Karnataka Bandh: ಬಂಧಿತ ಕನ್ನಡಪರ ಹೋರಾಟಗಾರರ ಬಿಡುಗಡೆಗೆ ಎಚ್‌ಡಿ ಕುಮಾರಸ್ವಾಮಿ ಆಗ್ರಹ
ಬೆಂಗಳೂರು, ಸೆಪ್ಟೆಂಬರ್ 29: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಈ ವೇಳೆ ಬಂಧಿತರಾಗಿರುವ ಕನ್ನಡಪರ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಶುಕ್ರವಾರ ಒತ್ತಾಯಿಸಿದ್ದಾರೆ.
ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಕನ್ನಡ ಮತ್ತು ರೈತಪರ ಸಂಘಟನೆಗಳ 'ಕನ್ನಡ ಒಕ್ಕೂಟ' ಇಂದಿನ ಬಂದ್‌ಗೆ ಕರೆ ನೀಡಿದೆ.

ಕಾವೇರಿ ವಿಚಾರವಾಗಿ ರೈತರು ಮತ್ತು ಕನ್ನಡ ಪರ ಸಂಘಟನೆಗಳು ಬಂದ್‌ಗೆ ಇಂದು ಬೀದಿಗಿಳಿದು ಪ್ರತಿಭಟಿಸುತ್ತಿವೆ.
ಈ ವೇಳೆ ಬಂಧಿತರಾದ ಕನ್ನಡಪರ ಹೋರಾಟಗಾರರ ವಿಚಾರವಾಗಿ ಮಾತನಾಡಿರುವ ಕುಮಾರಸ್ವಾಮಿ, 'ಕನ್ನಡ ಕುಟುಂಬ'ದ ಒಗ್ಗಟ್ಟು ಜಾಗೃತವಾಗಬೇಕು. ಇದು ನೆರೆಯ ರಾಜ್ಯಕ್ಕೆ ಗೊತ್ತಾಗಬೇಕೆಂದು ತಿಳಿಸಿದ್ದಾರೆ.
'ಇಡೀ ಕರ್ನಾಟಕ ಕಾವೇರಿ ಹೋರಾಟಕ್ಕಾಗಿ ಮಿಡಿಯುತ್ತಿದೆ. ಇಂದಿನ ಬಂದ್‌ಗೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ' ಎಂದು ಅವರು 'X' ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

ನೆಲ, ಭಾಷೆ, ಜಲದ ಪ್ರಶ್ನೆ ಬಂದಾಗ ಎಲ್ಲರೂ ಒಗ್ಗಟ್ಟಾಗಿರಬೇಕು ಎಂದಿರುವ ಕುಮಾರಸ್ವಾಮಿ, ಕನ್ನಡ ಮನೆತನದ ಈ ಸೌಹಾರ್ದತೆ, ಒಗ್ಗಟ್ಟು ನೆರೆಯ ರಾಜ್ಯಗಳಿಗೆ ಎಚ್ಚರಿಕೆಯ ಗಂಟೆಯಾಗಲಿ ಎಂದು ತಿಳಿಸಿದ್ದಾರೆ..
ಸರಕಾರ ಕನ್ನಡಗರ ಭಾವನೆಯನ್ನು ಹತ್ತಿಕ್ಕಬಾರದು, ಈಗಾಗಲೇ ಬಂಧನಕ್ಕೊಳಗಾಗಿರುವ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಪೊಲೀಸರ ವಶಕ್ಕೆ ವಾಟಾಳ್ ನಾಗರಾಜ್
ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅವರು ಬೆಂಗಳೂರಿನ ಟೌನ್‌ಹಾಲ್ ಬಳಿ ಪ್ರತಿಭಟನೆ ನಡೆಸಲು ಮುಂದಾಗಿದ್ದರಿಂದ ಅವರನ್ನು ವಶಕ್ಕೆ ಪಡೆದು ಪ್ರಿಡಂ ಪಾರ್ಕ್‌ನಲ್ಲಿ ಬಿಡಲಾಯಿತು. ಇದೇ ವೇಳೆ, ಸರ್ಕಾರದ ವಿರುದ್ದ ಕನ್ನಡಪರ ಹೋರಾಟಗಾರರು ಘೋಷಣೆ ಕೂಗಿದರು.
ವಿಮಾನ ನಿಲ್ದಾಣದಲ್ಲೂ ಪ್ರತಿಭಟನೆ
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿಮಾನಗಳಿಗೆ ಅಡಚಣೆಯಾಗುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರಿಗೆ ಬರುತ್ತಿದ್ದ ಮತ್ತು ಇಲ್ಲಿಂದ ತೆರಳುತ್ತಿದ್ದ ಸುಮಾರು 44 ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
'ಸೆಪ್ಟೆಂಬರ್ 29, 2023 ರಂದು ವಿವಿಧ ಒಕ್ಕೂಟಗಳು ಮತ್ತು ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ನಾವು ಸಾರಿಗೆ ಸೇವೆಗಳಲ್ಲಿ ಅಡಚಣೆಯನ್ನು ಎದುರಿಸಲಿದ್ದೇವೆ. ಮುಂಜಾಗ್ರತಾ ಕ್ರಮವಾಗಿ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಯೋಜಿಸಬೇಕೆಂದು ವಿನಂತಿ ಮಾಡುತ್ತಿದ್ದೇವೆ. ಹೆಚ್ಚಿನ ಅಪ್‌ಡೇಟ್‌ಗಾಗಿ ಆಯಾ ವಿಮಾನಯಾನ ಸಂಸ್ಥೆಗಳನ್ನು ಅನುಸರಿಸಬೇಕೆಂದು ಮನವಿ ಮಾಡುತ್ತೇವೆ' ಎಂದು ಬೆಂಗಳೂರು ವಿಮಾನ ನಿಲ್ದಾಣವು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಕನ್ನಡ ಪರ ಸಂಘಟನೆಗಳ ಹೋರಾಟಗಾರರು ಇಂದು ಬೆಳಿಗ್ಗೆ ವಿಮಾನ ನಿಲ್ದಾಣದ ಹೊರಗೆ ಪ್ರತಿಭಟನೆಗಳನ್ನು ನಡೆಸಲು ಮುಂದಾಗಿದ್ದರು. ಟಿಕೆಟ್ ಖರೀದಿಸಿ ವಿಮಾನ ನಿಲ್ದಾಣದೊಳಗೆ ನುಗ್ಗಲು ಯತ್ನಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಹಲವರನ್ನು ಬಂಧಿಸಿದರು.












Click it and Unblock the Notifications