ಕರ್ನಾಟಕ ಚುನಾವಣೆ; ಧಾರ್ಮಿಕ ಸ್ಥಳಗಳಿಗೆ ಮಾರ್ಗಸೂಚಿಗಳು
ಬೆಂಗಳೂರು, ಏಪ್ರಿಲ್ 09; ಕರ್ನಾಟಕದಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ರಾಜ್ಯದಲ್ಲಿ ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ. ನೀತಿ ಸಂಹಿತೆ ಅನ್ವಯ ಹಲವಾರು ನಿಯಮಗಳು ಜಾರಿಯಲ್ಲಿವೆ. ಧಾರ್ಮಿಕ ಕ್ಷೇತ್ರಗಳಲ್ಲಿ ಯಾವುದೇ ರಾಜಕೀಯ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಸಂಬಂಧ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣೆಯನ್ನು ಶಾಂತಿಯುತವಾಗಿ ಹಾಗೂ ಮುಕ್ತವಾಗಿ ನಡೆಸುವ ನಿಟ್ಟಿನಲ್ಲಿ ಧಾರ್ಮಿಕ ಸ್ಥಳಗಳಾದ ದೇವಸ್ಥಾನ, ಮಠ, ಮಂದಿರ, ಜೈನ ಬಸದಿಗಳಲ್ಲಿ ಹಾಗೂ ಇದರ ವ್ಯಾಪ್ತಿಯಲ್ಲಿ ಬರುವ ಸಮುದಾಯ ಭವನ, ಯಾತ್ರಿನಿವಾಸ ಪ್ರದೇಶ, ಕಲ್ಯಾಣ ಮಂಟಪ ಜಾಗ ಪ್ರದೇಶದಲ್ಲಿ ಯಾವುದೇ ರಾಜಕೀಯ ಚಟುವಟಿಕೆಗಳನ್ನು ನಡೆಸುವಂತಿಲ್ಲ.

ಹಿಂದೂ ಧಾರ್ಮಿಕ ಧರ್ಮಾದಾಯ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಂ. ಹೆಚ್. ಪ್ರಕಾಶ್ ಈ ಕುರಿತು ಮಾಹಿತಿ ನೀಡಿದ್ದಾರೆ. ರಾಜಕೀಯ ಚಟುವಟಿಕೆಗಳಿಗೆ ದೇವಸ್ಥಾನದ ಕೊಠಡಿಗಳು, ಕಲ್ಯಾಣ ಮಂಟಪ, ಸಮುದಾಯ ಭವನ, ಖಾಲಿ ಜಾಗ, ದೇವಸ್ಥಾನದ ಆವರಣ, ಇತರೆ ಧಾರ್ಮಿಕ ಸ್ಥಳಗಳನ್ನು ನೀಡಲು ಅವಕಾಶ ಇರುವುದಿಲ್ಲ. ದೇವಸ್ಥಾನದಲ್ಲಿ ರಾಜಕೀಯ ವ್ಯಕ್ತಿಗಳು ಯಾವುದೇ ಸಮಾರಂಭ, ಸಭೆ, ಇನ್ನಿತರ ರಾಜಕೀಯ ಚಟುವಟಿಕೆಗಳು ನಡೆಸಲು ಅವಕಾಶ ಇರುವುದಿಲ್ಲ.
ದೇವಸ್ಥಾನದ ಆವರಣದಲ್ಲಿ ರಾಜಕೀಯ ವ್ಯಕ್ತಿಗಳಿಂದ ಅನವಶ್ಯಕ ಕಾರ್ಯಕ್ರಮವನ್ನು ಆಯೋಜಿಸಿ ಊಟದ ವ್ಯವಸ್ಥೆಯನ್ನು ಮಾಡಿ ಹಂಚುವುದಕ್ಕೆ ಅವಕಾಶವಿಲ್ಲ. ದೇವಸ್ಥಾನದ ಧ್ವನಿವರ್ಧಕಗಳನ್ನು ರಾಜಕೀಯ ಚಟುವಟಿಕೆಗಳಿಗೆ ಬಳಸುವಂತಿಲ್ಲ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ವ್ಯಕ್ತಿಗಳು ತಮ್ಮ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಇತರೆ ಧಾರ್ಮಿಕ ಸ್ಥಳಗಳಲ್ಲಿ ಭೇಟಿ ನೀಡಿ ಆವರಣದಲ್ಲಿ ಸಭೆ ಸಮಾರಂಭ ಅಥವಾ ಇನ್ನಿತರೆ ಯಾವುದೇ ರಾಜಕೀಯ ಚಟುವಟಿಕೆಗಳನ್ನು ನಡೆಸಲು ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಯಾವ-ಯಾವ ಚಟುವಟಿಕೆ ನಡೆಸಬಹುದು ಎಂದು ಈಗಾಗಲೇ ಪಟ್ಟಿ ಮಾಡಲಾಗಿದೆ. ಜಿಲ್ಲಾ ಚುನಾವಣಾಧಿಕಾರಿಗಳ ಆದೇಶವನ್ನು ಧಿಕ್ಕರಿಸಿ ರಾಜಕೀಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿದಲ್ಲಿ ಧಾರ್ಮಿಕ ಸಂಸ್ಥೆಗಳು (ತಡೆಗಟ್ಟುವಿಕೆ ಅಥವಾ ದುರುಪಯೋಗ) ಕಾಯ್ದೆ 1988ರ ಪ್ರಕಾರ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆಯನ್ನು ಸಹ ನೀಡಲಾಗಿದೆ.
ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡಿ; ಮಾದರಿ ಚುನಾವಣಾ ನೀತಿ ಸಂಹಿತೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಚುನಾವಣಾ ಅಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳು ಹಾಗೂ ಚುನಾವಣಾ ನಿಯೋಜಿತ ಎಲ್ಲ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡಬೇಕು. ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಿ ತಮ್ಮ ಕರ್ತವ್ಯ ನಿರ್ವಹಿಸಬೇಕು. ಹಾಗೂ ರಜಾ ದಿನಗಳಂದು ಹೆಚ್ಚು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕೆಂದು ಸೂಚನೆ ನೀಡಲಾಗಿದೆ.
ಎಲ್ಲಾ ಚುನಾವಣಾಧಿಕಾರಿಗಳು ಚುನಾವಣಾ ಪ್ರಕ್ರಿಯೆ ಕುರಿತು ಈಗಲೇ ಸಮರ್ಪಕವಾದ ಯೋಜನೆ ಹಾಕಿಕೊಂಡು ಕರ್ತವ್ಯ ನಿರ್ವಹಿಸಬೇಕು. ಇಓ, ಚೀಫ್ ಆಫೀಸರ್, ಪಿಡಿಓಗಳು ಹಾಗೂ ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಿದ ಅಧಿಕಾರಿ/ ಸಿಬ್ಬಂದಿಗಳ ಎಲ್ಲ ರೀತಿಯ ಮೂಲಭೂತ ವ್ಯವಸ್ಥೆಗಳ ಕುರಿತು ನಿಗಾ ವಹಿಸಿ, ಮುತುವರ್ಜಿಯಿಂದ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ಕೊಡಲಾಗಿದೆ.
ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿ ಬಗ್ಗೆ ರಾಜಕೀಯ ಪಕ್ಷಗಳೊಂದಿಗೆ ಸಭೆ ನಡೆಸಲಾಗಿದೆ. ಒಬ್ಬ ಅಭ್ಯರ್ಥಿಗೆ 40 ಲಕ್ಷ ರೂಪಾಯಿ ಚುನಾವಣೆ ವೆಚ್ಚಮಿತಿ ನಿಗಧಿಪಡಿಸಲಾಗಿದೆ. ಅಭ್ಯರ್ಥಿಯ ಘೋಷಣೆ ಮುನ್ನ ಸಭೆ, ಸಮಾರಂಭಗಳು ನಡೆದಲ್ಲಿ ಇವುಗಳ ಖರ್ಚು ವೆಚ್ಚವನ್ನು ಆಯಾ ರಾಜಕೀಯ ಪಕ್ಷಗಳ ಲೆಕ್ಕಕ್ಕೆ ಹಾಕಲಾಗುವುದು. ಖರ್ಚು ವೆಚ್ಚ ನಿಗಾಕ್ಕಾಗಿ ನೋಡಲ್ ಅಧಿಕಾರಿಗಳನ್ನು ಈಗಾಗಲೇ ನೇಮಕ ಮಾಡಲಾಗಿದೆ.
ಜಿಲ್ಲಾ ಪಂಚಾಯತಿ, ತಾಲೂಕಾ ಪಂಚಾಯತಿ, ಗ್ರಾಮ ಪಂಚಾಯತಿ ಹಾಗೂ ಇನ್ನಿತರ ಸಾಮಾನ್ಯ ಸಭೆಗಳನ್ನು ಚುನಾವಣೆ ನೀತಿ ಸಂಹಿತೆ ಮುಕ್ತಾಯವಾಗುವವರೆಗೆ ನಿಷೇಧಿಸಲಾಗಿದೆ. ಚುನಾವಣೆಯ ಅತ್ಯಂತ ಶಾಂತ ರೀತಿಯಿಂದ ಮುಕ್ತವಾಗಿ, ನ್ಯಾಯ ಸಮ್ಮತವಾಗಿ ಹಾಗೂ ನಿಷ್ಪಕ್ಷಪಾತವಾಗಿ ನಡೆಸುವಲ್ಲಿ ಚುನಾವಣಾ ಮಾದರಿ ನೀತಿ ಸಹಿಂತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ, ಅದನ್ನು ಪಾಲನೆ ಮಾಡಲು ಸಹ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ.












Click it and Unblock the Notifications