Breaking: ವಿಧಾನಸಭೆ ಉಪ ಸಭಾಪತಿ ಆನಂದ ಮಾಮನಿ ವಿಧಿವಶ
ಬೆಂಗಳೂರು, ಅ.23:ಕರ್ನಾಟಕ ವಿಧಾನಸಭೆ ಉಪ ಸಭಾಪತಿ, ಬಿಜೆಪಿ ಶಾಸಕ ಆನಂದ್ ಮಾಮನಿ ವಿಧಿವಶವಾಗಿದ್ದಾರೆ. ನಗರದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಮನಿ ಶನಿವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ಇತ್ತೀಚೆಗೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ, ತೀವ್ರ ಅನಾರೋಗ್ಯದಿಂದ ಬಳಲುತಿದ್ದ 56 ವರ್ಷ ವಯಸ್ಸಿನ ಸವದತ್ತಿ ಶಾಸಕ ಮಾಮನಿ ಅವರು ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸಲಿಲ್ಲ, ಚಿಕಿತ್ಸೆ ಫಲ ನೀಡದೆ ಮೃತಪಟ್ಟಿದ್ದಾರೆ.
ಸವದತ್ತಿಯಲ್ಲಿ ಅಂತ್ಯಕ್ರಿಯೆ: ಆನಂದ್ ಮಾಮನಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಪಟ್ಟಣದಲ್ಲಿ ಮಧ್ಯಾಹ್ನ 1 ಗಂಟೆ ತನಕ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ. ನಂತರ ಪ್ರಮುಖ ಬೀದಿಗಳಲ್ಲಿ ಅಂತಿಮ ಯಾತ್ರೆ ಮೂಲಕ ಸಂಜೆ 4ರ ಸುಮಾರಿಗೆ ತೋಟದಲ್ಲಿ ಅಂತ್ಯಕ್ರಿಯೆ ವಿಧಿವಿಧಾನ ಜರುಗಲಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನಡೆಯಲಿದೆ.
ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಆನಂದ್ ಮಾಮನಿ ಕರ್ನಾಟಕ ವಿಧಾನಸಭೆಯ ಉಪ ಸಭಾಪತಿಯಾಗಿದ್ದಾರೆ. ಇತ್ತೀಚೆಗೆ ನಡೆದ10 ದಿನಗಳ ಮುಂಗಾರು ಅಧಿವೇಶನ ಸಂದರ್ಭದಲ್ಲೇ ಆನಂದ್ ಮಾಮನಿ ಅನಾರೋಗ್ಯಕ್ಕೀಡಾಗಿದ್ದರು.

ಆನಂದ್ ಮಾಮನಿ 2018ರ ವಿಧಾನಸಭೆ ಚುನಾವಣೆಯಲ್ಲಿ ಸವದತ್ತಿ ಕ್ಷೇತ್ರದಲ್ಲಿ 62,480 ಮತಗಳನ್ನು ಪಡೆದು ಪಕ್ಷೇತರ ಅಭ್ಯರ್ಥಿ ಆನಂದ್ ಚೋಪ್ರಾ (56,189) ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಆನಂದ್ ಮಾನಿಯವರ ತಂದೆ ಚಂದ್ರಶೇಖರ ಮಾಮನಿ ಕೂಡ ವಿಧಾನ ಸಭೆ ಉಪಸಭಾಧ್ಯಕ್ಷರಾಗಿದ್ದರು ಎನ್ನುವುದು ವಿಶೇಷ. ಬೆಳಗಾವಿ ಜಿಲ್ಲೆಯ ಸವದತ್ತಿ ವಿಧಾನಸಭೆ ಕ್ಷೇತ್ರದಿಂದ ಸತತ ಮೂರು ಬಾರಿ ಗೆದ್ದು ಶಾಸಕರಾಗಿದ್ದ ಅವರು, ಓರ್ವ ಮಾದರಿ ಜನಪ್ರತಿನಿಧಿಯಾಗಿ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ಕೇವಲ ರಾಜಕೀಯ ಕ್ಷೇತ್ರವಲ್ಲದೆ, ಆನಂದ್ ಮಾಮಿನಿ ಅವರು ಅನೇಕ ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿದ್ದರು. 2000 ರಿಂದ ಸವದತ್ತಿಯ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಮತ್ತು ಶ್ರೀಕಾಡಸಿದ್ದೇಶ್ವರ ಉಚಿತ ಪ್ರಸಾದ ನಿಲಯ, ಶ್ರೀಚಂದ್ರಮ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಸವದತ್ತಿ ಅಧ್ಯಕ್ಷರಾಗಿದ್ದರು.
2000 ರಿಂದ 2002ರ ವರೆಗೆ ಪ್ರಾಥಮಿಕ ಸರಕಾರಿ ಕೃಷಿ ಮತ್ತು ಅಭಿವೃದ್ಧಿ ಬ್ಯಾಂಕ್, ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ, ಯಲ್ಲಮ್ಮನಗುಡ್ಡ ಮತ್ತು ಶ್ರೀರೇಣುಕಾ ಯಲ್ಲಮ್ಮ ಎಜುಕೇಶನ್ ಸೊಸೈಟಿ, ಸೌದತ್ತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದು, ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈ ಗನ್ನಡಿ.
2008 ರಲ್ಲಿ ಬಿಜೆಪಿ ಪಕ್ಷದಿಂದ ಮೊದಲ ಬಾರಿಗೆ ಸವದತ್ತಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. 2013-2018 ರಲ್ಲಿ ಎರಡನೇ ಬಾರಿಗೆ ಬಿಜೆಪಿಯಿಂದ ವಿಧಾನಸಭೆಗೆ ಸ್ಪರ್ಧಿಸಿ ಜಯಗಳಿಸಿ, 2018 ರಲ್ಲಿ ಮೂರನೇ ಬಾರಿಗೆ ಹ್ಯಾಟ್ರಿಕ್ ವಿಜಯ ಸಾಧಿಸಿದರು. ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ವಿಧಾನಸಭಾ ಡೆಪ್ಯುಟಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.












Click it and Unblock the Notifications