ಸಿಎಂ ಸೋಲಿಸಲು ಕಾಂಗ್ರೆಸ್ ಮೆಗಾಪ್ಲ್ಯಾನ್: ಮುನ್ನೆಲೆಗೆ ವಿನಯ್ ಕುಲಕರ್ಣಿ ಹೆಸರು- ಈ ತಂತ್ರಗಾರಿಕೆ ಹಿಂದಿನ ಲೆಕ್ಕಾಚಾರಗಳೇನು?
ಬಿಜೆಪಿ ಹಾಗೂ ಜೆಡಿಎಸ್‌ನ ಪ್ರಭಾವಿಗಳನ್ನು ಸೋಲಿಸಲು 'ಕೈ' ನಾಯಕರು ಹಲವಾರು ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಸೋಲಿಸಲೂ 'ಮೆಗಾಪ್ಲ್ಯಾನ್' ನಡೆದಿದೆ. ಈ ವರದಿ ಓದಿ.
ಬೆಂಗಳೂರು, ಫೆಬ್ರವರಿ 20: ಕರ್ನಾಟಕ ಚುನಾವಣೆಗೆ ಇನ್ನೆರಡು ತಿಂಗಳು ಬಾಕಿ ಇವೆ. ಈ ಬಾರಿಯ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂದು ಕಾಂಗ್ರೆಸ್ ಸಿದ್ದತೆ ನಡೆಸುತ್ತಿದೆ. ಇದರ ಭಾಗವಾಗಿ ಬಿಜೆಪಿ ಹಾಗೂ ಜೆಡಿಎಸ್‌ನ ಪ್ರಭಾವಿಗಳನ್ನು ಸೋಲಿಸಲು 'ಕೈ' ನಾಯಕರು ಹಲವಾರು ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಸೋಲಿಸಲೂ 'ಮೆಗಾಪ್ಲ್ಯಾನ್' ನಡೆದಿದೆ.

ಶಿಗ್ಗಾಂವಿ ಅಸೆಂಬ್ಲಿ ಕ್ಷೇತ್ರದಲ್ಲಿ ಬೊಮ್ಮಾಯಿ ಸ್ಪರ್ಧೆ
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರವು ರಾಜ್ಯದ ಪ್ರತಿಷ್ಠಿತ ವಿಧಾನಸಭೆ ಕ್ಷೇತ್ರಗಳಲ್ಲಿ ಒಂದು. ಇದು ಹಾವೇರಿ ಜಿಲ್ಲೆಯ ಭಾಗವಾಗಿದ್ದು, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬರುತ್ತದೆ. 2008ರಿಂದ ಈ ವರೆಗೆ ಬಸವರಾಜ ಬೊಮ್ಮಾಯಿ ಅವರು ಈ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2008ರಲ್ಲಿ ಜನತಾ ಪರಿವಾರವನ್ನು ತೊರೆದು ಭಾರತೀಯ ಜನತಾ ಪಕ್ಷಕ್ಕೆ ಬೊಮ್ಮಾಯಿ ಸೇರ್ಪಡೆಯಾದರು. ಆ ವರ್ಷ ನಡೆದ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದರು. ಅದಕ್ಕೂ ಮೊದಲು ಬೊಮ್ಮಾಯಿ ಅವರು ಎಂಎಲ್‌ಸಿಯಾಗಿ ಸೇವೆ ಸಲ್ಲಿಸಿದ್ದಾರೆ. 2013, 2018ರಲ್ಲಿ ಶಿಗ್ಗಾಂವಿ ಕ್ಷೇತ್ರದಿಂದ ಬೊಮ್ಮಾಯಿ ಅವರು ಮರು ಆಯ್ಕೆಯಾದರು. ಈಗ ಸಿಎಂ ಆಗಿರುವ ಬೊಮ್ಮಾಯಿ ಅವರಿಂದ ಶಿಗ್ಗಾಂವಿ ಕ್ಷೇತ್ರವು ರಾಜ್ಯ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿದೆ.

ಶಿಗ್ಗಾಂವಿಯಲ್ಲಿ ಜಾತಿ ಲೆಕ್ಕಾಚಾರ
ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದಲ್ಲಿ ಈ ಬಾರಿ ಜಾತಿ ಲೆಕ್ಕಾಚಾರ ಶುರುವಾಗಿದೆ. ಈ ಕ್ಷೇತ್ರದಲ್ಲಿ ಲಿಂಗಾಯತರೇ ಅಧಿಕವಾಗಿದ್ದಾರೆ. ಅದರಲ್ಲೂ ಪಂಚಮಸಾಲಿ ಉಪ ಜಾತಿಗೆ ಸೇರದವರೇ ಹೆಚ್ಚು. ಬಸವರಾಜ ಬೊಮ್ಮಾಯಿ ಅವರು ಲಿಂಗಾಯತರಾಗಿದ್ದರೂ, ಪಂಚಮಸಾಲಿ ಉಪ ಜಾತಿಗೆ ಸೇರಿದವರಲ್ಲ. ಇಲ್ಲಿ ಲಿಂಗಾಯತ ಮತದಾರರ ಸಂಖ್ಯೆ ಸುಮಾರು 65,000 ರಷ್ಟಿದೆ. ಮುಸ್ಲಿಂ ಸಮುದಾಯದ ಮತದಾರರ ಸಂಖ್ಯೆ 52,000 ರಷ್ಟಿದೆ. ಕುರುಬ ಸಮುದಾಯಕ್ಕೆ ಸೇರಿದವರು 32,000 ರಷ್ಟಿದ್ದಾರೆ. ಲಂಬಾಣಿ ಮತದಾರರು 22,000 ರಷ್ಟಿದ್ದಾರೆ. ದಲಿತ ಸಮುದಾಯಗಳಿಗೆ ಸೇರಿದ ಮತದಾರರ ಸಂಖ್ಯೆ ಸುಮಾರು 25,000.

