ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಒಕ್ಕಲಿಗ, ವಿಪಕ್ಷ ನಾಯಕ ಸ್ಥಾನಕ್ಕೆ ಲಿಂಗಾಯತ: ಈ ಎರಡು ಹೆಸರಿನ ಮೇಲೆ ಹೈಕಮಾಂಡ್ ಒಲವು
ಬೆಂಗಳೂರು, ಜೂನ್ 14: ಕರ್ನಾಟಕ ವಿಧಾನಮಂಡಲ ಅಧಿವೇಶನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯು ಈ ವಾರದ ಅಂತ್ಯದೊಳಗೆ ವಿರೋಧ ಪಕ್ಷದ ನಾಯಕ ಮತ್ತು ಪಕ್ಷದ ರಾಜ್ಯಾಧ್ಯಕ್ಷರ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ.
ಉನ್ನತ ಹುದ್ದೆಗಳಿಗೆ ಲಿಂಗಾಯತ-ಒಕ್ಕಲಿಗ ಸಂಯೋಜನೆಗೆ ಹೈಕಮಾಂಡ್ ಒಲವು ತೋರಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ವಿಧಾನಸಭೆ ಚುನಾವಣೆ ಫಲಿತಾಂಶ ಬಂದು ಒಂದು ತಿಂಗಳು ಕಳೆದರೂ ಬಿಜೆಪಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ. ಈ ವಿಚಾರವಾಗಿ ಪಕ್ಷದ ಕಾರ್ಯಕರ್ತರು ಆಕ್ರೋಶಗೊಂಡಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತಿದೆ.

ಆದರೆ, ಇನ್ನೆರಡು ದಿನಗಳಲ್ಲಿ ಪಕ್ಷದ ವರಿಷ್ಠರು ಹೆಸರು ಪ್ರಕಟಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ನಾಯಕರು ತಿಳಿಸಿದ್ದಾರೆ. ಹೈಕಮಾಂಡ್ ತಡ ಮಾಡದೆ ಹೆಸರುಗಳನ್ನು ಪ್ರಕಟಿಸಬೇಕು ಎಂದು ಬಿಜೆಪಿ ಮುಖಂಡರೊಬ್ಬರು 'ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಗೆ ತಿಳಿಸಿದ್ದಾರೆ.
ಉನ್ನತ ನಾಯಕರ ಮನಸ್ಸಿನಲ್ಲಿ ಕೆಲವು ಹೆಸರುಗಳಿವೆ ಮತ್ತು ಅವರು ಪಕ್ಷದ ಶಾಸಕರು, ಎಂಎಲ್‌ಸಿಗಳು, ಜಿಲ್ಲಾಧ್ಯಕ್ಷರು ಮತ್ತು ಇತರ ನಾಯಕರಿಂದ ಪ್ರತಿಕ್ರಿಯೆಯನ್ನು ಪಡೆದಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅವಧಿಯು ಆಗಸ್ಟ್ 2022 ರಲ್ಲಿ ಕೊನೆಗೊಂಡಿದೆ. ವಿಧಾನಸಭಾ ಚುನಾವಣೆಗಳ ಕಾರಣ, ಅವರ ಅವಧಿಯನ್ನು ವಿಸ್ತರಿಸಲಾಯಿತು. ನಾಲ್ಕು ವರ್ಷಗಳ ನಂತರ ಬಿಜೆಪಿಗೆ ಹೊಸ ಅಧ್ಯಕ್ಷರು ಬರಲಿದ್ದಾರೆ.
ಮಾಜಿ ಸಚಿವರಾದ ಸುನೀಲ್ ಕುಮಾರ್ ಮತ್ತು ಡಾ ಸಿಎನ್ ಅಶ್ವಥ್ ನಾರಾಯಣ ಅವರ ಹೆಸರುಗಳು ಕೇಳಿಬಂದಿದವೆ. ಆದರೆ, ಒಕ್ಕಲಿಗ ಸಮುದಾಯಕ್ಕೆ ಸೇರಿದ ಡಾ ಸಿಎನ್ ಅಶ್ವಥ್ ನಾರಾಯಣ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಬಹುದು ಎನ್ನಲಾಗುತ್ತಿದೆ.
ಲಿಂಗಾಯತ ಸಮುದಾಯದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ಹೈಕಮಾಂಡ್ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಬಿಜೆಪಿಯ ಮತ್ತೊಬ್ಬ ಲಿಂಗಾಯತ ಶಾಸಕ ಅರವಿಂದ್ ಬೆಲ್ಲದ್ ಸಹ ಸ್ಪರ್ಧೆಯಲ್ಲಿದ್ದಾರೆ.
ಕರ್ನಾಟಕದ ದೊಡ್ಡ ಸಮಯದಾಯಗಳಾದ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ಮತದಾರರನ್ನು ಓಲೈಸಲು ಪಕ್ಷದ ಹೈಕಮಾಂಡ್ ಲಿಂಗಾಯತ-ವೊಕ್ಕಲಿಗ ಸಂಯೋಜನೆಯನ್ನು ಬಯಸಿದೆ ಎಂದು ಮೂಲಗಳು ತಿಳಿಸಿವೆ.
'ಒಕ್ಕಲಿಗ ಮತಗಳು ಜೆಡಿಎಸ್‌ನಿಂದ ಕಾಂಗ್ರೆಸ್‌ನತ್ತ ಹೊರಳಿದ್ದರೆ, ಲಿಂಗಾಯತ ಮತದಾರರು ಬಿಜೆಪಿಯಿಂದ ದೂರ ಸರಿದಿದ್ದಾರೆ ಎಂದು ವಿಧಾನಸಭಾ ಸಮೀಕ್ಷೆಗಳು ತೋರಿಸಿವೆ. ಅಲ್ಲದೆ, ಬೆಂಗಳೂರಿನ ಮಲ್ಲೇಶ್ವರಂನಿಂದ ಅಶ್ವಥ್ ನಾರಾಯಣ ಮತ್ತು ಉತ್ತರ ಕರ್ನಾಟಕದ ವಿಜಯಪುರದಿಂದ ಯತ್ನಾಳ್ ಅವರನ್ನು ಆಯ್ಕೆ ಮಾಡುವ ಮೂಲಕ ಪಕ್ಷವು ಪ್ರದೇಶವಾರು ಹಂಚಿಕೆಗೂ ಮಣೆ ಹಾಕಬಹುದು' ಎಂದು ಮೂಲಗಳು ತಿಳಿಸಿವೆ.












Click it and Unblock the Notifications