ಟಿಕೆಟ್ ಗಾಗಿ ಬಂಡಾಯ; ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾದ ಎಂ.ಪಿ.ಕುಮಾರಸ್ವಾಮಿ; ಮೂಡಿಗೆರೆಯಿಂದ ಟಿಕೆಟ್?
ಬೆಂಗಳೂರು,ಏಪ್ರಿಲ್ 14: ರಾಜ್ಯ ಬಿಜೆಪಿ ಟಿಕೆಟ್ ಘೋಷಣೆಯಿಂದಾಗಿ ಬಂಡಾಯದ ಬೆಂಕಿ ಜೋರಾಗಿ ಬೀಸುತ್ತಿದೆ. 212 ಕ್ಷೇತ್ರಗಳ ಅಭ್ಯರ್ಥಿಗಳನ್ನ ಚುನಾವಣಾ ಕಣಕ್ಕಿಳಿದ್ದು, ಟಿಕೆಟ್ ಕೈ ತಪ್ಪಿದ ಹಿನ್ನಲೆ ಬಂಡಾಯವೆದ್ದ ನಾಯಕರಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಗಾಳ ಹಾಕಿದ್ದಾರೆ.
ಇನ್ನೂ ಮೂಡಿಗೆರೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ತೀವ್ರ ಅಸಮಾಧಾನಗೊಂಡಿದ್ದ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಶುಕ್ರವಾರ ಭಾರತೀಯ ಜನತಾ ಪಕ್ಷವನ್ನ ತೊರೆದು ಜೆಡಿಎಸ್ ಸೇರಿದ್ದಾರೆ.

ಶುಕ್ರವಾರ ಶೇಷಾದ್ರಿಪುರಂನ ಜೆಡಿಎಸ್ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಸಮ್ಮುಖದಲ್ಲಿ ಎಂ.ಪಿ.ಕುಮಾರಸ್ವಾಮಿ ಅವರು ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಜೆಡಿಎಸ್ ಪಕ್ಷದ ಶಾಲು ಹೊದಿಸಿ ಎಂ ಪಿ ಕುಮಾರಸ್ವಾಮಿ ಅವರನ್ನ ಪಕ್ಷಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬರಮಾಡಿಕೊಂಡಿದ್ದಾರೆ.
ಇನ್ನೂ ಮೂಡಿಗೆರೆ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡದೇ ಹೊಸಬರಿಗೆ ಅವಕಾಶವನ್ನ ಕೊಟ್ಟಿದ್ದು, ಇದೀಗ ಜೆಡಿಎಸ್ ಸೇರ್ಪಡೆಯಾದ ಎಂ ಪಿ ಕುಮಾರಸ್ವಾಮಿ ಅವರಿಗೆ ಜೆಡಿಎಸ್ ಟಿಕೆಟ್ ನೀಡಿ ಕಣಕ್ಕಿಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನೂ ಈ ವೇಳೆ ಮಾತನಾಡಿದ ಕುಮಾರಸ್ವಾಮಿ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ದಿನ ದೊಡ್ಡ ಪ್ರಮಾಣದಲ್ಲಿ ನಾಯಕರು ವಿವಿಧ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ನಮ್ಮ ಪಕ್ಷದ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.

ಈ ಚುನಾವಣೆಗೆ ಇಂದು ನಡೆದ ಪಕ್ಷ ಸೇರ್ಪಡೆ ಒಂದು ದಿಕ್ಸೂಚಿಯಾಗಿದೆ. ಕಲ್ಬುರ್ಗಿ, ಕಾರವಾರ, ಮಂಗಳೂರು, ಚಿತ್ರದುರ್ಗ ಜಿಲ್ಲೆಗಳ ನಾಯಕರು ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ನಮಗೆ ಶಕ್ತಿ ಇಲ್ಲ ಎಂದು ಕೆಲವರು ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿದ್ದರು. ಆ ಭಾಗದಲ್ಲಿ ಕನಿಷ್ಠ 25-30 ಸ್ಥಾನ ಅಲ್ಲಿ ಗೆಲ್ಲುತ್ತೇವೆ ಎಂದು ಹೇಳಲಾಗುತ್ತಿತ್ತು. ಈಗ ನೋಡಿದರೆ 40 ಸ್ಥಾನದ ಮೇಲೆ ಗೆದ್ದರೂ ಆಶ್ಚರ್ಯವಿಲ್ಲ. ಪಕ್ಷವನ್ನು ಸಧೃಡ ಮಾಡಲು ಕಾರ್ಯಕರ್ತರು ಶ್ರಮ ಹಾಕಿದ್ದಾರೆ. ಇದರ ಮೂಲಕ ಫಲ ದೊರಕುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಅವರು ಹೇಳಿದರು.
ಇವತ್ತು ಸೇರ್ಪಡೆ ಆದವರನ್ನು ನಾನು ಕಾಂಗ್ರೆಸ್, ಬಿಜೆಪಿಯವರು ಎಂದು ಹೇಳಲ್ಲ. ಏಕೆಂದರೆ, ಅವರೆಲ್ಲಾ ಒಂದಲ್ಲ ಒಂದು ಕಡೆ ಜೆಡಿಎಸ್ ಪರಿವಾರಕ್ಕೆ ಸೇರಿದವರೇ. 2023ಕ್ಕೆ ಜನತಾ ದಳವನ್ನು ಜನ ಬೆಂಬಲಿಸಲಿದ್ದಾರೆ. 123 ಕ್ಷೇತ್ರಗಳ ಗುರಿ ಇಟ್ಟು ಹೊರಾಟ ಮಾಡುತ್ತಿದ್ದೇವೆ. ಇನ್ನೂ ಅನೇಕರು ಪಕ್ಷಕ್ಕೆ ಬರುವವರಿದ್ದಾರೆ ಎಂದು ಅವರು ತಿಳಿಸಿದರು.
ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಮಾತನಾಡಿ, ಜೆಡಿಎಸ್ ಎಲ್ಲಿದೆ ಎಂದು ಕೇಳುತ್ತಿದ್ದವರಿಗೆ ಈಗ ಉತ್ತರ ಸಿಕ್ಕಿದೆ. ನಾನು ಮೊದಲೇ ಹೇಳಿದ್ದೇ, ಬೇರೆ ಪಕ್ಷಗಳ ನಾಯಕರು ದೊಡ್ಡ ಪ್ರಮಾಣದಲ್ಲಿ ಜೆಡಿಎಸ್ ಪಕ್ಷ ಸೇರುತ್ತರೆಂದು. ಈಗ ಆ ಮಾತು ಸತ್ಯವಾಗಿದೆ ಎಂದರು.











Click it and Unblock the Notifications