ಕರ್ನಾಟಕ ವಿಧಾನಸಭಾ ಚುನಾವಣೆ: ಇನ್ಮುಂದೆ ಮತದಾರರನ್ನು ಯಾಮಾರಿಸುವುದು ಸುಲಭವಲ್ಲ!

ಬೆಂಗಳೂರು ಜನವರಿ 9: ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವುದರಿಂದ ರಾಜಕೀಯ ಚಟುವಟಿಕೆಗಳು ಜೋರಾಗಿದೆ. ಒಂದೊಂದು ಪಕ್ಷಗಳು ಒಂದೊಂದು ಕಡೆ ಪ್ರಾಬಲ್ಯ ಹೊಂದಿದ್ದು, ಅಂತಹ ಕಡೆ ಟಾರ್ಗೆಟ್ ಮಾಡಿಕೊಂಡು ಇತರೆ ಪಕ್ಷಗಳು ಗೆಲುವಿಗೆ ಕಸರತ್ತು ನಡೆಸುವುದು ಮಾಮೂಲಿಯಾಗಿದೆ.

ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಮ್ಮದೇ ಆದ ಅಜೆಂಡಾದೊಂದಿಗೆ ಚುನಾವಣೆಗೆ ಹೋಗಲು ತಯಾರಿ ನಡೆಸುತ್ತಿವೆ. ಒಕ್ಕಲಿಗರು ಜೆಡಿಎಸ್‌ನ್ನು, ಕಾಂಗ್ರೆಸ್‌ನ್ನು ಅಲ್ಪಸಂಖ್ಯಾತರು, ಬಿಜೆಪಿಯನ್ನು ವೀರಶೈವರು ಬೆಂಬಲಿಸುತ್ತಾರೆ ಎಂಬ ನಂಬಿಕೆಗಳು ರಾಜಕೀಯ ವಲಯದಲ್ಲಿದೆ. ಆದರೆ ಚುನಾವಣೆ ವೇಳೆ ಎಲ್ಲ ವರ್ಗದ ಮತದಾರರು ಬೆಂಬಲಿಸಿದರೆ ಮಾತ್ರ ಗೆಲ್ಲಲು ಸಾಧ್ಯ ಎಂಬುದು ಗೊತ್ತಿರುವ ವಿಚಾರವೇ.

ಈ ಹಿಂದೆ ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಕಾಂಗ್ರೆಸ್‌ನ ಪ್ರಮುಖ ಮತ ಬ್ಯಾಂಕ್ ಆಗಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಜೆಡಿಎಸ್, ಬಿಎಸ್‌ಪಿಯತ್ತ ಈ ವರ್ಗಗಳು ಹಂಚಿಹೋಗಿವೆ. ಅದರಲ್ಲೂ ಯುವ ಮತದಾರರು ಆಯ್ಕೆ ಮಾಡುವ ಸ್ವಾತಂತ್ರ್ಯ ಮತ್ತು ರಾಜಕೀಯವಾಗಿ ಜ್ಞಾನ ಹೊಂದಿರುವುದರಿಂದ ಅವರು ಹಿಂದಿನಂತೆ ಯಾವುದೋ ಒಂದು ಪಕ್ಷಕ್ಕೆ ಜೋತು ಬೀಳಲು ತಯಾರಿಲ್ಲ. ಚುನಾವಣೆ ವೇಳೆ ಪರಾಮರ್ಶೆ ನಡೆಸುತ್ತಾರೆ.

