ಹಳೇ ಮೈಸೂರಿನ ಮತದಾರರ ಓಲೈಕೆಗೆ ಮೂರು ಪಕ್ಷಗಳ ಕಸರತ್ತು

ಮೈಸೂರು, ಜನವರಿ 27: ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಈ ಮೂರು ಪಕ್ಷಗಳಿಗೂ ಹಳೇ ಮೈಸೂರು ಬಹುಮುಖ್ಯವಾಗಿದ್ದು, ಇಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆಲ್ಲಲೇ ಬೇಕೆಂಬ ಹಠಕ್ಕೆ ಬಿದ್ದಿರುವುದು ಎದ್ದು ಕಾಣಿಸುತ್ತಿದೆ. ಅದರಲ್ಲೂ ಬಿಜೆಪಿಗೆ ಈ ಬಾರಿ ಹಳೇ ಮೈಸೂರು ಟಾರ್ಗೆಟ್ ಆಗಿದೆ.

ಈ ಹಿಂದಿನಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಹಳೇ ಮೈಸೂರು ಭಾಗದಲ್ಲಿ ಪ್ರಬಲವಾಗಿವೆ. ಅಲ್ಲದೇ ಈಗಾಗಲೇ ಪಾರುಪತ್ಯ ಸಾಧಿಸಿವೆ. ಬಿಜೆಪಿ ಅಲ್ಲೊಂದು ಇಲ್ಲೊಂದು ಸ್ಥಾನವನ್ನು ಗೆದ್ದಿದೆಯಾದರೂ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ. ಆದರೆ ಈ ಬಾರಿ ಏನಾದರೂ ಮಾಡಿ ಒಂದಷ್ಟು ಸ್ಥಾನಗಳನ್ನು ಗೆಲ್ಲಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಬಿಜೆಪಿ ಅದಕ್ಕಾಗಿ ಹೋರಾಟ ಮಾಡುತ್ತಿದೆ.

ಹಿಂದಿನ ಚುನಾವಣೆಗಳನ್ನು ಗಮನಿಸಿದರೆ ಈ ಭಾಗದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪ್ರತಿಸ್ಪರ್ಧಿಗಳಾಗಿದ್ದು, ತಳಮಟ್ಟದಿಂದ ಪರಸ್ಪರ ಸ್ಪರ್ಧಿಗಳಾಗಿ ಬಂದಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಆರಂಭವಾಗಿ ವಿಧಾನಸಭೆ ತನಕವೂ ವಿರೋಧಿಗಳಾಗಿಯೇ ಮುನ್ನಡೆಯುತ್ತಿದ್ದಾರೆ. ಈ ನಡುವೆ ಬಿಜೆಪಿ ನಿಧಾನವಾಗಿ ಅಸ್ತಿತ್ವ ಕಂಡುಕೊಳ್ಳಲು ಯತ್ನಿಸುತ್ತಿರುವುದರಿಂದ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಹಗುರವಾಗಿ ಪರಿಗಣಿಸಲು ಸಾಧ್ಯವಾಗದ ಸ್ಥಿತಿಯಿದೆ.

