ಹಳೇ ಮೈಸೂರಿನಲ್ಲಿ ಪ್ರಾಬಲ್ಯ ಸಾಧಿಸುವುದೇ ಬಿಜೆಪಿ ಟಾರ್ಗೆಟ್
ಬೆಂಗಳೂರು, ನವೆಂಬರ್ 12: ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಆಗಮಿಸಿ ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ಮಾಡಿರುವುದು, ವಂದೇ ಮಾತರಂ ಮತ್ತು ಕಾಶಿದರ್ಶನ್ ರೈಲುಗಳಿಗೆ ಚಾಲನೆ ನೀಡಿರುವುದು ಹಾಗೂ ಕನಕದಾಸರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿರುವುದು ಇವೆಲ್ಲವೂ ಸರ್ಕಾರಿ ಕಾರ್ಯಕ್ರಮಗಳೇ ಆಗಿದ್ದರೂ ಕೂಡ ಇದರ ಹಿಂದಿನ ಮರ್ಮ ಮಾತ್ರ ಸಮುದಾಯಗಳ ಮನವೊಲಿಕೆಗೆ ಎಂಬ ಮಾತುಗಳು ಕೇಳಿಬರುತ್ತಿವೆ. ಮೇಲ್ನೋಟಕ್ಕೆ ಹಳೇ ಮೈಸೂರನ್ನು ಟಾರ್ಗೆಟ್ ಮಾಡಿರುವ ಬಿಜೆಪಿಯ ರಾಜಕೀಯ ಸಮರಕ್ಕೆ ಮೋದಿ ರಣಕಹಳೆ ಊದಿದಂತೆ ಭಾಸವಾಗುತ್ತಿದೆ.
ಮಲೆನಾಡು, ಕರಾವಳಿ, ಉತ್ತರ ಕರ್ನಾಟಕದ ಭಾಗಗಳಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿದ್ದರೂ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯ ಜೆಡಿಎಸ್‌ನೊಂದಿಗೆ ಗಟ್ಟಿಯಾಗಿ ನಿಂತಿದೆ. ಹೀಗಾಗಿಯೇ ಒಕ್ಕಲಿಗ ಸಮುದಾಯವನ್ನು ಮುಂದಿನ ಚುನಾವಣೆಯಲ್ಲಿ ಸೆಳೆದುಕೊಳ್ಳಬೇಕೆಂಬುದೇ ಬಿಜೆಪಿಯ ಟಾರ್ಗೆಟ್ ಆಗಿದೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಕ್ಕಲಿಗ ಸಮುದಾಯವನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮೊಂದಿಗೆ ನಿಂತಿರುವ ಸಮುದಾಯವನ್ನು ಹಿಡಿದಿಟ್ಟುಕೊಳ್ಳುವ ಯತ್ನದಲ್ಲಿದ್ದಾರೆ. ಇದೆಲ್ಲದರ ನಡುವೆಯೂ ಬಿಜೆಪಿಯ ಒಕ್ಕಲಿಗ ನಾಯಕರು ಅಖಾಡಕ್ಕೆ ಇಳಿದಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸಮುದಾಯವನ್ನು ಬಿಜೆಪಿಯತ್ತ ಒಲಿಸಿಕೊಳ್ಳಲು ತಂತ್ರ ಆರಂಭಿಸಿದ್ದಾರೆ.