ಮತದಾರರಲ್ಲಿ ಹೆಚ್ಚಿದ ಶಿಕ್ಷಿತರ ಸಂಖ್ಯೆ

ಮತದಾರರಲ್ಲಿ ಹೆಚ್ಚಿದ ಶಿಕ್ಷಿತರ ಸಂಖ್ಯೆ

ರಾಜಕೀಯವಾಗಿ ನೋಡಿದ್ದೇ ಆದರೆ ಎಲ್ಲ ಪಕ್ಷಗಳು ಮತಕ್ಕೋಸ್ಕರ ಎಲ್ಲ ವರ್ಗದವರಿಗೂ ಆಶ್ವಾಸನೆಗಳನ್ನು ನೀಡುತ್ತಾ ಮೂಗಿಗೆ ತುಪ್ಪ ಸವರುವ ಕೆಲಸವನ್ನೇ ಮಾಡುತ್ತಾ ಬಂದಿದ್ದಾರೆ. ಮೊದಲೆಲ್ಲ ದೇಶದಲ್ಲಿ ಅನಕ್ಷರರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಹೀಗಾಗಿ ಭರವಸೆಗಳನ್ನು ನೀಡಿ, ಆಮಿಷಗಳನ್ನೊಡ್ಡಿ ಮತ ಪಡೆಯುವುದು ಸುಲಭವಾಗಿತ್ತು. ಆದರೆ ಈಗ ಹಾಗಿಲ್ಲ. ಶಿಕ್ಷಿತರ ಸಂಖ್ಯೆ ಹೆಚ್ಚಾಗಿದೆ. ಎಲ್ಲವನ್ನು ಪ್ರಶ್ನೆ ಮಾಡುವ, ಪರಿಶೀಲಿಸುವ ಜ್ಞಾನವಿದೆ. ಹೀಗಾಗಿ ಯುವ ಮತದಾರರನ್ನು ಮೊದಲಿನಂತೆ ಯಾಮಾರಿಸಲು ಸಾಧ್ಯವಿಲ್ಲ.

ಕಳೆದ ಐದು ವರ್ಷಗಳಿಂದ ಮೌನಕ್ಕೆ ಶರಣಾಗಿದ್ದ ಬಹುತೇಕ ನಾಯಕರು ಈಗ ಸಕ್ರಿಯರಾಗಿದ್ದಾರೆ. ತಾವು ಸ್ಪರ್ಧೆ ಮಾಡುವ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಚಟುವಟಿಕೆಯತ್ತ ಹೆಚ್ಚಿನ ಒಲವು ಬಂದಿದೆ. ಒಂದಷ್ಟು ಸಹಾಯ, ಸಮಾಜಸೇವಾ ಚಟುವಟಿಕೆ ನಡೆಸುವ ಮೂಲಕ ಪ್ರಚಾರ ಪಡೆಯುತ್ತಿದ್ದಾರೆ. ಎಲ್ಲರ ದೃಷ್ಟಿ ಮುಂಬರುವ ಚುನಾವಣೆಯತ್ತ ನೆಟ್ಟಿರುವ ಕಾರಣದಿಂದಾಗಿ ಯಾವುದೇ ನಾಯಕರು ಜನರ ಬಳಿಗೆ ಬಂದು, ಏನೇ ಕೆಲಸ ಕಾರ್ಯಗಳನ್ನು ಮಾಡಿದರೂ ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.

