Hassan JDS Ticket Row : ಹಾಸನ ಟಿಕೆಟ್ ಫೈಟ್; ಅಖಾಡಕ್ಕೆ ದೇವೇಗೌಡರು ಎಂಟ್ರಿ, ಸಭೆ ಮುಂದೂಡಲು ಕಾರಣವೇನು.?
ಹಾಸನ ಟಿಕೆಟ್ ವಿಚಾರದಲ್ಲಿ ಇಷ್ಟು ದಿನಗಳ ಮೌನವಾಗಿದ್ದ ಜೆಡಿಎಸ್ ವರಿಷ್ಠರಾದ ಹೆಚ್.ಡಿ ದೇವೇಗೌಡರು ಎಂಟ್ರಿಯಾಗಿದ್ದು, ಯಾರಿಗೆ ಟಿಕೆಟ್ ಸಿಗಲಿದೆ ಎಂಬುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಹಾಸನ,ಫೆಬ್ರವರಿ27: 2023 ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಈಗಾಗಲೇ 93 ಅಭ್ಯರ್ಥಿಗಳನ್ನ ಘೋಷಣೆ ಮಾಡಿರುವ ದಳಪತಿಗಳಿಗೆ ಹಾಸನ ಟಿಕೆಟ್ ವಿಚಾರ ಮತ್ತಷ್ಟು ಕಗ್ಗಂಟಾಗಿದೆ.
ಹಾಸನ ಅಭ್ಯರ್ಥಿ ಘೋಷಣೆಗೂ ಮುನ್ನ ಭವಾನಿ ರೇವಣ್ಣ ಹಾಗೂ ಸ್ವರೂಪ್ ಪ್ರಕಾಶ್ ಅವರು ಬಿರುಸಿನ ಪ್ರಚಾರ ಶುರು ಮಾಡಿದ್ದು, ಈ ವಿಚಾರವಾಗಿ ರಾಜಕೀಯವಾಗಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಹೀಗಾಗಿ ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲು ಹಾಸನ ಕ್ಷೇತ್ರದ ಪ್ರಮುಖರ ಜೊತೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಭಾನುವಾರ ಸಭೆ ಕರೆದಿದ್ರು, ಆದರೆ ಈ ಸಭೆ ಏಕಾಏಕಿ ಮುಂದೂಡಲಾಗಿದ್ದು, ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಹಾಸನ ಟಿಕೆಟ್ ಗೊಂದಲ; ಅಖಾಡಕ್ಕೆ ದೇವೇಗೌಡರು ಎಂಟ್ರಿ
ಸಾಕಷ್ಟು ಗೊಂದಲಕ್ಕೆ ಕಾರಣವಾಗಿದ್ದ ಹಾಸನ ಟಿಕೆಟ್ ವಿಚಾರಕ್ಕೆ ತೆರೆ ಎಳೆಯಲು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭಾನುವಾರ ಸಭೆ ನಡೆಸಲು ತಯಾರಿ ನಡೆಸಿದ್ರು. ಆದರೆ, ಹಾಸನ ವಿಚಾರದಲ್ಲಿ ಇಷ್ಟು ದಿನ ಮೌನವಾಗಿದ್ದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡರು ಅಖಾಡಕ್ಕೆ ಇಳಿದಿದ್ದು, ಟಿಕೆಟ್ ಗೊಂದಲಕ್ಕೆ ತೆರೆ ಎಳೆಯಲು ಕುಮಾರಸ್ವಾಮಿ ಅವರು ಕರೆದಿದ್ದ ಸಭೆಯನ್ನ ದೇವೇಗೌಡರು ರದ್ದುಗೊಳಿಸಿದ್ದಾರೆ.
