ಸದನದಲ್ಲಿ ಸದಾನಂದ ಗೌಡರ ಸೂಟಿನ ಬಗ್ಗೆ ಚರ್ಚೆ
ಬೆಂಗಳೂರು, ಜ.30 : ಗುರುವಾರದ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ವಿಧಾನಪರಿಷತ್ತಿನಲ್ಲಿ ಮಾಜಿ ಸಿಎಂ ಡಿವಿ ಸದಾನಂದ ಗೌಡರ ಸೂಟಿನ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯಿತು. ತಾವು ಸೂಟು ಧರಿಸುವುದು ಯಾಕೆ ಎಂದು ಸದಾನಂದ ಗೌಡರು ಸದನಕ್ಕೆ ವಿವರಣೆ ನೀಡಿದರು.
ಗುರುವಾರದ ಕಲಾಪಕ್ಕೆ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಡಿ.ವಿ.ಸದಾನಂದ ಗೌಡ ಸೂಟ್ ಧರಿಸಿ ಬಂದಿದ್ದರು. ಕಲಾಪ ಆರಂಭವಾದಾಗ ಸಭಾಪತಿ ಡಿ.ಎಚ್.ಶಂಕರಮೂರ್ತಿ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡರು. ಈ ಸಂದರ್ಭದಲ್ಲಿ ಪ್ರಶ್ನೆ ಕೇಳಿದ ಮೂವರು ಸದಸ್ಯರು ಸದನದಲ್ಲಿ ಉಪಸ್ಥಿತರಿರಲಿಲ್ಲ.

ಇದರಿಂದ ಅಸಮಾಧಾನಗೊಂಡ ಡಿ.ಎಚ್.ಶಂಕರಮೂರ್ತಿ ಸದನದಲ್ಲಿ ಏಕೆ ಹೀಗಾಗುತ್ತದೆ ಎಮದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ವಿಪಕ್ಷದ ಮುಖ್ಯ ಸಚೇತಕ ಶಿವಯೋಗಿ ಸ್ವಾಮಿ, ನಮ್ಮ ನಾಯಕರು ಸೂಟು ಧರಿಸಿ ಬಂದಿದ್ದಾರೆ. ಆದ್ದರಿಂದ ಹೆದರಿದ ನಮ್ಮ ಸದಸ್ಯರು ಸದನಕ್ಕೆ ಬಂದಿಲ್ಲ ಎಂದು ಹೇಳಿದರು. [ಸದನದಲ್ಲಿ ಹಾಸ್ಯ ಚಾಟಕಿಗಳಿಗೆ ಬರವಿಲ್ಲ]
ತಕ್ಷಣ ಸದನದಲ್ಲಿ ಸದಾನಂದ ಗೌಡರು ಸೂಟು ಧರಿಸಿ ಬಂದಿದ್ದೇಕೆ ಎಂಬ ಬಗ್ಗೆ ಚರ್ಚೆ ಆರಂಭವಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಡಿ.ವಿ.ಸದಾನಂದಗೌಡರು, ನನಗೆ ಸೂಟ್ ಮೇಲೆ ಆಸಕ್ತಿಯಿಲ್ಲ. ಆದರೆ, ನಾನು ಮುಖ್ಯಮಂತ್ರಿಯಾಗಿದ್ದ ಕಾಲಾವಧಿಯಲ್ಲಿ ಗ್ಲೋಬಲ್ ಮೀಟ್, ಬಂಡವಾಳಗಾರರ ಸಮಾವೇಶದಲ್ಲಿ ಭಾಗವಹಿಸಲು ಸೂಟುಕೊಂಡು ಕೊಂಡಿದ್ದೆ.
11 ತಿಂಗಳ ನಂತರ ಸಿಎಂ ಸ್ಥಾನ ಹೋಗಿ 12 ಜೊತೆ ಸೂಟು ಉಳಿಯಿತು. ಮನೆಯಲ್ಲಿಟ್ಟರೆ ಅವು ಧೂಳು ಹಿಡಿಯುತ್ತವೆ ಎಂದು ಅಧಿವೇಶನಕ್ಕಾದರೂ ಧರಿಸಿಕೊಂಡು ಹೋಗಿ ಎಂದು ಪತ್ನಿ ಹೇಳಿದ ಹಿನ್ನೆಲೆಯಲ್ಲಿ ಇಂದು ಸೂಟ್ ಧರಿಸಿ ಬಂದಿದ್ದೇನೆ ಎಂದು ಚರ್ಚೆಗೆ ತೆರೆ ಎಳೆದರು.
