ಕರ್ನಾಟಕದಲ್ಲಿ 200 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದ ಕಾಂಗ್ರೆಸ್- ಏನಿದು 'ಗೃಹಜ್ಯೋತಿ' ಯೋಜನೆ
ಬೆಂಗಳೂರು, ಜನವರಿ 11: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ನಾಲ್ಕೈದು ತಿಂಗಳು ಬಾಕಿ ಇದೆ. ಚುನಾವಣೆಯಲ್ಲಿ ಗೆಲುವು ದಾಖಲಿಸಲು ರಾಜಕೀಯ ಪಕ್ಷಗಳು ಈಗಿನಿಂದಲೇ ಕಸರತ್ತು ನಡೆಸಿವೆ. ಈ ಹಿನ್ನೆಲೆಯಲ್ಲಿ, ಹತ್ತು ಹಲವು ಭರವಸೆಗಳನ್ನು ಮತದಾರರಿಗೆ ನೀಡುತ್ತಿವೆ. ಇದಕ್ಕೆ ಪೂರಕವಾಗಿ ಕಾಂಗ್ರೆಸ್ ಪಕ್ಷವು ರಾಜ್ಯದ ಜನತೆಗೆ ಉಚಿತ ವಿದ್ಯುತ್‌ನ ಭರವಸೆ ನೀಡಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕೆಪಿಸಿಸಿ, 'ಬೆಲೆಯೇರಿಕೆಯಿಂದ ತತ್ತರಿಸಿರುವ ರಾಜ್ಯದ ಜನರಿಗೆ ನೆಮ್ಮದಿ ನೀಡುವ ಯೋಜನೆಯನ್ನು ನಾವು ಘೋಷಿಸುತ್ತಿದ್ದೇವೆ. ರಾಜ್ಯದ ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್ ಒದಗಿಸುವ 'ಗೃಹಜ್ಯೋತಿ' ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಲಿದೆ. ನಿಮ್ಮ ವಿದ್ಯುತ್ ಬಿಲ್ ಇನ್ಮುಂದೆ ಕಾಂಗ್ರೆಸ್ ಜವಾಬ್ದಾರಿ. ಇದು ಕಾಂಗ್ರೆಸ್ ಗ್ಯಾರಂಟಿ' ಎಂದು ತಿಳಿಸಿದೆ. ಇದರೊಂದಿಗೆ ವಿಡಿಯೊ ತುಣುಕೊಂದನ್ನು ಕಾಂಗ್ರೆಸ್ ಹಂಚಿಕೊಂಡಿದೆ.
ಬೆಲೆಯೇರಿಕೆಯಿಂದ ತತ್ತರಿಸಿರುವ ರಾಜ್ಯದ ಜನರಿಗೆ ನೆಮ್ಮದಿ ನೀಡುವ ಯೋಜನೆಯನ್ನು ನಾವು ಘೋಷಿಸುತ್ತಿದ್ದೇವೆ.
— Karnataka Congress (@INCKarnataka) January 11, 2023
ರಾಜ್ಯದ ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್ ಒದಗಿಸುವ 'ಗೃಹಜ್ಯೋತಿ' ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಲಿದೆ.
ನಿಮ್ಮ ವಿದ್ಯುತ್ ಬಿಲ್ ಇನ್ಮುಂದೆ ಕಾಂಗ್ರೆಸ್ ಜವಾಬ್ದಾರಿ.
ಇದು ಕಾಂಗ್ರೆಸ್ ಗ್ಯಾರಂಟಿ. pic.twitter.com/m3TqKNQLxC
ಕಾಂಗ್ರೆಸ್‌ನಿಂದ 'ಪ್ರಜಾಧ್ವನಿ' ಯಾತ್ರೆ ಆರಂಭ
ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂದು ಶತಾಯಗತಾಯ ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಇಂದು 'ಪ್ರಜಾಧ್ವನಿ' ಯಾತ್ರೆ ಆರಂಭಿಸಿದೆ. ಬೆಳಗಾವಿಯಲ್ಲಿ ಆರಂಭವಾದ ಯಾತ್ರೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ರಾಜ್ಯ ಘಟಕ, 'ಹೊಸ ಕರ್ನಾಟಕ ನಿರ್ಮಾಣದ ಸಂಕಲ್ಪದೊಂದಿಗೆ ಹಮ್ಮಿಕೊಂಡಿರುವ 'ಪ್ರಜಾ ಧ್ವನಿ' ಬಸ್ ಯಾತ್ರೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೇವಾಲಾ, ವಿಧಾನಸಭೆ ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಬೆಳಗಾವಿಯ ವೀರಸೌಧದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಗೆ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು' ಎಂದು ತಿಳಿಸಿದೆ.
'ವಿಧಾನ ಪರಿಷತ್ ವಿಪಕ್ಷ ನಾಯಕರಾದ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ.ಬಿ.ಪಾಟೀಲ, ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ಸಲೀಂ ಅಹ್ಮದ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು' ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಜನವರಿಯೊಳಗೆ ಟಿಕೆಟ್ ಹಂಚಿಕೆ
ಮುಂದಿನ ವಿಧಾನಸಭೆ ಚುನಾವಣೆಗೆ ಜನವರಿಯೊಳಗೆ ಟಿಕೆಟ್ ಹಂಚಿಕೆ ಮಾಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸಂಕ್ರಾಂತಿ ಮುಗಿದ ನಂತರ ಕೆಲವು ನಾಯಕರು ನಮ್ಮ ಪಕ್ಷಕ್ಕೆ ಬರಲಿದ್ದಾರೆ. ಅದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು, ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡುತ್ತೇವೆ ಎಂದು ಡಿಕೆಶಿ ತಿಳಿಸಿದ್ದಾರೆ.
ಪಕ್ಷಕ್ಕೆ ಬರುವವರಿಗೆ ಸ್ವಾಗತವಿದೆ. ನಮ್ಮಿಂದ ಅಸಮಾಧಾನಗೊಂಡು ದೂರ ಹೋದವರೂ ಪಕ್ಷವನ್ನು ಸೇರಬಹುದು ಎಂದು ಡಿಕೆಶಿ ಆಹ್ವಾನ ನೀಡಿದ್ದಾರೆ.












Click it and Unblock the Notifications