ಟಿಕೆಟ್ ಗಾಗಿ ಪಟ್ಟು ಹಿಡಿದಿರು ಹೆಚ್ ಡಿ ರೇವಣ್ಣ ಹಾಸನ ಟಿಕೆಟ್ ಕುರಿತು ಬೆಂಗಳೂರಿನ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ಅಂತಿಮವಾದರೇ ಜಿಲ್ಲೆಯಲ್ಲಿ ನಮ್ಮ ಹಿಡಿತ ಕೈ ತಪ್ಪಲಿದೆ ಹೀಗಾಗಿ ಬೆಂಗಳೂರಿನಲ್ಲಿ ಸಭೆ ಬೇಡ ಎಂದು ದೇವೇಗೌಡರಿಗೆ ಮನವಿ ಮಾಡಿದ್ದಾರೆ. ರೇವಣ್ಣ ಅವರ ಒತ್ತಡಕ್ಕೆ ಮಣಿದು ದೇವೇಗೌಡರು ಸಭೆಯನ್ನ ರದ್ದುಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಹಾಸನದ ಕುರಿತಾಗಿ ದಿಢೀರ್ ನಿರ್ಧಾರದಿಂದ ಗೊಂದಲ ಸೃಷ್ಟಿಯಾಗುತ್ತದೆ. ಟಿಕೆಟ್ ವಿಚಾರದಲ್ಲಿ ಕೂತು ಒಮ್ಮತದ ನಿರ್ಧಾರಕ್ಕೆ ಬರುವಂತೆ ಸೂಚಿಸಿದ್ದು, ಹಾಸನ ಟಿಕೆಟ್ ನಿರ್ಧಾರದಿಂದ ಪಕ್ಷ ಮತ್ತು ಕುಟುಂಬಕ್ಕೆ ಹಿನ್ನೆಡೆಯಾಗದಂತೆ ಮುತುವರ್ಜಿ ವಹಿಸುವಂತೆ ದೊಡ್ಡ ಗೌಡರು ಕುಮಾರಸ್ವಾಮಿಗೆ ಸಲಹೆ ಕೊಟ್ಟಿದ್ದಾರೆ ಎನ್ನಲಾಗಿದೆ.

ಸಭೆ ರದ್ದಾದರೂ ನನ್ನ ನಿರ್ಧಾರ ಬದಲಾಗುವುದಿಲ್ಲ: ಹೆಚ್ಡಿಕೆ
ಹಾಸನ ಟಿಕೆಟ್ ಗೊಂದಲಕ್ಕೆ ಭಾನುವಾರ ತೆರೆ ಎಳಿತೀನಿ ಅಂತ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಯನ್ನ ನೀಡಿದ್ರು, ಆದರೆ ಈ ಸಭೆಯನ್ನ ರದ್ದುಗೊಳಿಸಿರುವುದೇ ನನಗೆ ಗೊತ್ತೆ ಇಲ್ಲ, ಸಭೆ ರದ್ದಾಗಿರುವ ಕುರಿತು ಮಾಹಿತಿ ಪಡೆಯುತ್ತೇವೆ ಎಂದ ಕುಮಾರಸ್ವಾಮಿ ಸಭೆ ರದ್ದಾದರೂ ನನ್ನ ನಿರ್ಧಾರ ಮಾತ್ರ ಬಲಾಗುವುದಿಲ್ಲ ಎಂದು ಹೇಳಿದ್ದಾರೆ.
ಈ ಹೇಳಿಕೆಯನ್ನ ಗಮನಿಸಿದರೇ ಈ ಹಿಂದೆ ಭವಾನಿ ರೇವಣ್ಣ ಸ್ವತಃ ನಾನೇ ಹಾಸನ ಅಭ್ಯರ್ಥಿ ಎಂದು ಹೇಳಿಕೆ ಕೊಟ್ಟ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ನಮ್ಮ ಪಕ್ಷದಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ ಎಂದು ಭವಾನಿ ರೇವಣ್ಣ ಅವರ ಆಸೆಗೆ ತಣ್ಣೀರು ಎರಚಿದ್ರು. ಈ ಹಿಂದೆಯೇ ಸಾಮಾನ್ಯ ಕಾರ್ಯಕರ್ತರಿಗೆ ಹಾಸನ ಟಿಕೆಟ್ಎಂದು ಹೇಳಿಕೆ ನೀಡಿದ್ದ ಕುಮಾರಸ್ವಾಮಿ ನನ್ನ ನಿರ್ಧಾರ ಬದಲಾಗುವುದಿಲ್ಲ ಎಂದು ಹೇಳಿದ್ದಾರೆ.

ಟಿಕೆಟ್ ಗಾಗಿ ರೇವಣ್ಣ ದಂಪತಿ ಪಟ್ಟು, ಯಾರಿಗೆ ಸಿಗಲಿದೆ ಟಿಕೆಟ್?
ಹಾಸನ ಟಿಕೆಟ್ ಬೇಕೇ ಬೇಕು ಎಂದು ರೇವಣ್ಣ ದಂಪತಿ ಬಿಗಿ ಪಟ್ಟು ಹಿಡಿದಿದ್ದಾರೆ. ಒಂದು ಕಡೆ ಭವಾನಿ ರೇವಣ್ಣ ಕ್ಷೇತ್ರದಲ್ಲಿ ತಾವೇ ಅಭ್ಯರ್ಥಿ ಎನ್ನುವ ರೀತಿ ಕಾಲಿಗೆ ಚಕ್ರಕಟ್ಟಿಕೊಂಡು ಪ್ರಚಾರದಲ್ಲಿ ತೊಡಗಿದ್ದಾರೆ. ಮತ್ತೊಂದೆಡೆ ಟಿಕೆಟ್ ಆಕಾಂಕ್ಷಿ ಸ್ವರೂಪ್ ಪ್ರಚಾರವನ್ನ ಶುರುಮಾಡಿದ್ದಾರೆ.