ಸಿಎಂ ಸೋಲಿಸಲು ಕಾಂಗ್ರೆಸ್ ತಂತ್ರ
ಶಿಗ್ಗಾಂವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಸೋಲಿಸಲು ಕಾಂಗ್ರೆಸ್ ತಂತ್ರ ರೂಪಿಸುತ್ತಿದೆ. ಜಾತಿವಾರು ಲೆಕ್ಕಾಚಾರ, ವರ್ಚಸ್ಸು ಹೊಂದಿರುವ ನಾಯಕರ ಆಯ್ಕೆಯ ಹಿಂದೆ ಕೈ ನಾಯಕರು ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಪ್ರಭಾವಿ ನಾಯಕ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಶಿಗ್ಗಾಂವಿಯಲ್ಲಿ ಕಣಕ್ಕಿಳಿಸುವ ಮಾತುಗಳು ಕೇಳಿಬಂದಿವೆ.

ವಿನಯ್ ಕುಲಕರ್ಣಿಯೇ ಏಕೆ?
ವಿನಯ್ ಕುಲಕರ್ಣಿ ಧಾರವಾಡ ಜಿಲ್ಲೆಯವರು. ಜಾತಿಯಿಂದ ಪಂಚಮಸಾಲಿ ಸಮುದಾಯಕ್ಕೆ ಸೇರಿದವರು. ಶಿಗ್ಗಾಂವಿ ಕ್ಷೇತ್ರದಲ್ಲಿ ಪಂಚಮಸಾಲಿಗಳೇ ಅಧಿಕವಾಗಿದ್ದಾರೆ. ಎರಡನೆಯ ಸಮುದಾಯ ಮುಸ್ಲಿಮರದ್ದು. ಮೂರನೆಯದಾಗಿ ಕುರುಬರು ಬರುತ್ತಾರೆ. ಈ ಜಾತಿ ಲೆಕ್ಕಾಚಾರಗಳನ್ನು ಮುಂದಿಟ್ಟುಕೊಂಡು ನೋಡುವುದಾದರೆ, ವಿನಯ್ ಕುಲಕರ್ಣಿ ಕಡೆಗೆ ಕಾಂಗ್ರೆಸ್ ನಾಯಕರ ಒಲವಿರಬಹುದು ಎಂಬ ಮಾತುಗಳು ಕೇಳಿಬಂದಿವೆ. ವಿನಯ್ ಕುಲಕರ್ಣಿ ಸ್ಪರ್ಧಿಸಿದರೆ, ಶಿಗ್ಗಾಂವಿಯಲ್ಲಿ ಭಾರೀ ಪೈಪೋಟಿ ನಡೆಯಲಿದೆ ಎಂಬುದನ್ನೂ ತೆಗೆದು ಹಾಕುವಂತಿಲ್ಲ.

ವಿನಯ್ ಕುಲಕರ್ಣಿಗೆ ಧಾರವಾಡಕ್ಕಿಲ್ಲ ಎಂಟ್ರಿ
ಧಾರವಾಡ ಗ್ರಾಮೀಣ ಭಾಗದಿಂದ ಸ್ಪರ್ಧಿಸಿ ಶಾಸಕರಾಗಿದ್ದ ವಿನಯ್ ಕುಲಕರ್ಣಿ ಕಳೆದ ಬಾರಿ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಜೈಲುವಾಸವನ್ನು ಅನುಭವಿಸಿದ್ದಾರೆ. ಈಗ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ವಿನಯ್ ಕುಲಕರ್ಣಿ ಅವರು ಧಾರವಾಡ ಕ್ಷೇತ್ರಕ್ಕೆ ಪ್ರವೇಶಿಸುವಂತಿಲ್ಲವೆಂಬ ಷರತ್ತನ್ನು ಕೋರ್ಟ್ ವಿಧಿಸಿದೆ. ಈ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ಅವರು ಧಾರವಾಡದಿಂದ ಸ್ಪರ್ಧಿಸಲು ಅವಕಾಶವಿಲ್ಲ ಎಂದು ಹೇಳಲಾಗುತ್ತಿದೆ. ಇದನ್ನು ಪ್ರಶ್ನಿಸಿ ವಿನಯ್ ಕುಲಕರ್ಣಿ ಕೋರ್ಟ್ ಮೊರೆ ಹೋಗಿದ್ದಾರೆ. ಒಂದು ವೇಳೆ, ಧಾರವಾಡ ಗ್ರಾಮೀಣ ಭಾಗದಿಂದ ವಿನಯ್ ಕುಲಕರ್ಣಿ ಸ್ಪರ್ಧಿಸದೇ ಹೋದರೆ, ಶಿಗ್ಗಾಂವಿ ಕ್ಷೇತ್ರದತ್ತ ಮೂಖ ಮಾಡಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಓಡಾಡುತ್ತಿವೆ.












Click it and Unblock the Notifications