'ಕಾಲಿಟ್ಟರೆ ಅಮಿತ್ ಶಾ, ಕರ್ನಾಟಕ ಸರ್ವನಾಶ': ಶುರುವಾಯ್ತು ಕಾಂಗ್ರೆಸ್‌ನ ಮತ್ತೊಂದು ಕ್ಯಾಂಪೇನ್
ರಾಜ್ಯಕ್ಕೆ ಪದೇಪದೇ ಭೇಟಿ ನೀಡುತ್ತಿರುವ ಕೇಂದ್ರ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಕೆಂಡ ಕಾರಿದೆ. ಅಮಿತ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಬೆಂಗಳೂರು, ಮಾರ್ಚ್ 03: ಇನ್ನೆರಡು ತಿಂಗಳಲ್ಲಿ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಪಕ್ಷಗಳು ಹಾಗೂ ರಾಜಕೀಯ ನಾಯಕರ ನಡುವಿನ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ರಾಜ್ಯಕ್ಕೆ ಪದೇಪದೇ ಭೇಟಿ ನೀಡುತ್ತಿರುವ ಕೇಂದ್ರ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಕೆಂಡ ಕಾರಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಅವರ ವಿರುದ್ಧ 'ಕಾಲಿಟ್ಟರೆ ಅಮಿತ್ ಶಾ, ಕರ್ನಾಟಕ ಸರ್ವನಾಶ' ಎಂಬ ಟ್ವಿಟರ್ ಅಭಿಯಾನವನ್ನೂ ಕರ್ನಾಟಕ ಕಾಂಗ್ರೆಸ್ ಆರಂಭಿಸಿದೆ.
ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಕೆಪಿಸಿಸಿ, 'ಅಮಿತ್ ಶಾ ಅವರೇ, ಕರ್ನಾಟಕಕ್ಕೆ ಬಂದಿದ್ದೀರಿ, ನಿಮಗೆ ದಮ್ಮು, ತಾಕತ್ತು ಇರುವುದೇ ಆದರೆ ಪತ್ರಿಕಾಗೋಷ್ಠಿ ನಡೆಸಿ ಭ್ರಷ್ಟಾಚಾರದ ಪ್ರಶ್ನೆಗಳಿಗೆ ಉತ್ತರಿಸುವಿರಾ? ಎಲ್ಲಾ ಭ್ರಷ್ಟಾಚಾರದ ಪ್ರಕರಣಗಳ ತನಿಖೆಗೆ ಐಟಿ, ಇಡಿ, ಸಿಬಿಐಗಳನ್ನು ಕಳಿಸುವಿರಾ? ತಾವು ಬಂದಿದ್ದು ಎಲಕ್ಷನ್ನಿಗಾ, ಕಲೆಕ್ಷನ್ನಿಗಾ? ಹೇಳುವಿರಾ?' ಎಂದು ಪ್ರಶ್ನಿಸಿದೆ.

'ಚುನಾವಣೆಗಾಗಿ ಕರ್ನಾಟಕಕ್ಕೆ ಮೂರು ದಿನಕ್ಕೊಮ್ಮೆ ಬರುತ್ತಿರುವ ಅಮಿತ್ ಶಾ ಅವರೇ, ಕೇಂದ್ರ, ಗೋವಾ, ಮಹಾರಾಷ್ಟ್ರ, ಕರ್ನಾಟಕ ಎಲ್ಲೆಡೆಯೂ ನಿಮ್ಮದೇ ಸರ್ಕಾರವಿದ್ದರೂ ಮಹದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ನ್ಯಾಯ ಕೊಡಿಸದೆ ಚುನಾವಣೆಗಾಗಿ ಬಣ್ಣದ ಕಾಗೆ ಹಾರಿಸುತ್ತಿರುವುದೇಕೆ? ಕನ್ನಡಿಗರ ಮತ ಬೇಕು, ಹಿತ ಬೇಡವೇ?' ಎಂದು ಕೆಪಿಸಿಸಿ ಪ್ರಶ್ನಿಸಿದೆ.
'ಬೆಳಗಾವಿಯಲ್ಲಿ ಎಂಇಎಸ್ ಪುಂಡರಿಂದ ಕನ್ನಡಿಗರ ಮೇಲೆ ನಿರಂತರ ಹಲ್ಲೆ, ದೌರ್ಜನ್ಯ ನಡೆಯುತ್ತಿದೆ. ದೇಶದ ಗೃಹಸಚಿವರಾಗಿ ಕನ್ನಡಿಗರಿಗೆ ರಕ್ಷಣೆ ನೀಡಲಾಗದ ತಮ್ಮಿಂದ ಕನ್ನಡಿಗರಿಗೆ ಸಿಗುವುದಾದರೂ ಏನು? ಕರ್ನಾಟಕದ ಕಷ್ಟ ಕೇಳಲು ಬರದೆ, ಚುನಾವಣೆ ಪ್ರಚಾರಕ್ಕೆ ಬರುವ ಅಮಿತ್ ಶಾ ಅವರ ದ್ರೋಹ ಕನ್ನಡಿಗರಿಗೆ ನೆನಪಿದೆ' ಎಂದು ಕಾಂಗ್ರೆಸ್ ಟೀಕಿಸಿದೆ.