ಹಾಸನದಲ್ಲಿ ನಡೆಯುತ್ತಿರುವ ಈ ಬೆಳವಣೆಗೆಯೇ ದಳಪತಿಗಳಿಗೆ ದೊಡ್ಡ ಸವಾಲಾಗಿದ್ದು, ಹಾಸನ ಟಿಕೆಟ್ ವಿಚಾರದಲ್ಲಿ ದೊಡ್ಡಗೌಡ್ರು ಎಂಟ್ರಿ ಕೊಟ್ಟಿದ್ದಾರೆ. ಪಕ್ಷದ ಕಾರ್ಯಕರ್ತನಿಗೆ ಟಿಕೆಟ್ ಕೊಡ್ಬೇಕು ಅಥವಾ ಹಿರಿಯ ಸೊಸೆಗೆ ಕೊಡ್ಬೇಕಾ ಎನ್ನುವ ಲೆಕ್ಕಾಚಾರ ಹೆಚ್ಚಾಗಿದ್ದು, ಇನ್ನೂ ಒಂದು ವಾರದಲ್ಲಿ ಹಾಸನ ಟಿಕೆಟ್ ಘೋಷಣೆ ಮಾಡುವ ಮೂಲಕ ದೇವೇಗೌಡರು ಎಲ್ಲ ಗೊಂದಲಗಳಿಗೂ ತೆರೆ ಎಳೆಯಲಿದ್ದಾರೆ ಎನ್ನಲಾಗಿದೆ.

ಸ್ವರೂಪ್ ಪರವಾಗಿ ಹೆಚ್ಡಿಕೆ ಬ್ಯಾಟಿಂಗ್, ಸಿಗುತ್ತಾ ಟಿಕೆಟ್?
ಹಾಸನ ಟಿಕೆಟ್ ವಿಚಾರದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮೊದಲಿನಿಂದಲೂ ಸ್ವರೂಪ್ ಪರವಾಗಿ ಬ್ಯಾಟಿಂಗ್ ಬಿಸುತ್ತಾ ಬಂದಿದ್ದು, ನನಗೆ ಕುಟುಂಬದ ವ್ಯಮೋಹವಿಲ್ಲ ಕುಟುಂಬದ ಹಿತಕ್ಕಿಂತ ರಾಜ್ಯದ ಜನತೆ ಹಿತವೇ ನನಗೆ ಮುಖ್ಯ. ಯಾವುದೇ ಕಾರಣಕ್ಕೂ ಜನತೆಯ ಭಾವನೆಗೆ ತಲೆ ಬಾಗುತ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಭವಾನಿಗೆ ಟಿಕೆಟ್ ಕೊಡಲ್ಲ ಎಂಬ ಸಂದೇಶ ರವಾನೆ ಮಾಡಿದ್ದಾರೆ.
ಅಲ್ಲದೇ ಸಾಮಾನ್ಯ ಕಾರ್ಯಕರ್ತನನ್ನ ನಿಲ್ಲಿಸುವುದಾಗಿ ಎರಡು ವರ್ಷಗಳ ಹಿಂದೆಯೇ ಹೇಳಿದ್ದೇವೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿದ್ದು, ಸ್ವರೂಪ್ ಅವರಿಗೆ ಟಿಕೆಟ್ ನೀಡುವ ಕುರಿತು ಕುಮಾರಸ್ವಾಮಿ ಅವರಿಗೆ ಒಲವಿದೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಕೊನೆಯ ಹಂತಕ್ಕೆ ಬಂದು ತಲುಪಿರುವ ಹಾಸನ ಟಿಕೆಟ್ ವಿಚಾರದಲ್ಲಿ ಜೆಡಿಎಸ್ ವರಿಷ್ಠರು ಮಧ್ಯ ಪ್ರದೇಶಿಸಿದ್ದು, ಭವಾನಿ ರೇವಣ್ಣ ಅವರ 18 ವರ್ಷದ ಕನಸು ನನಸಾಗುತ್ತಾ ಅಥವಾ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಎಂಬ ಮಾತನ್ನ ದಳಪತಿಗಳು ಉಳಿಸಿಕೊಳ್ಳುತ್ತಾರಾ ಅಂತ ಕಾದುನೋಡ್ಬೇಕಾಗಿದೆ.












Click it and Unblock the Notifications