ವಿಧಾನಸಭಾ ಚುನಾವಣೆ: ಇದು ನನ್ನ ಕೊನೆಯ ಚುನಾವಣೆ, ಆದರೆ ರಾಜಕೀಯವಾಗಿ ಸಕ್ರಿಯ ಎಂದು ಸಿದ್ದರಾಮಯ್ಯ
'ನಾನು ಬೆಂಗಳೂರು ಸಮೀಪದ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಯೋಚಿಸಿದ್ದೇನೆ, ಆದರೂ, ಹೈಕಮಾಂಡ್ ನನಗೆ ಎಲ್ಲಿಂದ ಸ್ಪರ್ಧಿಸಲು ಹೇಳುತ್ತದೋ ಅಲ್ಲಿಂದ ಸ್ಪರ್ಧಿಸುತ್ತೇನೆ'
ಬೆಂಗಳೂರು, ಫೆಬ್ರವರಿ. 14: ಮುಂಬರುವ ವಿಧಾನಸಭಾ ಚುನಾವಣೆಗಳು ತಮ್ಮ ಕೊನೆಯ ಚುನಾವಣಾ ಸಮರ, ಆದರೂ ರಾಜ್ಯ ರಾಜಕೀಯದಲ್ಲಿ ಸಕ್ರಿಯವಾಗಿಯೇ ಇರುವುದಾಗಿ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಮಂಗಳವಾರ ಪುನರುಚ್ಚರಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ಕೊಟ್ಟರೆ ಈ ಬಾರಿ ಕೋಲಾರದಿಂದ ಸ್ಪರ್ಧಿಸುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ತಿಂಗಳು ಪ್ರಕಟಿಸಿದ್ದಾರೆ. ಆದರೆ, ಪಕ್ಷವೂ ಬಾದಾಮಿ ಅಥವಾ ವರುಣಾ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿಯಿರಿ ಎಂದರೇ ಅದಕ್ಕೂ ಸಿದ್ಧ ಎಂದು ಹೇಳಿದ್ದಾರೆ.
ಮಂಗಳವಾರ ಬಾದಾಮಿಯಿಂದ ಆಗಮಿಸಿದ್ದ ತಮ್ಮ ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರರು ಮತ್ತೊಮ್ಮೆ ತಮ್ಮ ಪ್ರಸ್ತುತ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ.

ಈ ವೇಳೆ ಮಾತನಾಡಿರುವ ಸಿದ್ದರಾಮಯ್ಯ, "ನನ್ನ ಕಷ್ಟವನ್ನು ನೀವೂ ಅರ್ಥಮಾಡಿಕೊಳ್ಳಬೇಕು, ನನಗೆ ಈಗ 76 ವರ್ಷ, ಇದು ನನ್ನ ಕೊನೆಯ ಚುನಾವಣೆ. ನಾನು ಮತ್ತೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ,. ನಾನು ರಾಜಕೀಯದಲ್ಲಿರುತ್ತೇನೆ. ಆದರೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಇದು ನನ್ನ ಕೊನೆಯ ಚುನಾವಣೆ" ಎಂದು ಹೇಳಿದ್ದಾರೆ.
"ನಾನು ಬೆಂಗಳೂರು ಸಮೀಪದ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಯೋಚಿಸಿದ್ದೇನೆ, ಆದರೂ, ಹೈಕಮಾಂಡ್ ನನಗೆ ಎಲ್ಲಿಂದ ಸ್ಪರ್ಧಿಸಲು ಹೇಳುತ್ತದೋ ಅಲ್ಲಿಂದ ಸ್ಪರ್ಧಿಸುತ್ತೇನೆ" ಎಂದು ಮತ್ತೆ ಹೇಳಿದ್ದಾರೆ.
''ಬಾದಾಮಿಯಿಂದ ಸ್ಪರ್ಧಿಸುವಂತೆ ಕೇಳಿದರೆ ಬಾದಾಮಿಯಿಂದ ಸ್ಪರ್ಧಿಸುತ್ತೇನೆ, ವರುಣ ಎಂದು ಹೇಳಿದರೆ ಅಲ್ಲಿಂದ ಸ್ಪರ್ಧಿಸುತ್ತೇನೆ, ಕೋಲಾರ ಎಂದು ಹೇಳಿದರೆ ಅಲ್ಲಿಂದ ಸ್ಪರ್ಧಿಸುತ್ತೇನೆ, ದಯವಿಟ್ಟು ಬಾದಾಮಿಯಿಂದ ಸ್ಪರ್ಧಿಸದಿದ್ದರೇ ತಪ್ಪು ತಿಳಿಯಬೇಡಿ. ನಾನು ಬಾದಾಮಿ ಶಾಸಕನಾಗಿಯೇ ಕೆಲಸ ಮಾಡುತ್ತೇನೆ. ಬಾದಾಮಿ ಜನರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ" ಎಂದು ಭಾವುಕರಾಗಿದ್ದಾರೆ.

ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಹುದ್ದೆಯ ಮಹತ್ವಾಕಾಂಕ್ಷೆಯ ಹಂಬಲದಲ್ಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮ್ಯ, ಜನವರಿಯಲ್ಲಿ ಕೋಲಾರದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದರು.
ಪ್ರಸ್ತುತ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಿದ್ದರಾಮಯ್ಯ ಅವರು ಕ್ಷೇತ್ರದ ಜನರಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಹೆಚ್ಚಿನ ಸಮಯವನ್ನು ನೀಡಲು ಸಾಧ್ಯವಾಗದ ಕಾರಣ ಅಲ್ಲಿಂದ ಸ್ಪರ್ಧಿಸುವುದಿಲ್ಲ ಎಂದು ಪದೇ ಪದೇ ಸೂಚಿಸುತ್ತಿದ್ದಾರೆ.
ಬಾದಾಮಿಯಿಂದ ಮತ್ತೆ ಸ್ಪರ್ಧಿಸುವಂತೆ ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಅವರು, "ಕಾಂಗ್ರೆಸ್ ಪಕ್ಷಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ನಾನು ಬಾದಾಮಿಯಲ್ಲಿ ಹಾಲಿ ಸದಸ್ಯ ಎಂದು ಹೇಳಿದ್ದೇನೆ. ಹೈಕಮಾಂಡ್ ಮತ್ತೆ ಅಲ್ಲಿಂದ ಸ್ಪರ್ಧಿಸಿ ಎಂದು ಹೇಳಿದರೆ ಸ್ಪರ್ಧಿಸುತ್ತೇನೆ. ಬಾದಾಮಿಯ ಜನರು ಒಳ್ಳೆಯವರು, ನೀವು ನನ್ನನ್ನು ರೂಪಿಸಿದ್ದೀರಿ. ಮೈಸೂರಿನಿಂದ ಬಂದವವನ್ನನು ನಿಮ್ಮ ಜಾಗದಿಂದ ಗೆಲ್ಲಿಸಿದ್ದೀರಿ, ನಾನು ನಿಮಗೆ ಋಣಿಯಾಗಿದ್ದೇನೆ" ಎಂದಿದ್ದಾರೆ.
"ಬಾದಾಮಿಯಿಂದ ಮತ್ತೊಮ್ಮೆ ಸ್ಪರ್ಧಿಸುವಂತೆ ನಿಮ್ಮ ಒತ್ತಡದ ಕುರಿತು ಹೈಕಮಾಂಡ್‌ಗೆ ತಿಳಿಸುತ್ತೇನೆ. ಎಐಸಿಸಿ ಅಧಿವೇಶನದ ಬಳಿಕ ಫೆ.26ರ ನಂತರ ಹೈಕಮಾಂಡ್ ಸಭೆ ನಡೆಸಲಿದ್ದು, ಸ್ಕ್ರೀನಿಂಗ್ ಕಮಿಟಿ ಸಭೆ ಕರೆಯಲಾಗುವುದು.ಅಂತಿಮವಾಗಿ ಪಕ್ಷವು ನಿರ್ಧರಿಸುತ್ತದೆ" ಎಂದು ಹೇಳಿದ್ದಾರೆ.
2023ರ ವಿಧಾನಸಭಾ ಚುನಾವಣೆ ಕೊನೆಯ ಚುನಾವಣೆ ಎಂದು ಈ ಹಿಂದೆಯೂ ಘೋಷಿಸಿದ್ದ ಸಿದ್ದರಾಮಯ್ಯ ಅವರು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಹಾಲಿ ಸಿಎಂ ಆಗಿದ್ದ ಅವರು 2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ಜಿಟಿ ದೇವೇಗೌಡರ ವಿರುದ್ಧ 36,042 ಮತಗಳಿಂದ ಸೋತಿದ್ದರು.
ಆದರೂ, 2018 ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಇತರ ಕ್ಷೇತ್ರವಾದ ಬಾದಾಮಿಯನ್ನು ಗೆದ್ದು, ಬಿಜೆಪಿಯ ಅಭ್ಯರ್ಥಿ ಬಿ ಶ್ರೀರಾಮುಲು ಅವರನ್ನು 1,696 ಮತಗಳಿಂದ ಸೋಲಿಸಿದ್ದರು.
1983 ರಲ್ಲಿ ವಿಧಾನಸಭೆಗೆ ಪಾದಾರ್ಪಣೆ ಮಾಡಿದ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಿಂದ ಲೋಕದಳ ಪಕ್ಷದ ಟಿಕೆಟ್‌ನಲ್ಲಿ ಆಯ್ಕೆಯಾಗಿದ್ದರು. ಈ ಕ್ಷೇತ್ರದಿಂದ ಐದು ಬಾರಿ ಗೆದ್ದು ಮೂರು ಬಾರಿ ಸೋಲು ಅನುಭವಿಸಿದ್ದಾರೆ.












Click it and Unblock the Notifications