'ನಿರಂತರವಾಗಿ ಗಡಿ ಕಲಹ ಸೃಷ್ಟಿಸುತ್ತಿದೆ ಮಹಾರಾಷ್ಟ್ರ. ಇತ್ತೀಚಿಗೆ ನಿಮ್ಮದೇ ಪಕ್ಷದ ದೇವೇಂದ್ರ ಫಡ್ನಿವಿಸ್ ಬೆಳಗಾವಿಯನ್ನು ಬಿಡುವುದಿಲ್ಲ ಎಂದಿದ್ದರು, ಈ ಬಗ್ಗೆ ಕರ್ನಾಟಕಕ್ಕೆ ತಾವು ಕೊಡುವ ಸ್ಪಷ್ಟನೆ ಏನು? ಒದಗಿಸುವ ನ್ಯಾಯವೇನು? ಮಹಾರಾಷ್ಟ್ರದ ಪರವೇ ಮಮಕಾರ ತೋರುವ ತಾವು ಯಾವ ನೈತಿಕತೆಯಲ್ಲಿ ಕರ್ನಾಟಕಕ್ಕೆ ಬಂದು ಮತ ಕೇಳುವಿರಿ?' ಎಂದು ಕೇಳಿದೆ.
'ಕರ್ನಾಟಕದ ನಂದಿನಿಯ ಮೇಲೆ ಕಣ್ಣು ಹಾಕಿದ ಅಮಿತ್ ಶಾ ಅವರೇ, ನಿಮ್ಮದು KMF ಉದ್ಯೋಗಗಳನ್ನು ಕನ್ನಡಿಗರಿಂದ ಕಿತ್ತು ಉತ್ತರ ಭಾರತೀಯರ ಕೈಗೆ ಕೊಡುವ ಹುನ್ನಾರವೇ? ನಂದಿನಿ ಬ್ರಾಂಡ್ ಮುಳುಗಿಸಿ ಅಮುಲ್‌ನ್ನು ತಂದು ಸ್ಥಾಪಿಸುವ ಷಡ್ಯಂತ್ರವೇ? ಸ್ವಾಭಿಮಾನದ ನಂದಿನಿಯನ್ನು ಮುಳುಗಿಸಿ ರಾಜ್ಯದ ರೈತರನ್ನು ಗುಲಾಮಗಿರಿಗೆ ತಳ್ಳುವ ತಂತ್ರವೇ?' ಎಂದು ಪ್ರಶ್ನಿಸಿದೆ.
'ಕರ್ನಾಟಕದಲ್ಲಿ ಬಿಜೆಪಿಯ ಭ್ರಷ್ಟಾಚಾರವು ಲುಂಗಿ ಡಾನ್ಸ್ ಮಾಡ್ತಿದ್ದರೂ ಕೇಂದ್ರ ನಾಯಕರು ತುಟಿ ಬಿಚ್ಚುವುದಿಲ್ಲವೇಕೆ? ಪ್ರಧಾನಿಗೆ ಪತ್ರಗಳ ಮೇಲೆ ಪತ್ರ ಬರೆದರೂ ಸಣ್ಣ ಸ್ಪಂದನೆಯೂ ಇಲ್ಲವೇಕೆ? ಬಿಜೆಪಿ ಹೈಕಮಾಂಡಿಗೆ ಕರ್ನಾಟಕ ಸಮೃದ್ಧವಾದ ಎಟಿಎಂ ಆಗಿದೆಯೇ? ಅಮಿತ್ ಶಾ ಬಂದಿರುವುದು ಎಲಕ್ಷನ್ನಿಗಾ? 40 ಪರ್ಸೆಂಟ್ ಕಲೆಕ್ಷನ್ನಿಗಾ?' ಎಂದು ಕರ್ನಾಟಕ ಕಾಂಗ್ರೆಸ್ ಘಟಕ ಕೇಳಿದೆ.
'ರಾಜ್ಯದಲ್ಲಿನ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವುದಕ್ಕೆ, ನಡೆಯಲು ಬಿಟ್ಟಿರುವುದಕ್ಕೆ, ಭ್ರಷ್ಟಾಚಾರವನ್ನು ಸಮರ್ಥಿಸಿದ್ದಕ್ಕೆ, ಈಗ ಭ್ರಷ್ಟಾಚಾರ ಸಾಬೀತಾಗಿರುವುದಕ್ಕೆ ಬಸವರಾಜ ಬೊಮ್ಮಾಯಿ ಅವರು ನೈತಿಕ ಹೊಣೆ ಹೊರುವುದಿಲ್ಲವೇ? ಹೊತ್ತು ರಾಜೀನಾಮೆ ನೀಡುವುದಿಲ್ಲವೇ? ಅಥವಾ ಮುಖ್ಯಮಂತ್ರಿಗೆ ನೈತಿಕತೆಯೇ ಇಲ್ಲವೇ?' ಎಂದು ಕಾಂಗ್ರೆಸ್ ಕೇಳಿದೆ.












Click it and Unblock the Notifications