Karnataka Election: ಐವತ್ತಾರು ಇಂಚಿನ ಎದೆಯ ಪ್ರಧಾನಿ ಬೇಕಾದ್ರೂ ಚರ್ಚೆಗೆ ಬರಲಿ: ಸಿದ್ದರಾಮಯ್ಯ ಸವಾಲು
ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ಎಲ್ಲಾ ಪಕ್ಷಗಳ ನಡುವಿನ ಮಾತಿನ ಸಮರ ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳ ಬಗ್ಗೆ ಕುಹುಕವಾಡಿರುವುದಕ್ಕೆ ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಬಗ್ಗೆ ಕುಹಕವಾಡುವ @BJP4Karnataka ನಾಯಕರಿಗೆ ನನ್ನದೊಂದು ನೇರ ಸವಾಲು.
— Siddaramaiah (@siddaramaiah) April 28, 2023
2013ರ ಕಾಂಗ್ರೆಸ್ ಪ್ರಣಾಳಿಕೆ ಮತ್ತು 2018ರ ಬಿಜೆಪಿ ಪ್ರಣಾಳಿಕೆಗಳಲ್ಲಿ ನೀಡಲಾದ ಭರವಸೆಗಳು ಹಾಗೂ ಈಡೇರಿಸಲಾಗಿರುವ ಭರವಸೆಗಳ ಬಗ್ಗೆ ಬಹಿರಂಗವಾಗಿ ಚರ್ಚೆ ನಡೆಸೋಣ.
ದಮ್ –ತಾಕತ್ ಇದ್ದ ಮುಖ್ಯಮಂತ್ರಿಗಳು ಇಲ್ಲವೇ ಐವತ್ತಾರು ಇಂಚಿನ…
ಈ ಕುರಿತು ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಬಗ್ಗೆ ಕುಹಕವಾಡುವ ಬಿಜೆಪಿ ನಾಯಕರಿಗೆ ನೇರ ಸವಾಲು ಹಾಕಿದ್ದಾರೆ. 2013ರ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಪ್ರಣಾಳಿಕೆ ಮತ್ತು 2018ರ ಬಿಜೆಪಿ ಪ್ರಣಾಳಿಕೆಗಳಲ್ಲಿ ನೀಡಲಾದ ಭರವಸೆಗಳು ಮತ್ತು ಈಡೇರಿಸಿರುವ ಭರವಸೆಗಳ ಬಗ್ಗೆ ಬಹಿರಂಗವಾಗಿ ಚರ್ಚೆ ನಡೆಸೋಣ ಎಂದು ಬಹಿರಂಗವಾಗಿ ಸವಾಲು ಹಾಕಿದ್ದಾರೆ.

"ದಮ್ಮು-ತಾಕತ್ತು ಇದ್ದರೆ ಇದ್ದ ಮುಖ್ಯಮಂತ್ರಿಗಳು ಇಲ್ಲವೇ ಐವತ್ತಾರು ಇಂಚಿನ ಪ್ರಧಾನಿಗಳು ಯಾರಾದರೂ ಬರಲಿ ನಾನು ಚರ್ಚೆಗೆ ಸಿದ್ಧವಿದ್ದೇನೆ." ಎಂದು ಬಿಜೆಪಿ ನಾಯಕರಿಗೆ ಬಹಿರಂಗವಾಗಿ ಸವಾಲು ಹಾಕಿದ್ದಾರೆ. ನುಡಿದಂತೆ ನಡೆದಿರುವ ವಿಶ್ವಾಸ ನನ್ನದು, ಜನತಾ ಜನಾರ್ಧನರೇ ಇದಕ್ಕೆ ಸಾಕ್ಷಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, "ಕಾಂಗ್ರೆಸ್ ಪಕ್ಷಕ್ಕೆ ವಾರಂಟಿ ಇಲ್ಲ ಅವರು ಯಾವ ಗ್ಯಾರಂಟಿ ಕೊಡಲು ಸಾಧ್ಯ, ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳಿಗೆ ಜನ ಇನ್ನೂ ಕಾಯುತ್ತಿದ್ದಾರೆ" ಎಂದು ವ್ಯಂಗ್ಯವಾಡಿದ್ದರು. ರಾಜ್ಯ ಬಿಜೆಪಿ ನಾಯಕರು ಕೂಡ ಕಾಂಗ್ರೆಸ್ ಗ್ಯಾರಂಟಿಗಳನ್ನು ಟೀಕಿಸಿದ್ದರು.
ಸಿದ್ದರಾಮನಹುಂಡಿ ಘಟನೆ ಬಗ್ಗೆಯೂ ಟ್ವೀಟ್
ಸಿದ್ದರಾಮನಹುಂಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಘಟನೆ ಬಗ್ಗೆ ಕೂಡ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. "ಸಿದ್ದರಾಮನಹುಂಡಿಯಲ್ಲಿ ಗುರುವಾರ ನಡೆದಿರುವ ಗಲಾಟೆ ಬೈಕ್ ಅಪಘಾತಕ್ಕೆ ಸಂಬಂಧಿಸಿದ್ದೇ ಹೊರತು ಚುನಾವಣಾ ಘರ್ಷಣೆಯಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದರ ಹೊರತಾಗಿಯೂ ಇದಕ್ಕೆ ರಾಜಕೀಯ ಘರ್ಷಣೆಯ ಬಣ್ಣ ಬಳಿದು ಸುಳ್ಳು ಆರೋಪ ಮಾಡುತ್ತಿರುವ ಸಂಸದ ಪ್ರತಾಪ್ ಸಿಂಹ ಮತ್ತು ಮತ್ತು ಇತರರ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಒತ್ತಾಯಿಸುತ್ತೇನೆ." ಎಂದು ಅವರು ಟ್ವೀಟ್ ಮಾಡಿದ್ದಾರೆ.
ಯತೀಂದ್ರ ಸಿದ್ದರಾಮಯ್ಯ ಕೂಡ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿ, ಅಪಘಾತದಿಂದಾಗಿ ಘರ್ಷಣೆ ನಡೆದಿದೆ, ಕಾಂಗ್ರೆಸ್ ಕಾರ್ಯಕರ್ತರು ದಾಳಿ ಮಾಡಿಲ್ಲ ಪೊಲೀಸರು ಕೂಡ ಇದನ್ನು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಬೇಕಂತಲೇ ಗಲಭೆ ಮಾಡಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದರು.












Click it and Unblock the Notifications