ಡಿಕೆಶಿ ವಿರುದ್ಧ ತುಟಿ ಬಿಚ್ಚದ ಬಿಜೆಪಿ ನಾಯಕರು, ಅಮಿತ್ ಶಾ ಗರಂ
Recommended Video

ಬಳ್ಳಾರಿ, ಅಕ್ಟೋಬರ್ 26: ಕಾಂಗ್ರೆಸ್ ಸಚಿವ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ರಾಜ್ಯ ಬಿಜೆಪಿ ಪ್ರಮುಖ ನಾಯಕರು ಮೃದು ಧೋರಣೆ ಮುಂದುವರೆಸಿರುವುದು ಹೈಕಮಾಂಡ್ ಅಮಿತ್ ಶಾ ಅವರ ಕಣ್ಣು ಕೆಂಪಗೆ ಮಾಡಿದೆ.
ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕೆಂದು ಟೊಂಕ ಕಟ್ಟಿ ನಿಂತಿರುವ ಡಿ.ಕೆ.ಶಿವಕುಮಾರ್ ವಿರುದ್ಧ ಶ್ರೀರಾಮುಲು ಹೊರತುಪಡಿಸಿ ಮತ್ಯಾವ ನಾಯಕರು ಮಾತನಾಡುತ್ತಿಲ್ಲ ಇದು ಅಮಿತ್ ಶಾ ಗಮನಕ್ಕೆ ಬಂದಿದ್ದು, ಅಮಿತ್ ಶಾ ಈ ಬಗ್ಗೆ ಗರಂ ಆಗಿದ್ದಾರೆ ಎನ್ನಲಾಗಿದೆ.
ಡಿ.ಕೆ.ಶಿವಕುಮಾರ್ ಅವರ 'ವೀರಶೈವ-ಲಿಂಗಾಯತ ಧರ್ಮ' ವಿವಾದದ ಬಗ್ಗೆ ಹೇಳಿಕೆಯನ್ನು ತಮ್ಮ ಪರವಾಗಿ ಬಳಸಿಕೊಳ್ಳುವಲ್ಲಿ ರಾಜ್ಯ ಬಿಜೆಪಿ ಸಂಪೂರ್ಣ ವಿಫಲವಾಗರುವ ಬಗ್ಗೆ ಅಮಿತ್ ಶಾ ರಾಜ್ಯ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಯಾರೂ ತುಟಿ ಬಿಚ್ಚಿಲ್ಲ
ಬಳ್ಳಾರಿ ಲೋಕಸಭೆ ಉಪಚುನಾವಣೆಯ ಉಸ್ತುವಾರಿ ವಹಿಸಿರುವ ಡಿ.ಕೆ.ಶಿವಕುಮಾರ್ ಅವರ ಮೇಲೆ ಶ್ರೀರಾಮುಲು ಅವರನ್ನು ಹೊರತುಪಡಿಸಿದರೆ ಇನ್ನಾವ ಬಿಜೆಪಿ ನಾಯಕರು ತುಟಿ ಬಿಚ್ಚದಿರುವುದು ಅಮಿತ್ ಶಾ ಅವರಿಗೆ ಬೇಸರ ಮೂಡಿಸಿದೆ. ಈ ಬಗ್ಗೆ ಅವರು ರಾಜ್ಯ ಬಿಜೆಪಿಗೆ ಎಚ್ಚರಿಕೆ ರವಾನಿಸಿದ್ದಾರೆ.

ಹಲವು ಬಾರಿ ಬಿಜೆಪಿಗೆ ಅಡ್ಡಗಾಲು ಹಾಕಿರುವ ಡಿಕೆಶಿ
ಡಿ.ಕೆ.ಶಿವಕುಮಾರ್ ಅವರು ಕರ್ನಾಟಕದಲ್ಲಿ ಬಿಜೆಪಿಗೆ ರಾಜಕೀಯವಾಗಿ ಹಲವು ಬಾರಿ ಅಡ್ಡಗಾಲು ಹಾಕಿದ್ದಾರೆ. ಬಿಜೆಪಿ ಅಧಿಕಾರ ಹಿಡಿಯುವುದನ್ನು ಅವರು ತಪ್ಪಿಸಿದ್ದಾರೆ. ರಾಜ್ಯ ಮಾತ್ರವಲ್ಲದೆ ಗುಜರಾತ್ ವಿಧಾನಪರಿಷತ್ ಚುನಾವಣೆ ಸಂದರ್ಭ ಸಹ ಸ್ವತಃ ಅಮಿತ್ ಶಾಗೆ ಹಿನ್ನಡೆ ಆಗುವಂತೆ ಮಾಡಿದ್ದಾರೆ ಹಾಗಾಗಿ ಅಮಿತ್ ಶಾಗೆ ಡಿಕೆಶಿವಕುಮಾರ್ ಅವರ ಮೇಲೆ ರಾಜಕೀಯವಾಗಿ ಭಾರಿ ಸಿಟ್ಟಿದೆ ಎನ್ನಲಾಗಿದೆ.

ರಾಜ್ಯನಾಯಕರ ಮೃದು ಧೋರಣೆ ಏಕೆ?
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಹಲವು ಮುಖಂಡರೊಂದಿಗೆ ಡಿ.ಕೆ.ಶಿವಕುಮಾರ್ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅಷ್ಟೆ ಅಲ್ಲದೆ ರಾಜ್ಯ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ್ ಪ್ರಭಾವ ಹೆಚ್ಚಿದೆ. ಡಿ.ಕೆ.ಶಿವಕುಮಾರ್ ಅವರನ್ನು ಎದುರುಹಾಕಿಕೊಂಡರೆ ಒಕ್ಕಲಿಗ ಸಮುದಾಯವನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ ಹಾಗಾಗಿ ಬಿಜೆಪಿ ನಾಯಕರು ಡಿ.ಕೆ.ಶಿವಕುಮಾರ್ ಬಗ್ಗೆ ಮೃದು ಧೋರಣೆ ತಳೆದಿದ್ದಾರೆ.

ಅವಕಾಶ ಕೈಚೆಲ್ಲಿದ ಬಿಜೆಪಿ
ಡಿ.ಕೆ.ಶಿವಕುಮಾರ್ ಅವರ ಮೇಳೆ ಇಡಿ ದಾಳಿ, ಸಿಬಿಐ ದಾಳಿಗಳಾದಾಗ ಅದರ ರಾಜಕೀಯ ಲಾಭವನ್ನು ಪಡೆಯಲು ರಾಜ್ಯ ಬಿಜೆಪಿ ವಿಫಲವಾಗಿದೆ. ಅಷ್ಟೆ ಅಲ್ಲ ಆ ಸಮಯದಲ್ಲಿ ಬಿಜೆಪಿ ನಾಯಕರು ಡಿ.ಕೆ.ಶಿಗೆ ಸಹಾಯ ಮಾಡಿದ್ದಾರೆ ಎಂಬ ಆರೋಪವೂ ಇದೆ. ಡಿ.ಕೆ.ಶಿವಕುಮಾರ್ ಅವರು ಇತ್ತೀಚೆಗಷ್ಟೆ ಲಿಂಗಾಯತ ಧರ್ಮದ ಕುರಿತ ಹೇಳಿಕೆ ಸಂದರ್ಭದಲ್ಲೂ ಅದನ್ನು ಬಳಸಿಕೊಳ್ಳಲು ಬಿಜೆಪಿ ವಿಫಲವಾಗಿದೆ.

ಯಾರು ಮಾತನಾಡುತ್ತಿದ್ದಾರೆ?
ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಧನಿ ಎತ್ತುತ್ತಿರುವ ಏಕೈಕ ಬಿಜೆಪಿ ಮುಖಂಡರೆಂದರೆ ಶ್ರೀರಾಮುಲು ಒಬ್ಬರೆ. ಅದೂ ಅವರ ಕ್ಷೇತ್ರದಲ್ಲಿ ಡಿ.ಕೆ.ಶಿ ಚುನಾವಣೆ ಉಸ್ತುವಾರಿ ವಹಿಸಿರುವ ಕಾರಣ ಡಿ.ಕೆ.ಶಿವಕುಮಾರ್ ವಿರುದ್ಧ ರಾಮುಲು ಮಾತನಾಡುತ್ತಿದ್ದಾರೆ. ಉಳಿದಂತೆ ಯಾವೊಬ್ಬ ಬಿಜೆಪಿ ನಾಯಕರೂ ಸಹ ಡಿ.ಕೆ.ಶಿವಕುಮಾರ್ ವಿರದ್ಧ ತುಟಿ ಬಿಚ್ಚಿಲ್ಲ.

ಸಂಯಮದಿಂದಲೇ ಆರೋಪ ಮಾಡುತ್ತಿರುವ ಡಿ.ಕೆ.ಶಿ
ಡಿ.ಕೆ.ಶಿವಕುಮಾರ್ ರಾಜಕೀಯ ದಾಳಗಳನ್ನು ಚೆನ್ನಾಗಿ ಉರುಳಿಸಿ ಆಡುತ್ತಾರೆಯೇ ವಿನಃ ಅವರೂ ಸಹ ವೈಯಕ್ತಿಕ ದಾಳಿಗಳನ್ನು ಮಾಡುವುದು ಅಪರೂಪ ಹಾಗಾಗಿಯೇ ಅವರ ವಿರುದ್ಧ ಬೇರೆ ಪಕ್ಷದ ನಾಯಕರು ವೈಯಕ್ತಿಕ ದಾಳಿಗಳನ್ನು ಮಾಡುವುದು ಕಡಿಮೆ. ಬಳ್ಳಾರಿಯಲ್ಲಿ ಸಹ 'ಶ್ರೀರಾಮುಲು ಅಣ್ಣ' ಎಂದೇ ಸಂಭೋದಿಸುತ್ತಾ ರಾಮುಲು ವಿರುದ್ಧ ಸಂಯಮದಿಂದಲೇ ಡಿ.ಕೆ.ಶಿವಕುಮಾರ್ ಆರೋಪಗಳನ್ನು ಮಾಡುತ್ತಿದ್ದಾರೆ.












Click it and Unblock the Notifications