ಹಾಗೆ ನೋಡಿದರೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಮೂರನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ಜೆಡಿಎಸ್‌ಗೆ ಸೆಡ್ಡು ಹೊಡೆಯುವುದು ಅಷ್ಟು ಸುಲಭವಲ್ಲ. ಪಕ್ಷ ಸಂಘಟನೆಗೆ ಬಿಜೆಪಿ ಇಳಿದಿದ್ದರೂ ಕೆಲವೇ ಕೆಲವು ಕ್ಷೇತ್ರಗಳನ್ನು ಹೊರತು ಪಡಿಸಿದರೆ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿಕೊಂಡು ಬರುವ ನಾಯಕರ ಕೊರತೆ ಎದ್ದು ಕಾಣುತ್ತಿದೆ. ಈ ಕೊರತೆಯನ್ನು ನೀಗಿಸುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಒಕ್ಕಲಿಗ ಮತ್ತು ಕುರುಬ ಮತಗಳತ್ತ ಬಿಜೆಪಿ ದೃಷ್ಟಿ
ಆಡಳಿತ ರೂಢ ಬಿಜೆಪಿಗೆ ಸವಾಲುಗಳು ಬಹಳಷ್ಟಿವೆ. ಈ ಸವಾಲ್‌ಗಳನ್ನು ಎದುರಿಸಿ ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಸುಲಭದ ಕೆಲಸವಾಗಿ ಉಳಿದಿಲ್ಲ. ಸದ್ಯಕ್ಕೆ ರಾಜ್ಯದಲ್ಲಿ ಪ್ರಬಲವಾಗಿರುವ ವೀರಶೈವ ಲಿಂಗಾಯಿತ ಸಮುದಾಯ ಬಹುತೇಕ ಬಿಜೆಪಿಯನ್ನು ಬೆಂಬಲಿಸಿದರೆ, ಒಕ್ಕಲಿಗ ಸಮುದಾಯ ಜೆಡಿಎಸ್‌ಗೆ ಬೆನ್ನೆಲುಬಾಗಿದೆ. ಉಳಿದಂತೆ ಕುರುಬ ಸಮುದಾಯ ಸಿದ್ದರಾಮಯ್ಯರ ಬೆಂಬಲಕ್ಕೆ ನಿಲ್ಲುವುದರೊಂದಿಗೆ ಕಾಂಗ್ರೆಸ್‌ಗೆ ವರದಾನವಾಗಿದೆ. ಹೀಗಿರುವಾಗ ಒಕ್ಕಲಿಗ ಮತ್ತು ಕುರುಬ ಸಮುದಾಯವನ್ನು ತಮ್ಮತ್ತ ಸೆಳೆದುಕೊಳ್ಳುವುದು ಬಿಜೆಪಿಗೆ ಬಹುಮುಖ್ಯವಾಗಿದೆ.

ಬಿಜೆಪಿಗೆ ಎಲ್ಲಾ ಸಮುದಾಯದವರನ್ನು ಎಳೆದು ತರುವುದು ಅನಿವಾರ್ಯ
ಬಿಜೆಪಿಯಲ್ಲಿ ಎಲ್ಲಾ ಸಮುದಾಯದ ನಾಯಕರಿದ್ದಾರೆ. ತಳಸಮುದಾಯದ ನಾಯಕರು ಪಕ್ಷದ ಆಯಕಟ್ಟಿನಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದರೂ ಕೂಡ ಎಲ್ಲೋ ಒಂದು ಕಡೆ ಮೇಲ್ವರ್ಗದವರ ಪಕ್ಷ ಎಂಬ ಹಣೆಪಟ್ಟಿಯನ್ನು ಇತರೆ ಪಕ್ಷದ ನಾಯಕರು ಭದ್ರವಾಗಿ ಕಟ್ಟಿದ್ದಾರೆ. ಆ ಹಣೆಪಟ್ಟಿಯನ್ನು ಕಳಚಬೇಕಾದರೆ ಎಲ್ಲ ಸಮುದಾಯದ ನಾಯಕರನ್ನು ಪಕ್ಷಕ್ಕೆ ಎಳೆದು ತರುವುದು ಅನಿವಾರ್ಯವಾಗಿದೆ. ಎಷ್ಟೇ ತಳಮಟ್ಟದಿಂದ ಪಕ್ಷವನ್ನು ಸಂಘಟನೆ ಮಾಡಿದರೂ ಕೂಡ ಕೆಲವು ಕ್ಷೇತ್ರಗಳಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬರುವ ನಾಯಕರ ಜರೂರತ್ತು ಬಿಜೆಪಿಗಿದೆ.

ಸತೀಶ್ ಜಾರಕಿಹೊಳಿ ಹೇಳಿಕೆ ಬಿಜೆಪಿಗೆ ವರದಾನ
ಈಗಾಗಲೇ ಸಂಕಲ್ಪಯಾತ್ರೆ ಮೂಲಕ ರಾಜ್ಯದಲ್ಲಿ ಪ್ರಚಾರಕ್ಕಿಳಿದಿರುವ ಬಿಜೆಪಿ ನಾಯಕರು ತಮ್ಮ ಮೇಲೆ ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪಗಳಿಗೆ ಪ್ರತ್ಯುತ್ತರ ನೀಡುವ ಮತ್ತು ಜನರ ಚಿತ್ತವನ್ನು ಬೇರೆಡೆಗೆ ಹರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಜತೆಗೆ ಸರ್ಕಾರದ ಸಾಧನೆಗಳನ್ನು ಜನರ ಮುಂದಿಟ್ಟು ತಮ್ಮ ಮೇಲಿರುವ ನಲವತ್ತು ಪರ್ಸೆಂಟ್ ಆರೋಪ ಹೋಗಲಾಡಿಸುವ ಕೆಲಸಕ್ಕೂ ಕೈ ಹಾಕಿದ್ದಾರೆ. ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ. ಆದರೆ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಮಾಡಿರುವ ಎಡವಟ್ಟು ಬಿಜೆಪಿಗೆ ವರದಾನವಾಗಿದೆ.

