ರಾಹುಲ್ ಗಾಂಧಿ ಹೆಗಲ ಮೇಲೆ ಕೈಹಾಕಿ ಫೋಟೊ ತೆಗೆಸಿಕೊಂಡ ಡಿಕೆಶಿ: ಇದು ಯಾವುದರ ಮುನ್ಸೂಚನೆ?
ಬೆಂಗಳೂರು, ಜನವರಿ 06: ಕರ್ನಾಟಕದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈಗ ಬಲಿಷ್ಠವಾಗಿರುವ ಮೂರು ಪಕ್ಷಗಳಲ್ಲಿ ರಾಜಕೀಯ ತಂತ್ರಗಾರಿಯದ್ದೇ ಚರ್ಚೆ ನಡೆದಿವೆ. ಆಡಳಿತಾರೂಢ ಬಿಜೆಪಿಯ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಕಳೆದ ವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದ್ದರು. ಈ ವಾರ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ನೀಡಿದ್ದಾರೆ. ಜನವರಿ 11ರಂದು ಕಾಂಗ್ರೆಸ್ ಬಸ್ ಯಾತ್ರೆ ಆರಂಭಿಸಲಿದೆ. ಈಗಾಗಲೇ ಉತ್ತರ ಕರ್ನಾಟಕದ ಹುಬ್ಬಳ್ಳಿ ಹಾಗೂ ವಿಜಯಪುರದಲ್ಲಿ ಬೃಹತ್ ಸಮಾವೇಶ ಮಾಡಿದೆ. ಜೆಡಿಎಸ್ ಪಂಚರತ್ನ ಯಾತ್ರೆಯಲ್ಲಿ ನಿರತವಾಗಿದೆ. ಈ ಚುನಾವಣೆ ಅತಿ ಪ್ರತಿಷ್ಠೆಯಾಗಿ ತೆಗೆದುಕೊಂಡ ರಾಜ್ಯ ನಾಯಕರಲ್ಲಿ ಕೆಪಿಸಿಸಿ ಅಧ್ಯಕ್ಷ ಮುಂಚೂನಿಯಲ್ಲಿದ್ದಾರೆ.

ರಾಜ್ಯ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ ಡಿಕೆಶಿ
ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಇದನ್ನು ಪ್ರತಿಷ್ಠೆಯಾಗಿಯೂ ಪರಿಗಣಿಸಿದ್ದಾರೆ. ಹೀಗಾಗಿಯೇ, ಹಲವು ತಂತ್ರಗಳಲ್ಲಿ ನಿರತರಾಗಿದ್ದಾರೆ. ಮುಖ್ಯಮಂತ್ರಿ ಆಗಬೇಕೆನ್ನುವ ಆಳವಾದ ಬಯಕೆಯನ್ನೂ ಅವರು ಹೊಂದಿದ್ದಾರೆ. ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮಗಳ ಮೂಲಕ ವೈಯಕ್ತಿಯ ವರ್ಚಸ್ಸನ್ನು ಬೆಳೆಸಿಕೊಳ್ಳುವಲ್ಲಿ ಅವರು ನಿರತರಾಗಿದ್ದಾರೆ. ಹಲವು ಸಭೆ, ಸಮಾರಂಭ, ಪ್ರತಿಭಟನೆ, ಯಾತ್ರೆಗಳ ನೇತೃತ್ವವನ್ನೂ ವಹಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಮುಂದಿನ ಚುನಾವಣೆಯಲ್ಲಿ ನಾನು ಮುಖ್ಯಮಂತ್ರಿ ಅಭ್ಯರ್ಥಿ ಎಂಬುದನ್ನು ಪರೋಕ್ಷವಾಗಿ ಪ್ರತಿಪಾದಿಸುತ್ತಿದ್ದಾರೆ.

ಗಾಂಧಿ ಪರಿವಾರದ ಜೊತೆ ಡಿಕೆಶಿ ನಿಕಟ ಸಂಪರ್ಕ
ಡಿ.ಕೆ.ಶಿವಕುಮಾರ್ ಅವರು ಮೂಲ ಕಾಂಗ್ರೆಸ್ಸಿಗರು. ಗಾಂಧಿ ಪರಿವಾರದ ಜೊತೆ ನಿಕಟ ಸಂಪರ್ಕ ಹೊಂದಿದವರು. ರಾಷ್ಟ್ರ ಮಟ್ಟದಲ್ಲಿ ಹಲವು ಬಾರಿ ಕಾಂಗ್ರೆಸ್ ಸಂಕಷ್ಟಕ್ಕೆ ಸಿಲುಕಿದಾಗಿ ಡಿಕೆಶಿ ಸಹಾಯಕ್ಕೆ ಬಂದವರು. ಪಕ್ಷಕ್ಕೆ ಸಂಪನ್ಮೂಲ ಕ್ರೋಡಿಕರಣ, ಸಮಸ್ಯೆಯನ್ನು ಎದುರಿಸಿ ನಿಲ್ಲುವ ದೈರ್ಯ ಹೊಂದಿದವರು. ಹೀಗಾಗಿ, ಡಿಕೆಶಿ ಗಾಂಧಿ ಪರಿವಾರಕ್ಕೆ ಹತ್ತಿರವಾದವರು ಎಂದೇ ಹೇಳಬಹುದು. ಈಗಿನ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ನಿಟಕವಾಗಿದ್ದಾರೆ. ಇದು ಡಿಕೆಶಿಗೆ ಯಾವ ರೀತಿಯಲ್ಲಿ ಸಹಾಯ ಮಾಡಲಿದೆ ಎಂಬುದನ್ನು ಕಾದುನೋಡಬೇಕು.

