Karnataka Elections: ಚುನಾವಣೆ ಮುಗಿದರೂ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವುದು ಅನುಮಾನ- ಕಾಂಗ್ರೆಸ್ ಟ್ವೀಟ್
ಬೆಂಗಳೂರು, ಏಪ್ರಿಲ್ 06: ಮೇ 10ರಂದು ಕರ್ನಾಟಕ ವಿಧಾನಸಭೆ ಚುನಾವಣೆ ( Karnataka Assembly Elections 2023 ) ನಡೆಯಲಿದೆ. ಒಂದೇ ಹಂತದಲ್ಲಿ ನಡೆಯುತ್ತಿರುವ ಚುನಾವಣೆಯ ಫಲಿತಾಂಶ ಮೇ 13ರಂದು ಹೊರಬರಲಿದೆ. ಕಾಂಗ್ರೆಸ್ ( Congress ) ಹಾಗೂ ಜೆಡಿಎಸ್ ( JDS ) ಪಕ್ಷಗಳು ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಆದರೆ, ಆಡಳಿತಾರೂಢ ಬಿಜೆಪಿ ( BJP ) ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಇದಕ್ಕೆ ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ ವ್ಯಂಗ್ಯವಾಡಿದೆ.
'ರಮೇಶ್ ಜಾರಕಿಹೊಳಿ ಬಿಜೆಪಿಗೆ ದುಬಾರಿ ಮನುಷ್ಯನಾಗಿದ್ದಾರೆ, ಒಂದೆಡೆ ಸವದಿ ಜೊತೆ ಕಿರಿಕ್, ಇನ್ನೊಂದೆಡೆ ಈರಣ್ಣ ಕಡಾಡಿ ಜೊತೆ ಕಿರಿಕ್. ಬಹುಶಃ ಚುನಾವಣೆ ಮುಗಿದರೂ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ನಿರ್ಧಾರವಾಗುವುದು ಅನುಮಾನ. ನಾಯಕತ್ವವೇ ಇಲ್ಲದ ಬಿಜೆಪಿಯಲ್ಲಿ ಎಲ್ಲರೂ ನಾನೇ ನಾಯಕ ಎಂದು ಹೊರಟಿದ್ದಾರೆ. #BJPvsBJP ಒಳಜಗಳವೇ ಬಿಜೆಪಿಯನ್ನ ಮುಗಿಸಲಿದೆ' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

'ಬಿಜೆಪಿಯ ಬಹುತೇಕ ಶಾಸಕರಿಗೆ ಟಿಕೆಟ್ ನೀಡದಂತೆ ಬಿಜೆಪಿ ಕಾರ್ಯಕರ್ತರೇ ಬಂಡಾಯವೆದ್ದಿದ್ದಾರೆ. ಇದು ಸರ್ಕಾರದ ದುರಾಡಳಿತದ ಪರಿಣಾಮವೋ, ಶಾಸಕರ ವೈಫಲ್ಯದ ಕಾರಣವೋ ಬಿಜೆಪಿ? 40 ಪರ್ಸೆಂಟ್ ಕಮಿಷನ್ ಭ್ರಷ್ಟಾಚಾರದ ಬಿಜೆಪಿ ಅತೀ ಹೀನಾಯ ಆಡಳಿತ ನೀಡಿದೆ ಎನ್ನಲು ಬಿಜೆಪಿ ಕಾರ್ಯಕರ್ತರ ಬಂಡಾಯವೇ ಸಾಕ್ಷಿ ಹೇಳುತ್ತಿದೆ' ಎಂದು ಕೆಪಿಸಿಸಿ ಟೀಕಿಸಿದೆ.
ನಟ ಕಿಚ್ಚ ಸುದೀಪ್ ಬೆಂಬಲಕ್ಕೆ ಕಾಂಗ್ರೆಸ್ ವ್ಯಂಗ್ಯ
'ಮೋದಿ ಮುಖ ತೋರಿಸಿದರೂ ಓಟು ಗಿಟ್ಟುವುದಿಲ್ಲ, ನನ್ನ ಮುಖ ತೋರಿಸಿದರೂ ಮತ ಬರುವುದಿಲ್ಲ ಎಂದು ಅರಿತುಕೊಂಡ ಬಸವ ಅವರು ಚಿತ್ರನಟರ ಮುಂದೆ ಶರಣಾಗಿದ್ದಾರೆ. ಬಿಜೆಪಿಗೆ ತೋರಿಸಲು ರಾಜಕೀಯ ನಾಯಕರಿಲ್ಲದ ಕಾರಣ ಸಿನೆಮಾ ನಾಯಕರ ಮೊರೆ ಹೋಗಿದೆ. BSY ಮುಖವನ್ನು ಮರೆಮಾಚಲು ಮುಂದಾದ ಬಿಜೆಪಿಗೆ ಈಗ ವರ್ಚಸ್ವಿ ನಾಯಕರಿಲ್ಲದಿರುವುದು ದುರಂತ' ಎಂದು ಕಾಂಗ್ರೆಸ್ ಹೇಳಿದೆ.