ಚುನಾವಣೆ ಸಮೀಪಿಸುತ್ತಿದ್ದಂತೆ ಬದಲಾದ ರಾಜಕೀಯ ವಾತಾವರಣ

ಚುನಾವಣೆ ಸಮೀಪಿಸುತ್ತಿದ್ದಂತೆ ಬದಲಾದ ರಾಜಕೀಯ ವಾತಾವರಣ

ಈಗಿನ ರಾಜಕೀಯ ಪರಿಸ್ಥಿತಿಗಳು ಏನೇ ಇದ್ದರೂ ಚುನಾವಣೆ ಸಮೀಪಿಸುತ್ತಿದ್ದಂತೆ ಬಳಿಕ ರಾಜಕೀಯ ವಾತಾವರಣವೇ ಬದಲಾಗಲಿದೆ. ರಾಜಕೀಯ ಸಮಾವೇಶಕ್ಕೆ ಸೇರುವ ಜನರಿಂದಷ್ಟೆ ಗೆಲುವನ್ನು ನಿರೀಕ್ಷಿಸುವುದು ಅಸಾಧ್ಯವಾಗಿದೆ. ಜನ ರಾಜಕೀಯ ನಾಯಕರು ಹೇಳಿದ್ದನ್ನೆಲ್ಲ ಕೇಳಿ, ಭರವಸೆಗಳಿಗೆ ಮರಳಾಗುತ್ತಾರೆ ಎನ್ನುವುದನ್ನು ಒಪ್ಪಿಕೊಳ್ಳಲಾಗದು. ಈಗೀಗ ರಾಜಕೀಯವಾಗಿ ಜನ ಎಲ್ಲವನ್ನು ಅರಿತುಕೊಳ್ಳುತ್ತಿದ್ದಾರೆ. ಹಾಗಾಗಿ ಯಾವ ಮಾನದಂಡದ ಮೇಲೆ ಪಕ್ಷಗಳತ್ತ ಒಲವು ತೋರುತ್ತಾರೆ ಎಂಬುದು ಮುಖ್ಯವಾಗಲಿದೆ.

ಹಳೆ ಮೈಸೂರಿನಲ್ಲಿ ಜೆಡಿಎಸ್ ಪ್ರಬಲವಾದಂತೆಲ್ಲ ಅದರ ಪರಿಣಾಮಗಳು ಕಾಂಗ್ರೆಸ್ ಮೇಲೆ ಬೀರಲಿದೆ. ಹೀಗಾಗಿ ಕಾಂಗ್ರೆಸ್ ಗೆ ಜೆಡಿಎಸ್ ಪ್ರಬಲ ವಿರೋಧಿಯಾಗಿದೆ. ಜೆಡಿಎಸ್ ಹೆಚ್ಚಿನ ಸ್ಥಾನ ಗೆಲ್ಲ ಬಾರದು ಎಂಬ ಕಾರಣಕ್ಕೆ ಕಾಂಗ್ರೆಸ್ ನಾಯಕರು ಬಿಜೆಪಿಗಿಂತ ಜೆಡಿಎಸ್ ನ್ನು ಹೆಚ್ಚು ಟಾರ್ಗೆಟ್ ಮಾಡುತ್ತಿದ್ದಾರೆ. ಕಾಂಗ್ರೆಸ್ ಮತಗಳನ್ನು ಬದಲಾಯಿಸುವ ಅಥವಾ ಒಡೆಯುವ ಶಕ್ತಿಯಿರುವುದು ಜೆಡಿಎಸ್‌ಗೆ ಮಾತ್ರ.

ಜೆಡಿಎಸ್‌ನ ಭದ್ರಕೋಟೆಗೆ ಲಗ್ಗೆಯಿಡುತ್ತಾರಾ..?

ಜೆಡಿಎಸ್‌ನ ಭದ್ರಕೋಟೆಗೆ ಲಗ್ಗೆಯಿಡುತ್ತಾರಾ..?

ಒಂದು ಕಾಲದಲ್ಲಿ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಹಳೇ ಮೈಸೂರಿಗೆ ಲಗ್ಗೆಯಿಟ್ಟ ಜೆಡಿಎಸ್ ಪ್ರಾಬಲ್ಯ ಸಾಧಿಸಿದ್ದು, ಅದರಲ್ಲೂ ಕಳೆದ ಬಾರಿಯ(2018) ಚುನಾವಣೆಯಲ್ಲಿ ಮಂಡ್ಯವನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದು ಇತಿಹಾಸ. ಬಳಿಕ ನಡೆದ ರಾಜಕೀಯ ಮೇಲಾಟದಲ್ಲಿ ಒಂದು ಸ್ಥಾನ ಕಳೆದು ಕೊಂಡಿದ್ದರೂ. ಜನ ಜೆಡಿಎಸ್ ಪರವಾಗಿದ್ದಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಈ ಸಲದ ಚುನಾವಣೆಯಲ್ಲಿ ಜನ ಯಾರಿಗೆ ಮಣೆ ಹಾಕುತ್ತಾರೆ ಎನ್ನುವುದನ್ನು ಈಗಲೇ ಹೇಳಲು ಅಸಾಧ್ಯವಾಗಿದ್ದರೂ ಮತದಾರರನ್ನು ಹೇಗೆ ಓಲೈಸಿಕೊಳ್ಳಬೇಕು ಎಂಬುದರತ್ತ ಬಿಜೆಪಿ ತಲೆಕೆಡಿಸಿಕೊಂಡಂತೆ ಕಾಣಿಸುತ್ತಿದೆ. ಮೊದಲ ಪ್ರಯತ್ನವಾಗಿ ಅಮಿತ್ ಶಾ ಅವರನ್ನು ಮಂಡ್ಯಕ್ಕೆ ಕರೆತರಲಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿಯ ನಾಯಕರೆಲ್ಲರೂ ದೌಡಾಯಿಸುವ ಸಾಧ್ಯತೆಯಿದೆ. ಅದರಾಚೆಗೆ ಹಳೇ ಮೈಸೂರು ಭಾಗದ ಕೆಲವು ಕ್ಷೇತ್ರಗಳಲ್ಲಿ ಇವತ್ತಿಗೂ ಬಿಜೆಪಿಗೆ ಅಸ್ತಿತ್ವವಿಲ್ಲ. ಅಂತಹ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಹೇಗೆ ಮಾಡಲಿದ್ದಾರೆ ಎಂಬ ಕುತೂಹಲವೂ ಕಾಡುತ್ತಿದೆ.