ಹರಿಯಾಣದಲ್ಲಿ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ ಡಿಕೆಶಿ
ಜನವರಿ ಕೊನೆಯ ವಾರದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸುವ ಗುರಿಯನ್ನು ಡಿಕೆಶಿ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ನಾಯಕರ ಚರ್ಚೆ ನಡೆಸಲು ದೆಹಲಿಗೆ ತೆರಳಿದ್ದಾರೆ. ಇದೇ ವೇಳೆ, ಹರಿಯಾಣದಲ್ಲಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್‌ರನ್ನು ಭೇಟಿ ಆಗಿದ್ದಾರೆ. ಇಲ್ಲಿ ಟಿಕೆಟ್ ವಿಚಾರವಾಗಿ ಮಾತುಕತೆ ನಡೆದಿರುವ ಸಾಧ್ಯತೆಗಳಿಲ್ಲ. ಆದರೆ, ರಾಹುಲ್ ಗಾಂಧಿ ಜೊತೆ ಅನ್ಯೋನ್ಯವಾಗಿರುವ ಫೋಟೊವೊಂದನ್ನು ಡಿಕೆಶಿ ಹಂಚಿಕೊಂಡಿದ್ದಾರೆ. ಇದರಲ್ಲಿ ಈ ಇಬ್ಬರ ನಾಯಕರು ಒಬ್ಬರ ಮೇಲೊಬ್ಬರು ಕೈಹಾಕಿ ನಿಂತಿರುವುದು ಕಂಡುಬಂದಿದೆ. ಒಂದು ವೇಳೆ, ಕಾಂಗ್ರೆಸ್‌ಗೆ ಬಹುಮತ ಸಿಕ್ಕು ಅಧಿಕಾರಕ್ಕೆ ಬಂದರೆ, ಡಿಕೆ ಶಿವಕುಮಾರ್ ಪರ ರಾಹುಲ್ ನಿಲ್ಲಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ. ಇದು ಡಿಕೆಶಿಗೆ ಸಕಾರಾತ್ಮಕ ಮುನ್ಸೂಚನೆ ಎಂದೇ ಹೇಳಬಹುದು.

ಅಕ್ರಮ ಆಸ್ತಿ ಹೊಂದಿರುವ ಕಳಂಕ ಡಿಕೆಶಿ ಮೇಲಿದೆ
ಭ್ರಷ್ಟಾಚಾರ, ಅಕ್ರಮ ಆಸ್ತಿ ಗಳಿಕೆ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪಗಳು ಡಿ.ಕೆ.ಶಿವಕುಮಾರ್ ಮೇಲಿದೆ. ಕೇಂದ್ರ ಸರ್ಕಾರದ ಎಲ್ಲಾ ತನಿಖಾ ಎಜೆನ್ಸಿಗಳು ಡಿಕೆಶಿ ಹಿಂದೆ ಬಿದ್ದಿವೆ. ಅಕ್ರಮ ಹಣ ವರ್ಗಾವಣೆ ವಿಚಾರವಾಗಿ ಡಿಕೆಶಿ ಜೈಲುವಾಸವನ್ನೂ ಅನುಭವಿಸಿ ಬಂದಿದ್ದಾರೆ. ಅವರ ವರ್ಚಸ್ಸಿಗೆ ಇದು ದೊಡ್ಡ ಕಳಂಕವೆಂದೇ ಹೇಳಬಹುದು. ಸಿದ್ದರಾಮಯ್ಯನವರನ್ನು ಎದುರಿಸುವುದರ ಜೊತೆಗೆ ಈ ಕಳಂಕಗಳನ್ನು ಎದುರಿಸಬೇಕಿರುವುದು ಡಿಕೆಶಿ ಅನಿವಾರ್ಯ. ಒಟ್ಟಿನಲ್ಲಿ, ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆ ಮಾತ್ರ ಅತಿ ಪ್ರತಿಷ್ಠೆಯ ಚುನಾವಣೆಯಾಗಿ ಮಾರ್ಪಡುವುದಂತೂ ಸತ್ಯ.












Click it and Unblock the Notifications