ಮೈಸೂರು ಭಾಗ ಗೆಲ್ಲಲು ಗೆಲ್ಲುವ ಕುದುರೆಗಳತ್ತ ಬಿಜೆಪಿ
ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಭ್ರಷ್ಟ ಸರ್ಕಾರ, ನಲುವತ್ತು ಪರ್ಸೆಂಟ್ ಸರ್ಕಾರ, ಪೇಸಿಎಂ, ಸೇಸಿಎಂ ಹೀಗೆ ಹತ್ತಾರು ವಿಚಾರಗಳನ್ನಿಟ್ಟುಕೊಂಡು ಹೋರಾಟ ಮಾಡಿದರೂ ಕೂಡ ಹಿಂದೂ ಧರ್ಮದ ಬಗೆಗಿನ ಆ ಒಂದು ಹೇಳಿಕೆ ಈಗ ಬಿಜೆಪಿಗೆ ಮುಜುಗರದಿಂದ ತಪ್ಪಿಸಿಕೊಳ್ಳಲು ಮತ್ತು ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಲು ಅಸ್ತ್ರವಾಗಿದೆ. ಅದನ್ನು ಈಗಾಗಲೇ ರಾಷ್ಟ್ರಮಟ್ಟದ ಸುದ್ದಿಯನ್ನಾಗಿ ಮಾಡುವಲ್ಲಿಯೂ ಪಕ್ಷ ಯಶಸ್ವಿಯಾಗಿದೆ. ಇದೀಗ ನಡೆಯಲಿರುವ ಹಿಮಾಚಲ ಪ್ರದೇಶ್ ಮತ್ತು ಗುಜರಾತ್ ಚುನಾವಣೆಗಳು ಬಿಜೆಪಿಗೆ ಕಾಂಗ್ರೆಸ್ ವಿರುದ್ಧ ಲಾಭವಾದರೂ ಅಚ್ಚರಿ ಪಡಬೇಕಾಗಿಲ್ಲ. ಅದು ಏನೇ ಇರಲಿ. ರಾಜ್ಯದ ಮಟ್ಟಿಗೆ ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನು ಗಟ್ಟಿಗೊಳಿಸುವುದಕ್ಕಿಂತ ಹೆಚ್ಚಾಗಿ ಮುಂದೆ ಬರಲಿರುವ ಚುನಾವಣೆಯಲ್ಲಿ ಗೆಲ್ಲುವುದೇ ಪ್ರಮುಖವಾಗಿರುವುದರಿಂದ ಗೆಲ್ಲುವ ಕುದುರೆಯನ್ನೇ ಎಳೆದು ತರುವ ಕೆಲಸಕ್ಕೆ ಕೈ ಹಾಕುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ.
ಸದ್ಯದ ಪರಿಸ್ಥಿತಿಯಲ್ಲಿ ಅಧಿಕಾರ ಬಲ, ಹಣ ಬಲ, ಚಾಣಾಕ್ಷ್ಯತನ ಎಲ್ಲವೂ ಬಿಜೆಪಿ ಬಳಿಯಿದೆ. ಹೀಗಾಗಿ ಅದೆಲ್ಲವನ್ನು ಬಳಸಿಕೊಂಡು ರಾಜಕೀಯ ವ್ಯೂಹ ರಚಿಸಲಿರುವ ಬಿಜೆಪಿ ನಾಯಕರು ಜೆಡಿಎಸ್ ಮತ್ತು ಕಾಂಗ್ರೆಸ್ ನಿಂದ ಆಪರೇಷನ್ ಕಮಲದ ಮೂಲಕ ಯಾವೆಲ್ಲ ನಾಯಕರನ್ನೆಲ್ಲ ಎಳೆದುಕೊಂಡು ಬರುತ್ತಾರೋ ಗೊತ್ತಿಲ್ಲ. ಆದರೆ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ರಾಜಕೀಯದಲ್ಲಿ ಅದರಲ್ಲೂ ಹಳೇ ಮೈಸೂರು ಭಾಗದಲ್ಲಿ ಬೆಳವಣಿಗೆಗಳು ನಡೆಯುವುದಂತು ಖಚಿತ.












Click it and Unblock the Notifications