'ಸಿನೆಮಾ ನಟರನ್ನು ಓಲೈಸುವುದರಲ್ಲಿ ಮಗ್ನರಾಗಿರುವ ಬಸವರಾಜ ಬೊಮ್ಮಾಯಿ ಅವರೇ, ಮಹಾರಾಷ್ಟ್ರ ಕರ್ನಾಟಕದ ಗಡಿಯೊಳಗೆ ನುಗ್ಗಿ ಆರೋಗ್ಯ ಯೋಜನೆಯ ಜಾರಿಗೆ ಮುಂದಾಗಿದೆ. ಎಲ್ಲಿ ನಿಮ್ಮ ದಮ್ಮು ತಾಕತ್ತಿನ ಪೌರುಷ ಮಹಾರಾಷ್ಟ್ರದ ಬಿಜೆಪಿ ಸರ್ಕಾರ ಅಮಿತ್ ಶಾ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲವೇ ಅಥವಾ ಇದು ಸಂಘಟಿತ ಕುತಂತ್ರವೇ ಬಿಜೆಪಿ?' ಎಂದು ಪ್ರಶ್ನಿಸಿದೆ.
'ಬಿಜೆಪಿ ಸರ್ಕಾರದ ವೈಫಲ್ಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಸಾಮರ್ಥ್ಯವೇ ಮಹಾರಾಷ್ಟ್ರದ ಗಡಿ ತಂಟೆಗೆ ಕಾರಣ. ಚುನಾವಣೆಗಾಗಿ ಏಕಾಏಕಿ ಕರ್ನಾಟಕದ ಮೇಲೆ ವಿಶೇಷ ಪ್ರೀತಿ ಹುಟ್ಟಿ ವಾರಕ್ಕೊಮ್ಮೆ ಕರ್ನಾಟಕಕ್ಕೆ ಬರುವ ಮೊ-ಶಾ ಜೋಡಿ ಮಹಾರಾಷ್ಟ್ರದಲ್ಲಿನ ತಮ್ಮದೇ ಸರ್ಕಾರದ ಉದ್ಧಟತನಕ್ಕೆ ಕಡಿವಾಣ ಹಾಕುತ್ತಿಲ್ಲವೇಕೆ ಬಿಜೆಪಿ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
'ನಿವೃತ್ತಿಯ ಅಂಚಲ್ಲಿರುವ ಅಧಿಕಾರಿಗಳನ್ನು ಆಯಕಟ್ಟಿನ ಹುದ್ದೆಗೆ ಕೂರಿಸಿ, ಲೂಟಿ ಹೊಡೆದ ನಂತರ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ನೀಡುವುದು, ಇದು ಬಿಜೆಪಿಯ ಹೊಸ ಬಗೆಯ ಲೂಟಿ. ವಾಟ್ ಆನ್ ಐಡಿಯಾ ಮೋದಿಜಿ. 1,300 ಕೋಟಿ ಹಗರಣ ನಡೆಸಿದ BBMP ಮಾಜಿ ಅಧಿಕಾರಿಗೆ ಟಿಕೆಟ್ ಕೊಡುತ್ತಿರುವ ಬಿಜೆಪಿ ಭ್ರಷ್ಟಾಚಾರದ ಮಹಾಪೋಷಕ ಎನಿಸಿಕೊಂಡಿದೆ' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.












Click it and Unblock the Notifications