ನೂರಾರು ಕಾಮಗಾರಿಗಳಿಗೆ ಗುದ್ದಲಿ ಪೂಜೆ

ನೂರಾರು ಕಾಮಗಾರಿಗಳಿಗೆ ಗುದ್ದಲಿ ಪೂಜೆ

ಕೇವಲ ಪಕ್ಷ ತನಗೆ ಟಿಕೆಟ್ ನೀಡಲಿ ಎಂಬ ಕಾರಣಕ್ಕಾಗಿ ಕ್ಷೇತ್ರದಲ್ಲಿ ಸಂಚರಿಸಿ ಜನರಿಗೆ ಒಂದಿಷ್ಟು ಸಹಾಯ ಮಾಡುವ ಮೂಲಕ ತನಗೆ ಜನಬೆಂಬಲವಿದೆ ಎಂದು ತೋರ್ಪಡಿಸುವವರ ಸಂಖ್ಯೆ ಹೆಚ್ಚಾಗಿದೆ. ಇನ್ನು ಸಾಲು, ಸಾಲು ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸುವ ಶಾಸಕರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗಿದೆ. ಚುನಾವಣೆ ಬಂದಾಗ ಇಂತಹ ನೂರಾರು ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಅವುಗಳತ್ತ ತಿರುಗಿ ಕೂಡ ನೋಡದ ಪ್ರಕರಣಗಳು ಬೇಕಾದಷ್ಟು ಇವೆ. ಎಲ್ಲವೂ ಕೇವಲ ಸುದ್ದಿಗಳಿಗಷ್ಟೆ ಸೀಮಿತವಾಗುತ್ತವೆ.

ರಾಜಕೀಯದಲ್ಲಿ ತೊಡಗಿಸಿಕೊಂಡ ಬಹಳಷ್ಟು ನಾಯಕರಿಗೆ ಜೀವನದಲ್ಲೊಮ್ಮೆ ಶಾಸಕನಾಗಬೇಕೆಂಬ ಬಯಕೆ ಇದ್ದೇ ಇರುತ್ತದೆ. ಆದರೆ ಅದು ಎಲ್ಲರ ರಾಜಕೀಯ ಬದುಕಿನಲ್ಲಿ ಈಡೇರುವುದಿಲ್ಲ. ಜನಾನುರಾಗಿ ನಾಯಕನೊಬ್ಬ ಯಾವುದೇ ಪಕ್ಷದ ಹಂಗಿಲ್ಲದೆ ಸ್ವತಂತ್ರವಾಗಿ ಸ್ಪರ್ಧಿಸಿಯೂ ಗೆಲ್ಲಬಹುದು. ಆದರೆ ರಾಜಕೀಯಕ್ಕೆ ಪಕ್ಷ ಅನಿವಾರ್ಯವಾಗಿದ್ದು, ಪಕ್ಷಕ್ಕಾಗಿ ದುಡಿದ ಹಲವರು ತಮ್ಮ ಜೀವಿತಾವಧಿಯ ಕೊನೆಯ ತನಕವೂ ಕಾರ್ಯಕರ್ತರಾಗಿಯೇ ಉಳಿದಿದ್ದಾರೆ.

ಕುಟುಂಬಕ್ಕೆ ಟಿಕೆಟ್‌ ನೀಡುವಂತೆ ಹಿರಿಯ ನಾಯಕರ ಸರ್ಕಸ್‌

ಕುಟುಂಬಕ್ಕೆ ಟಿಕೆಟ್‌ ನೀಡುವಂತೆ ಹಿರಿಯ ನಾಯಕರ ಸರ್ಕಸ್‌

ಒಮ್ಮೆ ಕ್ಷೇತ್ರದಲ್ಲಿ ಗೆದ್ದು ಶಾಸಕರಾದವರು ಮತ್ತೊಮ್ಮೆ ಶಾಸಕರಾಗಬೇಕೆಂದು ಬಯಸುತ್ತಾರೆ. ಹೀಗಾಗಿ ಕ್ಷೇತ್ರದಲ್ಲಿ ಅವರ ನಂತರದ ನಾಯಕರು ಬೆಳೆಯಲು ಸಾಧ್ಯವಾಗುವುದಿಲ್ಲ. ಒಬ್ಬ ಶಾಸಕ ಐದಾರು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾ ಗೆಲುವು ಪಡೆಯುತ್ತಾ ಹೋದರೆ ಉಳಿದ ನಾಯಕರ ರಾಜಕೀಯ ಭವಿಷ್ಯ ನಿಂತ ನೀರಾಗಿ ಬಿಡುತ್ತದೆ. ಹಿರಿಯ ನಾಯಕರು ಇನ್ನು ಕೂಡ ರಾಜಕೀಯ ಮಾಡುತ್ತಲೇ ಇದ್ದಾರೆ. ಅವರು ಕಿರಿಯ ನಾಯಕರಿಗೆ ತಮ್ಮ ಸ್ಥಾನ ಬಿಟ್ಟುಕೊಟ್ಟು ಮಾರ್ಗದರ್ಶಕರಾಗಿ ಉಳಿಯಬಹುದು. ಆದರೆ ಅಂತಹ ನಿರ್ಧಾರಕ್ಕೆ ಯಾರೂ ಬರುವುದಿಲ್ಲ.

