕ್ಷದ ಹೈಕಮಾಂಡ್‌ಗೆ ರಕ್ತದಲ್ಲಿ ಪತ್ರ ಬರೆದಿರುವ ಶಿವಮೊಗ್ಗದ ವಿಜಯೇಂದ್ರ ಬೆಂಬಲಿಗರು, 'ನಳೀನ್ ಕುಮಾರ್ ಕಟೀಲ್ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕಿತ್ತುಹಾಕಿ, ಬಿವೈ ವಿಜಯೇಂದ್ರ ಅವರನ್ನು ರಾಜ್ಯದ ಅಧ್ಯಕ್ಷರನ್ನಾಗಿ ನೇಮಿಸಿ' ಎಂದು ಒತ್ತಾಯಿಸಿದ್ದಾರೆ.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯೊಳಗೆ ಕಿತ್ತಾಟದ ನಡೆಯುತ್ತಿರುವ ಸಂದರ್ಭದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಯಡಿಯೂರಪ್ಪನವರ ಕಿರಿಯ ಪುತ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ 'ಅತ್ಯುತ್ತಮ' ಸ್ಪರ್ಧಿ ಎಂದು ಕೇಂದ್ರ ನಾಯಕತ್ವಕ್ಕ ತಿಳಿಸಿಕೊಡುವ ಯತ್ನವನ್ನು ಬೆಂಬಲಿಗರು ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ವೈರಲ್ ವಿಡಿಯೋವೊಂದರಲ್ಲಿ ವಿಜಯೇಂದ್ರ ಬೆಂಬಲಿಗರ ಗುಂಪು ಪಕ್ಷದ ಹೈಕಮಾಂಡ್‌ಗೆ ಪತ್ರವೊಂದನ್ನು ಪೋಸ್ಟ್ ಬಾಕ್ಸ್‌ನಲ್ಲಿ ಪೋಸ್ಟ್ ಮಾಡುತ್ತಿರುವುದು ಕಂಡುಬಂದಿದೆ.

ಕಳೆದ ತಿಂಗಳು ನಡೆದ ವಿಧಾನಸಭೆ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಲ್ಲಿ ವಿಜಯೇಂದ್ರ ಜಯಗಳಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅಧಿಕಾರಾವಧಿಯು ಕಳೆದ ವರ್ಷ ಆಗಸ್ಟ್‌ನಲ್ಲಿ ಕೊನೆಗೊಂಡಿದೆ. ಇದನ್ನು ವಿಧಾನಸಭೆ ಚುನಾವಣೆ ಮುಗಿಯುವವರೆಗೆ ವಿಸ್ತರಿಸಲಾಗಿದೆ. ವರದಿಗಳ ಪ್ರಕಾರ, ಶೀಘ್ರದಲ್ಲೇ ಬಿಜೆಪಿ ಹೊಸ ರಾಜ್ಯಾಧ್ಯಕ್ಷರನ್ನು ನೇಮಿಸಲಾಗುವುದು.
ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ವಿ.ಸೋಮಣ್ಣ ಈಗಾಗಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯೆಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇವರಲ್ಲದೆ ಆರ್.ಅಶೋಕ್, ಶೋಭಾ ಕರಂದ್ಲಾಜೆ, ಡಾ.ಸಿ.ಎನ್.ಅಶ್ವತ್ಥನಾರಾಯಣ, ಸುನೀಲ್ ಕುಮಾರ್ ಮತ್ತು ಅರವಿಂದ ಲಿಂಬಾವಳಿ ಅವರು ರಾಜ್ಯ ಘಟಕದ ಸ್ಥಾನದ ರೇಸ್‌ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಜೆಪಿಯಲ್ಲಿ ಆಂತರಿಕ ಬಿಕ್ಕಟ್ಟು
ಚುನಾವಣೆ ಸೋಲಿನ ಬಳಿಕ ಬಿಜೆಪಿಯಲ್ಲಿ ಆಂತರಿಕ ಬಿಕ್ಕಟ್ಟು ಭುಗಿಲೆದ್ದಿದೆ. ಪಕ್ಷದ ಮುಖಂಡರು ತಮ್ಮದೇ ನಾಯಕರು ವಿರುದ್ಧ ಕಿಡಿಕಾರುತ್ತಿದ್ದಾರೆ. ತಮ್ಮ ಕೆಲ ನಾಯಕರು ಮಾಡಿದ ತಪ್ಪಿನಿಂದಾಗಿ ಬಿಜೆಪಿ ಸೋಲು ಅನುಭವಿಸಿದೆ ಎಂದು ಹೇಳುತ್ತಿದ್ದಾರೆ.
ಮಾಜಿ ಶಾಸಕ ರೇಣುಕಾಚಾರ್ಯ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಜೆಪಿ ಸಂತೋಷ್ ಹಾಗೂ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ವಿರುದ್ದ ಕಿಡಿಕಾರಿದ್ದಾರೆ.
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಬಹಿರಂಗವಾಗಿಯೇ ಹರಿಹಾಯ್ದಿದ್ದಾರೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು ಮಾಜಿ ಶಾಸಕ ಸಿಟಿ ರವಿ ಹಾಗೂ ಮೈಸೂರು ಕೊಡಗು ಸಂಸದ ಪ್ರತಾಪಸಿಂಹ ಅವರು ಪಕ್ಷದಲ್ಲಿ ಕೆಲ ನಾಯಕರು ಹೊಂದಾಣಿಕೆ ರಾಜಕೀಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.












Click it and Unblock the Notifications