ಭರವಸೆ ನೀಡುವುದರಲ್ಲಿ ಹಿಂದೆ ಬೀಳದ ಜೆಡಿಎಸ್

ಭರವಸೆ ನೀಡುವುದರಲ್ಲಿ ಹಿಂದೆ ಬೀಳದ ಜೆಡಿಎಸ್

ಚುನಾವಣೆ ವೇಳೆ ತಮ್ಮ ಅಭಿವೃದ್ಧಿ ಕಾರ್ಯದ ಬಗ್ಗೆ ಹೇಳಿ ಮತ ಕೇಳುವ ಪರಿಸ್ಥಿತಿಯಲ್ಲಿ ಮೂರು ಪಕ್ಷಗಳಿಲ್ಲ. ಹೀಗಾಗಿ ಅವರು ಕೇವಲ ಭರವಸೆಯನ್ನಿಟ್ಟುಕೊಂಡು ಮತದಾರರ ಮುಂದೆ ಹೋಗಬೇಕಾಗಿದೆ. ಬಿಜೆಪಿ ಮತ್ತು ಜೆಡಿಎಸ್‌ಗೆ ಹೋಲಿಸಿದರೆ ಕಾಂಗ್ರೆಸ್‌ನ ಭರವಸೆ ಆಕರ್ಷಣೀಯವಾಗಿದೆ. ಅದರ ಸಾಧ್ಯಾಸಾಧ್ಯತೆಗಳನ್ನು ಬದಿಗಿಟ್ಟು ನೋಡಿದರೆ ಕಾಂಗ್ರೆಸ್‌ನ ಚುನಾವಣಾ ಭರವಸೆ ಬಿಜೆಪಿ ನಾಯಕರನ್ನು ನಿದ್ದೆಗೆಡಿಸುವಂತೆ ಮಾಡಿದ್ದಂತು ಸತ್ಯ.

ಭರವಸೆ ನೀಡುವುದರಲ್ಲಿ ಜೆಡಿಎಸ್ ಕೂಡ ಹಿಂದೆ ಬಿದ್ದಿಲ್ಲ. ಜೆಡಿಎಸ್ ಕೂಡ ಭರವಸೆಗಳನ್ನು ನೀಡುತ್ತಿದೆ. ಈಗಾಗಲೇ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿರುವ ಜೆಡಿಎಸ್ ನಾಯಕರು ಎರಡನೇ ಪಟ್ಟಿಯನ್ನು ತೂಗಿ ಅಳೆದು ಸಿದ್ಧಪಡಿಸುತ್ತಿದ್ದಾರೆ. ಆದರೆ ಕೆಲವು ಕ್ಷೇತ್ರಗಳಲ್ಲಿ ಅಸಮಾಧಾನವಿರುವುದರಿಂದ ಪಟ್ಟಿ ಪ್ರಕಟ ವಿಳಂಬವಾಗುತ್ತಿದೆ.