ಇವತ್ತು ಯುವ ನಾಯಕರಿಗೆ ಅವಕಾಶ ಮಾಡಿಕೊಡಬೇಕೆಂಬ ಮಾತುಗಳು ಭಾಷಣಕ್ಕಷ್ಟೆ ಸೀಮಿತವಾಗುತ್ತಿದ್ದು, ಹಿರಿಯ ನಾಯಕರು ರಾಜಕೀಯದಿಂದ ಹಿಂದೆ ಸರಿದು ಯುವ ನಾಯಕರು ಸ್ಪರ್ಧೆ ಮಾಡಲು ಅವಕಾಶ ಮಾಡಿಕೊಡುತ್ತಿಲ್ಲ. ಒಂದು ವೇಳೆ ಚುನಾವಣಾ ಕಣದಿಂದ ಹಿಂದೆ ಸರಿದರೂ ತಮ್ಮ ಕುಟುಂಬದ ಸದಸ್ಯರಿಗೆ ಟಿಕೆಟ್ ಸಿಗುವಂತೆ ನೋಡಿಕೊಳ್ಳುತ್ತಾರೆ. ರಾಜಕೀಯ ನಾಯಕರಿಗೆ ನಿವೃತ್ತಿ ಇಲ್ಲದಿರುವುದರಿಂದ ಸದ್ಯ ಯುವ ನಾಯಕರಿಗೆ ಅವಕಾಶ ಇಲ್ಲದಂತಾಗಿದೆ.

ಭರವಸೆಗಳ ಮಹಾಪೂರವೇ ಹರಿದು ಬರುವ ಸಾಧ್ಯತೆ

ಭರವಸೆಗಳ ಮಹಾಪೂರವೇ ಹರಿದು ಬರುವ ಸಾಧ್ಯತೆ

ಒಟ್ಟಾರೆ ಚುನಾವಣೆಯಿಂದ ಚುನಾವಣೆಗೆ ಹಲವು ರೀತಿಯ ಬದಲಾವಣೆಗಳಾಗಿದ್ದು, ರಾಜಕೀಯ ಪಕ್ಷಗಳು ಮತ್ತು ನಾಯಕರು ಈಗಿನಿಂದಲೇ ಮತದಾರರನ್ನು ಸೆಳೆಯಲು ಸರ್ವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ಬೆಳವಣಿಗೆಗಳು ಇನ್ನಷ್ಟು ಆಗಲಿದ್ದು, ಮತದಾರರ ಮನೆ ಬಾಗಿಲಿಗೆ ನಾಯಕರು ಬರಲಿದ್ದು, ಭರವಸೆಗಳ ಮಹಾಪೂರವೇ ಹರಿದು ಬರಲಿದೆ. ಆದರೆ ಏನೇ ಆಸೆ ಆಮಿಷವೊಡ್ಡಿದರೂ ಮತನೀಡುವ ಮತದಾರರು ಒಂದೊಳ್ಳೆಯ ತೀರ್ಮಾನ ಮಾಡಿದರೆ ರಾಜಕೀಯದಲ್ಲಿಯೂ ಒಂದಷ್ಟು ಬದಲಾವಣೆ ಸಾಧ್ಯವಾಗಬಹುದೇನೋ ಎನ್ನುವ ನಿರೀಕ್ಷೆ ಅನೇಕರಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+