Priyanka Gandhi: ಮೈಸೂರಿನಲ್ಲಿ ಪ್ರಿಯಾಂಕಾ ಗಾಂಧಿ ವಿರುದ್ಧ ದೂರು ದಾಖಲು
ಮೈಸೂರಿನಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಿರುದ್ಧ ದೂರು ದಾಖಲಿಸಲಾಗಿದೆ. ಚುನಾವಣಾ ಅಧಿಕಾರಿಗಳಿಗೆ ಮೈಸೂರು ಗ್ರಾಮಾಂತರ ಬಿಜೆಪಿ ಕಾನೂನು ಘಟಕದಿಂದ ದೂರು ಸಲ್ಲಿಸಲಾಗಿದೆ. ಲಿಂಗಾಯತರನ್ನು ಬಿಜೆಪಿ ಅವಮಾನಿಸಿದೆ ಎಂಬ ಹೇಳಿಕೆಗೆ ಪ್ರಿಯಾಂಕಾ ಗಾಂಧಿ ವಿರುದ್ಧ ದೂರು ದಾಖಲಿಸಲಾಗಿದೆ.
ಕೆ.ಆರ್ ನಗರ ಪ್ರಚಾರದ ವೇಳೆ ಪ್ರಿಯಾಂಕಾ ಗಾಂಧಿ ಈ ಹೇಳಿಕೆ ನೀಡಿದ್ದರು. ಚುನಾವಣಾ ಪ್ರಚಾರದ ವೇಳೆ ಯಾವುದೇ ಜಾತಿ, ಧರ್ಮ ಬಳಸಿ ಪ್ರಚಾರ ಮಾಡುವಂತಿಲ್ಲ. ಇದು ಚುನಾವಣಾ ನಿಯಮಕ್ಕೆ ವಿರುದ್ಧವಾಗಿದೆ. ಹೀಗಾಗಿ ಪ್ರಿಯಾಂಕಾ ಗಾಂಧಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಬಿಜೆಪಿ ಒತ್ತಾಯಿಸಿದೆ.

10 ಮೇ 2023ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರವನ್ನು ಆರಂಭಿಸಿವೆ. ಮೈಸೂರು ಜಿಲ್ಲೆಯಲ್ಲಿ ಚುನಾವಣಾ ಅಖಾಡ ರಂಗೇರಿದೆ.
ಈಗಾಗಲೇ ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ, ಭರ್ಜರಿ ಪ್ರಚಾರ ನಡೆಸಿ ಕಮಲ ಪಾಲಯಕ್ಕೆ ಜೀವ ತುಂಬಿದ್ದಾರೆ. ಮೈಸೂರಿನಲ್ಲಿ ಒಂದೆಡೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಮಂತ್ರಿ ಎಚ್. ಡಿ. ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೈ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದರು.

ಈ ವೇಳೆ ಪ್ರಿಯಾಂಕಾ ಗಾಂಧಿ ಚುನಾವಣೆಯ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ದೂರಿದೆ.
ಮತದಾರರನ್ನು ಸೆಳೆಯಲು ಪಕ್ಷಗಳು ಕೇಂದ್ರ ನಾಯಕರ ಮೊರೆ ಹೋಗಿವೆ. ಹೀಗಾಗಿ ರಾಜ್ಯದಲ್ಲಿ ಕೇಂದ್ರ ನಾಯಕರ ವಾಹನಗಳ ಸದ್ದೇ ಜೋರಾಗಿದೆ. ರಾಜ್ಯ ಕಾಂಗ್ರೆಸ್ ಪಕ್ಷ ಕೇಂದ್ರದಿಂದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಚಾರದ ಕಣಕ್ಕೆ ಇಳಿಸಿದೆ. ರಾಜ್ಯಾದ್ಯಂತ ಕಳೆದ ಕೆಲ ದಿನಗಳಿಂದ ಈ ನಾಯಕರು ಪ್ರಚಾರದಲ್ಲಿ ನಿರತರಾಗಿದ್ದಾರೆ.
ದೋಸೆ ತಯಾರಿಸಿದ ಪ್ರಿಯಾಂಕಾ ಗಾಂಧಿ
ಕರ್ನಾಟಕ ವಿಧಾನಸಭಾ ಚುನಾವಣೆ ನಿಮಿತ್ತ ಮೈಸೂರಿನಲ್ಲಿ ಪ್ರಚಾರ ಕೈಗೊಂಡಿರುವ ಎಐಸಿಸಿ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಬುಧವಾರ ಮೈಸೂರಿನ ಅಗ್ರಹಾರದಲ್ಲಿರುವ ಮೈಲಾರಿ ಹೋಟೆಲ್‌ನಲ್ಲಿ ದೋಸೆ ತಿಂದರು. ಮಾತ್ರವಲ್ಲದೆ ಅಡುಗೆ ಕೋಣೆಗೆ ಹೋದ ಅವರು ಅಲ್ಲಿಂದ ಬಾಣಸಿಗರ ಜೊತೆ ದೋಸೆಯನ್ನು ತಯಾರಿಸಿದರು. ಮೈಸೂರಿನ ಮೈಲಾರಿ ಹೋಟೆಲ್ ಹಲವಾರು ವರ್ಷಗಳಿಂದ ರಾಜ್ಯದಾದ್ಯಂತ ಸುದ್ದಿ ಮಾಡಿದೆ.
ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಈಗಾಗಲೇ ಏಪ್ರಿಲ್ 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಮುಗಿದೆ. ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ನಡೆದಿದ್ದು, ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವೂ ಮುಗಿದಿದೆ. ಇನ್ನು ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.












Click it and Unblock the Notifications