ಜನಾರ್ದನ ರೆಡ್ಡಿ ಪಕ್ಷದ ಪ್ರಣಾಳಿಕೆ ಬಿಡುಗಡೆ, ಪ್ರಮುಖ ಭರವಸೆಗಳು
ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಬೃಹತ್ ಸಮಾವೇಶ ನಡೆಸಿದ ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದರು.
ಬೆಂಗಳೂರು, ಫೆಬ್ರವರಿ 14; ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ, ಮಾಜಿ ಸಚಿವ ಜನಾರ್ದನ ರೆಡ್ಡಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದರು. ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದಿಂದ ಅವರು ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ.
ಮಂಗಳವಾರ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಬೃಹತ್ ಸಮಾವೇಶ ನಡೆಸಿದ ಜನಾರ್ದನ ರೆಡ್ಡಿ 2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದರು.
ಡಿಸೆಂಬರ್ 25ರಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಉತ್ತರ ಕರ್ನಾಟಕ ಭಾಗದಲ್ಲಿ ಜನಾರ್ದನ ರೆಡ್ಡಿ ಈಗಾಗಲೇ ಬಿರುಸಿನಿಂದ ಪ್ರಚಾರವನ್ನು ಮಾಡುತ್ತಿದ್ದಾರೆ.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಣಾಳಿಕೆಯಲ್ಲಿ ರೈತರಿಗೆ, ಕೃಷಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದೆ. ಏಪ್ರಿಲ್ ಅಂತ್ಯ ಅಥವ ಮೇ ತಿಂಗಳಿನಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ.

ರಾಯಚೂರಿನಲ್ಲಿ ಪ್ರಣಾಳಿಕೆ ಬಿಡುಗಡೆ
ಮಂಗಳವಾರ ಸಿಂಧನೂರಿಗೆ ಭೇಟಿ ನೀಡಿದ್ದ ಜನಾರ್ದನ ರೆಡ್ಡಿ ಅಂಬಾಮಠದಲ್ಲಿ ಪಾದಯಾತ್ರೆ ನಡೆಸಿದರು. ಅಲ್ಲಿಯೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಸುಮಾರು 20 ಸಾವಿರ ಜನರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ನಂತರ ಮಾತನಾಡಿದ ಜನಾರ್ದನ ರೆಡ್ಡಿ, "ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ರೈತರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ" ಎಂದು ಹೇಳಿದರು.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಪ್ರಣಾಳಿಕೆ
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಣಾಳಿಕೆಯಲ್ಲಿ ರೈತರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರತಿ ವರ್ಷ ರೈತನ ಅಕೌಂಟ್‌ಗೆ 15 ಸಾವಿರ ರೂ. ಹಣ ಜಮಾ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
ರೈತರ ಮನೆ ಬಾಗಿಲಿಗೆ ಅಧಿಕಾರಿಗಳು ಆಗಮಿಸಿ ಸಮಸ್ಯೆ ಆಲಿಸುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ.
ಸರ್ಕಾರದ ಎಲ್ಲಾ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜನಾರ್ದನ ರೆಡ್ಡಿ ಭರವಸೆ ಕೊಟ್ಟಿದ್ದಾರೆ.

ಜನಾರ್ದನ ರೆಡ್ಡಿ ನೀಡಿದ ಭರವಸೆಗಳು
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಣಾಳಿಕೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ನೀರಾವರಿ ಯೋಜನೆ ಸದೃಢಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಲಾಗಿದೆ.
ಪಕ್ಷದ ಪ್ರಣಾಳಿಕೆಯಲ್ಲಿ ಸಕಾಲಕ್ಕೆ ರಸಗೊಬ್ಬರಗಳನ್ನು ರೈತರಿಗೆ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.

ಪ್ರತಿ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಕಣಕ್ಕೆ
ಹೊಸ ಪಕ್ಷ ಸ್ಥಾಪನೆ ಮಾಡಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಗಳು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ. ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಸಹ ಪತಿಗೆ ಬೆಂಬಲವಾಗಿ ನಿಂತಿದ್ದಾರೆ. ಅವರು ಚುನಾವಣೆಗೆ ಬಳ್ಳಾರಿಯಿಂದ ಕಣಕ್ಕಿಳಿಯುವ ನಿರೀಕ್ಷೆ ಇದೆ.
ಹೊಸ ಪಕ್ಷ ಸ್ಥಾಪನೆ ಮಾಡಿರುವ ಜನಾರ್ದನ ರೆಡ್ಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ನಾನು ಕೆಲಸ ಮಾಡಿದ ಪಕ್ಷದಿಂದ ಸ್ಥಾನಮಾನ ಸಿಗದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಕಲ್ಯಾಣ ಪ್ರಗತಿ ಪಕ್ಷ ಸ್ಥಾಪನೆ ಮಾಡಿ ಮುಂದೆ ಹೆಜ್ಜೆ ಹಾಕುತ್ತೇನೆ" ಎಂದು ಹೇಳಿದ್ದಾರೆ.

ರೆಡ್ಡಿ ಹಿಂದಿನ ಚುನಾವಣೆ ನೆನಪು
ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಪತ್ರಿಕಾಗೋಷ್ಠಿಯಲ್ಲಿ ಜನಾರ್ದನ ರೆಡ್ಡಿ ಹಿಂದಿನ ಚುನಾವಣೆ ನೆನಪು ಮಾಡಿಕೊಂಡಿದ್ದರು. ಆಗ ಅವರು ತಮ್ಮ ಆಪ್ತ ಸ್ನೇಹಿತ ಬಿ. ಶ್ರೀರಾಮುಲು ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದರು.
"ಚುನಾವಣೆಯಲ್ಲಿ ನನ್ನನ್ನು ಚಿತ್ರದುರ್ಗದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಕ್ಕೆ ಸೀಮಿತಗೊಳಿಸದೇ ಇಡೀ ರಾಜ್ಯದಲ್ಲಿ ಸಕ್ರಿಯವಾಗಿರಲು ಅವಕಾಶ ಕೊಟ್ಟಿದ್ದರೆ ಬಿಜೆಪಿ ಪಕ್ಷಕ್ಕೆ 130ಕ್ಕೂ ಅಧಿಕ ಸ್ಥಾನಗಳು ಬರುತ್ತಿದ್ದವು" ಎಂದು ಹೇಳಿದ್ದರು.












Click it and Unblock the Notifications