ಮೇ 1ರಿಂದ ಬಿಪಿಎಲ್ ಕುಟುಂಬಕ್ಕೆ ಉಚಿತವಾಗಿ 5 ಕೆಜಿ ಅಕ್ಕಿ
ಬೆಂಗಳೂರು, ಏ. 22 : ಕರ್ನಾಟಕ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ಬಿಪಿಎಲ್ ಕುಟುಂಬದವರಿಗೆ ಉಚಿತವಾಗಿ ಅಕ್ಕಿ ವಿತರಣೆ ಮಾಡುವ ಯೋಜನೆ ಮೇ 1ರಿಂದ ಜಾರಿಗೆ ಬರಲಿದೆ. ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ದೊರೆಯಲಿದೆ.
ನಾಗಮಂಗಲದಲ್ಲಿ ಮಂಗಳವಾರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬದ ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿಯನ್ನು ಉಚಿತವಾಗಿ ಮೇ 1ರಿಂದ ವಿತರಣೆ ಮಾಡಲಾಗುತ್ತದೆ ಎಂದು ಘೋಷಿಸಿದ್ದಾರೆ. ['ಅನ್ನಭಾಗ್ಯ'ವಂತೆ ಗೀತಾರ ನೆಮ್ಮದಿಯ ನುಡಿಗಳಿವು]

ಯೋಜನೆ ವಿವರ : ಬಿಪಿಎಲ್ ಕುಟುಂಬದ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತದೆ. ಇದರ ಜೊತೆಗೆ 25 ರೂ.ಗೆ 1 ಲೀಟರ್ ತಾಳೆ ಎಣ್ಣೆ ಮತ್ತು 2 ರೂ.ಗಳಿಗೆ 1 ಕೆಜಿ ಅಯೋಡೈಸ್ಡ್ ಉಪ್ಪು ದೊರೆಯಲಿದೆ. [ಮದ್ದೂರು ಲಕ್ಷ್ಮಮ್ಮನ ಹಸಿವು ನೀಗಿದ ಅನ್ನಭಾಗ್ಯ]
ಅನ್ನಭಾಗ್ಯ ಯೋಜನೆಯಡಿ 1 ರೂ.ಗೆ 30 ಕೆಜಿ ಅಕ್ಕಿಯನ್ನು ನೀಡಲಾಗುತ್ತಿತ್ತು. ಇದು ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿ ನೀಡುವ ಯೋಜನೆಯನ್ನು ಸರ್ಕಾರ ಜಾರಿಗೆ ತರಲು ಮುಂದಾಗಿದ್ದು ಬಜೆಟ್‌ನಲ್ಲಿ ಈ ಕುರಿತು ಘೋಷಣೆ ಮಾಡಿತ್ತು. [ಪಡಿತರದ ಜೊತೆ ಸಿಗಲಿದೆ ಬೇಳೆ, ತಾಳೆ ಎಣ್ಣೆ, ಉಪ್ಪು]
ಸರ್ಕಾರಕ್ಕೆ ಉಳಿತಾಯ : ಇದುವರೆಗೂ ಅನ್ನಭಾಗ್ಯ ಯೋಜನೆಯಡಿ ಏಕ ಸದಸ್ಯ ಬಿಪಿಎಲ್ ಕುಟುಂಬಕ್ಕೆ 10 ಕೆಜಿ, ಇಬ್ಬರು ಸದಸ್ಯರಿದ್ದರೆ 20 ಕೆಜಿ, ಮೂರು ಅಥವ ಅದಕ್ಕಿಂತ ಹೆಚ್ಚು ಸದಸ್ಯರಿದ್ದರೆ 30 ಕೆಜಿ ಅಕ್ಕಿಯನ್ನು 1 ರೂ.ಗೆ ಒಂದು ಕೆಜಿ ಯಂತೆ ವಿತರಣೆ ಮಾಡಲಾಗುತ್ತಿತ್ತು.
ಆದರೆ, ಈಗ ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿ ನೀಡುವುದರಿಂದ ಸರ್ಕಾರಕ್ಕೆ 850 ಕೋಟಿ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ರಾಜ್ಯದಲ್ಲಿ ಒಟ್ಟು 1.7 ಕೋಟಿ ಬಿಪಿಎಲ್ ಕುಟುಂಬಗಳಿವೆ.












Click it and Unblock the Notifications