ಹಳೇ ಮೈಸೂರು ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆ

ಹಳೇ ಮೈಸೂರು ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆ

ಈ ಹಿಂದೆ ಕೇವಲ ಹಳೇ ಮೈಸೂರು ಭಾಗದತ್ತ ಮಾತ್ರ ಹೆಚ್ಚಿನ ನಿಗಾ ವಹಿಸುತ್ತಿದ್ದ ಜೆಡಿಎಸ್ ಈ ಬಾರಿ ಇಡೀ ರಾಜ್ಯದತ್ತ ಗಮನಹರಿಸಿದೆ. ಚುನಾವಣೆ ಪ್ರಕಟವಾದ ಬಳಿಕ ಇಡೀ ರಾಜ್ಯದಲ್ಲಿ ಪ್ರವಾಸ ಮಾಡಬೇಕಾಗುತ್ತದೆ. ಈಗಾಗಲೇ ಪಕ್ಷದಲ್ಲಿ ನಾಯಕರ ಕೊರತೆ ಹೆಚ್ಚಾಗಿದ್ದು, ಎಲ್ಲ ಕ್ಷೇತ್ರಗಳಿಗೆ ಎಚ್.ಡಿ ಕುಮಾರಸ್ವಾಮಿ ಅವರೇ ಚುನಾವಣಾ ಪ್ರಚಾರಕ್ಕೆ ತೆರಳಬೇಕಾಗಿರುವುದರಿಂದ ಹಳೇ ಮೈಸೂರಿನತ್ತ ಹೆಚ್ಚು ನಿಗಾ ವಹಿಸಲು ಸಾಧ್ಯವಾಗದಿರಬಹುದು. ಇದನ್ನು ಕಾಂಗ್ರೆಸ್ ಮತ್ತು ಬಿಜೆಪಿ ಸದುಪಯೋಗಿಸಿಕೊಳ್ಳುವ ಸಾಧ್ಯತೆಯಿದೆ.

ಮಂಡ್ಯದಲ್ಲಿ ಬಿಜೆಪಿ ಇನ್ನೂ ಗಟ್ಟಿಯಾಗಿಲ್ಲ. ಅದಾಗಲೇ ಅಸಮಾಧಾನದ ಹೊಗೆಯಾಡಲು ಆರಂಭವಾಗಿದೆ. ಮೂಲ ಬಿಜೆಪಿಗರನ್ನು ನಿರ್ಲಕ್ಷಿಸಲಾಗುತ್ತಿದೆ. ಹೊರಗಿನಿಂದ ಬಂದವರಿಗೆ ಮಣೆ ಹಾಕಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಜತೆಗೆ ಮಂಡ್ಯಕ್ಕೆ ಎಂಟ್ರಿಕೊಟ್ಟ ಸಚಿವ ಆರ್.ಅಶೋಕ್ ಅವರಿಗೆ ಗೋ ಬ್ಯಾಕ್ ಎಂಬ ಭಿತ್ತಿಪತ್ರ ಅಂಟಿಸಲಾಗಿದೆ. ಆದರೆ ಚುನಾವಣೆ ಹತ್ತಿರವಾದಂತೆಲ್ಲ ಎಲ್ಲ ಪಕ್ಷಗಳೂ ತಮ್ಮೊಳಗಿನ ಅಸಮಾಧಾನ ಬದಿಗೊತ್ತಿ ಒಗ್ಗಟ್ಟಿನ ಮಂತ್ರ ಪಠಿಸಲಿವೆ.

ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪೈಪೋಟಿ ನಡೆದರೆ ಅದರ ಲಾಭವನ್ನು ಪಡೆದುಕೊಳ್ಳಲು ಹವಣಿಸುತ್ತಿರುವ ಬಿಜೆಪಿ ಕೊನೆಗಳಿಗೆಯಲ್ಲಿ ಆಪರೇಷನ್ ಕಮಲ ಮಾಡಿದರೂ ಅಚ್ಚರಿಯಿಲ್ಲ. ಸದ್ಯ ಮೂರು ಪಕ್ಷಗಳು ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲು ಮುಂದಾಗಿರುವುದರಿಂದ ಮುಂದಿನ ರಾಜಕೀಯ ಜಿದ್ದಾಜಿದ್ದಿ ಈ ಭಾಗದಲ್ಲಿ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+