ಕಲಾಪದ ಮುಖ್ಯಾಂಶಗಳು
ಉಪನ್ಯಾಸಕರ ಖಾಯಂ ಇಲ್ಲ : ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಲು ಸಾಧ್ಯವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಸದನದಲ್ಲಿ ಹೇಳಿದ್ದಾರೆ. ಆದರೆ, ಅವರಿಗೆ ನೀಡಲಾಗುವುವ ಮಾಸಿಕ ಗೌರವಧನ ಹೆಚ್ಚಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಬಿಬಿಎಂಪಿ ಜೊತೆ ಚರ್ಚಿಸಿ ಕ್ರಮ : ಬೆಂಗಳೂರಿನಲ್ಲಿರುವ ಹೈಟೆಕ್ಷನ್ ವೈರ್‌ಗಳನ್ನು ತೆಗೆದು ಅಂಡರ್‌ಗ್ರೌಂಡ್ ಕೇಬಲ್ ಅಳವಡಿಸುವ ಬಗ್ಗೆ ಬಿಬಿಎಂಪಿ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿಧಾನ ಪರಿಷತ್ತಿನಲ್ಲಿ ಹೇಳಿದ್ದಾರೆ. ಬೃಹತ್ ನಗರಗಳಲ್ಲಿ ಅಂಡರ್‌ಗ್ರೌಂಡ್ ವಿದ್ಯುತ್ ಕೇಬಲ್ ಅಳವಡಿಸಲಾಗಿದೆ. ಇದೇ ವಿಧಾನವನ್ನು ಬೆಂಗಳೂರಿನಲ್ಲಿ ಅಳವಡಿಸುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದ ತಿಳಿಸಿದರು.
ಸಿಬಿಐ ತನಿಖೆಮಾಡಿಸಿ : ಬೆಂಗಳೂರಿನಲ್ಲಿ ಸಹಕಾರಿ ಗೃಹ ನಿರ್ಮಾಣ ಸಂಘಗಳು ನಿವೇಶನ ನೀಡುವುದಾಗಿ ವಂಚನೆ ಮಾಡಿ ಕೋಟ್ಯಂತರ ರೂ ಬೆಲೆಬಾಳುವ ಜಮೀನನ್ನು ದುರುಪಯೋಗ ಪಡಿಸಿಕೊಂಡಿವೆ ಈ ಕುರಿತು ತನಿಖೆ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಹೀಗೆ ನಿವೇಶನ ದುರುಪಯೋಗ ಮಾಡಿಸಿಕೊಂಡವರಲ್ಲಿ ಪ್ರಭಾವಿ ವ್ಯಕ್ತಿಗಳು ಸೇರಿದ್ದು, ಈ ಕುರಿತು ಚರ್ಚೆ ನಡೆಯಬೇಕು ಮತ್ತು ಸರ್ಕಾರ ಈ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಪರಿಸರಕ್ಕೆ ಧಕ್ಕೆಯಿಲ್ಲ : ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ಮರಳು ನೀತಿಯಿಂದಾಗಿ ಪರಿಸರಕ್ಕೆ ಯಾವುದೇ ಗಹಾನಿ ಉಂಟಾಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಸಭಾನಾಯಕ ಎಸ್.ಆರ್.ಪಾಟೀಲ್ ವಿಧಾನ ಪರಿಷತ್ತಿಗೆ ಉತ್ತರ ನೀಡಿದ್ದಾರೆ. ಮರಳು ಗಣಿಗಾರಿಕೆ ನಡೆಸಲು ನದಿ ಪಾತ್ರದಲ್ಲಿ ಯಾವುದೇ ರೀತಿಯ ಯಂತ್ರಗಳನ್ನು ಬಳಸುವಂತಿಲ್ಲ ಎಂಬ ನೀತಿ ರೂಪಿಸಲಾಗಿದೆ. ಆದ್ದರಿಂದ ಪರಿಸರಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ ಎಂದು ತಿಳಿಸಿದರು.
ಅನ್ನಭಾಗ್ಯದಿಂದಾಗಿ ದೌರ್ಭಾಗ್ಯ : ಅನ್ನಭಾಗ್ಯ ಯೋಜನೆಯ ಲೋಪದೋಷಗಳ ಕುರಿತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸರ್ಕಾವನ್ನು ಗುರುವಾರ ತರಾಟೆಗೆ ತೆಗೆದುಕೊಂಡರು. ಬಿಪಿಎಲ್ ಕಾರ್ಡ್ ಅಕ್ಕಿಯನ್ನು ಎಪಿಎಲ್‌ನವರಿಗೆ ಕೊಡಲಾಗುತ್ತಿದೆ. ಇದು ಎಪಿಎಲ್ ಕುಟುಂಬಗಳ ದೌರ್ಭಾಗ್ಯ. ಬಿಪಿಎಲ್‌ಗೆ ಅನ್ನಭಾಗ್ಯ ಎಂದು ಸರ್ಕಾರವನ್ನು ಟೀಕಿಸಿದರು. ಅನ್ನಭಾಗ್ಯ ಯೋಜನೆಯಲ್ಲಿ ಹಲವಾರು ಲೋಪದೋಷಗಳಿಗೆ ಅದನ್ನು ಸರ್ಕಾರ ಪರಿಹಾರ ಮಾಡಬೇಕೆಂದು ಒತ್ತಾಯಿಸಿದರು.












Click it and Unblock the Notifications