ಸರ್ಕಾರದ ವಿರುದ್ಧ ಸಿಡಿದೆದ್ದ ಸಾರಥಿಗಳು: ಕಪ್ಪು ಬಾವುಟ ಕಟ್ಟಿ ರಸ್ತೆಗಿಳಿದ ಆಟೋಗಳು
ಬೆಂಗಳೂರು, ಆಗಸ್ಟ್ 31: ರಾಜ್ಯ ಸರ್ಕಾರ ಮತ್ತು ಆಟೋ ಚಾಲಕರ ನಡುವಿನ ಸಂಘರ್ಷಕ್ಕೆ ಸದ್ಯಕ್ಕೆ ತೆರೆ ಬೀಳುವ ಲಕ್ಷಣಗಳು ಕಾಣುತ್ತಿಲ್ಲ. ಸರ್ಕಾರದ ವಿರುದ್ಧ ಮತ್ತೆ ಸಿಡಿದೆದ್ದಿರುವ ಆಟೋ ಸಂಘಟನೆಗಳು, ರಸ್ತೆಗಿಳಿದು ಪ್ರತಿಭಟನೆಗೆ ಮುಂದಾಗಿವೆ. ಬೇಡಿಕೆ ಈಡೇರಿಕೆ ಮಾಡದೇ ಇದ್ದರೆ ನಮ್ಮ ಆಕ್ರೋಶ ನಡೆಸುವ ರೀತಿ ಬೇರೆಯದ್ದೇ ಆಗಿರುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಸರ್ಕಾರ ಮತ್ತು ಆಟೋ ಚಾಲಕರ ನಡುವಿನ ತಿಕ್ಕಾಟ ದಿನ ಕಳೆದಂತೆ ಹೆಚ್ಚಾಗುತ್ತಿದೆ. ಸಮಸ್ಯೆಗಳ ಬಗೆಹರಿಕೆ ಸಂಬಂಧ ಸರ್ಕಾರದ ಜೊತೆ ಅನೇಕ ಸಭೆಗಳಾದರೂ, ಸಮಸ್ಯೆಗಳಿಗೆ ಮುಕ್ತಿ ಸಿಗದ ಹಿನ್ನೆಲೆಯಲ್ಲಿ ಮತ್ತೆ ರಸ್ತೆಗಿಳಿದು ಪ್ರತಿಭಟನೆ ಮಾಡುವುದರ ಜೊತೆಗೆ ಕಪ್ಪು ಬಾವುಟ ಕಟ್ಟಿಕೊಂಡೆ ಸೇವೆ ನೀಡುವುದರ ಜೊತೆಗೆ ಸರ್ಕಾರದ ವಿರುದ್ಧ ಸಮರಕ್ಕೆ ಆಟೋ ಚಾಲಕರು ಮುಂದಾಗಿದ್ದಾರೆ.

ತಮಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಆಟೋ ಚಾಲಕರು ಸಾರಿಗೆ ಸಚಿವರನ್ನು ಭೇಟಿ ಆದರು, ನಮ್ಮ ಸಂಸಾರ ನಡೆಸೋದು ಕಷ್ಟ ಆಗುತ್ತಿದೆ ಎಂದು ಅಹವಾಲು ಹೇಳಿಕೊಂಡರು. ಆದರೆ ಯಾವ ನೆರವೂ ಕೂಡ ಆಗದ ಹಿನ್ನೆಲೆಯಲ್ಲಿ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಶಕ್ತಿ ಯೋಜನೆ ಜಾರಿ ಆದಾಗಿನಿಂದ ಆಟೋ ಹತ್ತುವವರ ಸಂಖ್ಯೆ ಗಣನೀಯ ಇಳಿಕೆ ಆಗಿದೆ. ಬಸ್ ಫ್ರೀ ಅಂತ ಜನ ಆಟೋ ಹತ್ತಲ್ಲ ಒಂದೊಮ್ಮೆ ಹತ್ತಿದರೂ ಕಡಿಮೆ ಹಣ ನೀಡುತ್ತಾರೆ. ಚರ್ಚೆ ಮಾಡುತ್ತಾರೆ. ಒಂದು ಬಾಡಿಗೆ ಕೂಡ ನೆಟ್ಟಗೆ ಆಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಬಾಡಿಗೆ ಬೈಕ್, ಟ್ಯಾಕ್ಸಿ ಬ್ಯಾನ್ ವಿಚಾರ ಸಂಬಂಧ ಅನೇಕ ಬಾರಿ ಸರ್ಕಾರ ಮತ್ತು ಸಂಘಟನೆಗಳ ನಡುವೆ ಸಭೆಗಳಾದರೂ ಸಮಸ್ಯೆಗೆ ಪರಿಹಾರ ಮಾತ್ರ ಸಿಗುತ್ತಿಲ್ಲ. ಈಗಾಗಲೇ ಈ ಬಗ್ಗೆ ಹತ್ತಾರು ಬಾರಿ ಸರ್ಕಾರ, ಸಾರಿಗೆ ಇಲಾಖೆಗೆ ಮನವಿ ಮಾಡಿದರೂ, ಸಮಸ್ಯೆ ಬಗೆಹರಿಯುತ್ತಿಲ್ಲ. ಪ್ರಕರಣ ನ್ಯಾಯಾಲಯದಲ್ಲಿದ್ದರು, ಬ್ಯಾನ್ ಮಾಡುವ ವಿಚಾರವಾಗಿ ಸರ್ಕಾರ ಸರಿಯಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡುತ್ತಿಲ್ಲ ಎನ್ನುವುದು ಆಟೋ ಸಂಘಟನೆಗಳ ವಾದವಾಗಿದೆ.
ಸದ್ಯ ಇದೇ ವಿಚಾರ ಆಟೋ ಚಾಲಕರನ್ನು ಕೆರಳಿಸಿದೆ. ಈ ಕಾರಣಕ್ಕಾಗಿ ಬೆಂಗಳೂರಿನ ಆಟೋ ಸಂಘಟನೆಗಳು, ನಿತ್ಯ ಸೇವೆ ಮುಂದುವರೆಸುವುದರ ಜೊತೆಗೆ ಕಪ್ಪು ಬಾವುಟಗಳನ್ನು ಕಟ್ಟಿಕೊಂಡೇ ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ತೀರ್ಮಾನ ಮಾಡಿವೆ.

ಇನ್ನು ಈ ಹೋರಾಟದ ಸಂಬಂಧ ಇಂದಿನಿಂದ ಎಲ್ಲಾ ಆಟೋಗಳಲ್ಲಿ ಕಪ್ಪು ಬಾವುಟಗಳನ್ನು ಕಟ್ಟಿಕೊಂಡು ರಸ್ತೆಗಿಳಿಯಲು ಆಟೋ ಸಂಘಟನೆಗಳು ಚಾಲಕರಿಗೆ ಮನವಿ ಮಾಡಿವೆ.
ಒಂದೊಮ್ಮೆ ಸರ್ಕಾರ ಈ ಪ್ರತಿಭಟನೆಗೂ ಜಗ್ಗದೆ ಇದ್ದರೆ ರಾಜ್ಯಪಾಲರಿಗೂ ದೂರು ನೀಡುವುದರ ಜೊತೆಗೆ ದಯಾಮರಣಕ್ಕೆ ಪತ್ರ ಬರೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇಂದಿನಿಂದ ಬಹುತೇಕ ಆಟೋ ಚಾಲಕರು ಕಪ್ಪು ಬಾವುಟ ಕಟ್ಟಿಕೊಂಡು ರಸ್ತೆಗಿಳಿಯಲು ತೀರ್ಮಾನ ಮಾಡಿದ್ದಾರೆ. ಆದರೆ ಸರ್ಕಾರ ಈಗಲಾದರು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಯೋಚನೆ ಮಾಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications