ಜಮ್ಮು-ಕಾಶ್ಮೀರ: ಕರ್ನಾಟಕದ 3 ಯೋಧರು ಹುತಾತ್ಮ: ಸಿದ್ದರಾಮಯ್ಯ ಸಂತಾಪ
ಬೆಂಗಳೂರು, ಡಿಸೆಂಬರ್ 25: ಜಮ್ಮು-ಕಾಶ್ಮೀರದಲ್ಲಿ ಸೇನಾ ವಾಹನವೊಂದು 160 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದು ಕರ್ನಾಟಕದ ಮೂವರು ಯೋಧರು ಹುತಾತ್ಮರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹುತಾತ್ಮ ಯೋಧರಿಗೆ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಮ್ಮು ಕಾಶ್ಮೀರದ ಪೂಂಛ್ ಬಳಿ ಸೇನಾ ವಾಹನ ಅಪಘಾತಕ್ಕೀಡಾಗಿ ಕನ್ನಡಿಗ ಯೋಧರಾದ ದಯಾನಂದ ತಿರಕಣ್ಣವರ, ಅನೂಪ್ ಹಾಗೂ ಮಹೇಶ್ ಮರಿಗೊಂಡ ಅವರು ಹುತಾತ್ಮರಾದ ಸುದ್ದಿ ತಿಳಿದು ನೋವಾಯಿತು. ಮೃತ ಯೋಧರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ದೇಶ ಸೇವೆಗಾಗಿ ಜೀವ ಮುಡಿಪಿಟ್ಟ ಈ ಹುತಾತ್ಮ ಯೋಧರ ತ್ಯಾಗ, ಬಲಿದಾನವನ್ನು ನಾಡು ಸದಾಕಾಲ ಸ್ಮರಿಸಲಿದೆ ಎಂದು ಹೇಳಿದ್ದಾರೆ.

ಈ ದುರಂತದಲ್ಲಿ ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರ ನಿವಾಸಿ ಮಹೇಶ್ ಮಾರಿಗೊಂಡ (25), ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಬಿಜಾಡಿಯ ಯೋಧ ಅನೂಪ್, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕುಪ್ಪನವಾಡಿ ಗ್ರಾಮದ ಧರ್ಮರಾಜ ಸುಭಾಷ ಖೋತ ಸಾವಿಗೀಡಾಗಿದ್ದಾರೆ.
ಕಂದಕಕ್ಕೆ ಉರುಳಿದ ಸೇನಾ ವಾಹನ, ಬೆಳಗಾವಿ ಯೋಧ ಹುತಾತ್ಮ
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೇನಾ ವಾಹನ ಪಲ್ಟಿಯಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಯೋಧ ಸೇರಿ ಐವರು ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ದುರಂತದಲ್ಲಿ ಹುತಾತ್ಮರಾದ ಸೈನಿಕರಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕುಪ್ಪನವಾಡಿ ಗ್ರಾಮದ ಯೋಧ ಧರ್ಮರಾಜ ಸುಭಾಷ ಖೋತ ಕೂಡ ಒಬ್ಬರು ಎಂದು ಖಚಿತ ಮೂಲಗಳಿಂದ ತಿಳಿದು ಬಂದಿದೆ. ರಕ್ಷಣಾ ಸಿಬ್ಬಂದಿ ಐವರು ಮೃತ ಯೋಧರ ಶವಗಳನ್ನು ಹೊರತೆಗೆದಿದ್ದು ಗಾಯಗೊಂಡವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ವಾಹನದಲ್ಲಿ ಹತ್ತು ಸೈನಿಕರಿದ್ದು, ಐವರು ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಂಗಳವಾರ ಪೂಂಚ್ ಜಿಲ್ಲೆಯ ಮೆಂಧರ್ ಪ್ರದೇಶದ ಬಲ್ಲೋಯಿ ಬಳಿ ಸೇನಾ ವಾಹನವೊಂದು ದಾರಿ ತಪ್ಪಿ ಕಂದಕಕ್ಕೆ ಬಿದ್ದಿದ್ದು, ಇದರಲ್ಲಿದ್ದ 5 ಸೈನಿಕರು ಹುತಾತ್ಮರಾಗಿದ್ದಾರೆ. ಉಳಿದವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನ ಸುಮಾರು 100-150 ಅಡಿ ಆಳದ ಕಂದಕಕ್ಕೆ ಬಿದ್ದಿದೆ ಎನ್ನಲಾಗಿದೆ.
ಮಹಾಲಿಂಗಪುರದ ಮಹೇಶ್ ಮಾರಿಗೊಂಡ ಅವರು ಕಳೆದ ಆರು ವರ್ಷಗಳಿಂದ 11ನೇ ಮರಾಠಾ ರೆಜಿಮೆಂಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೂರು ವರ್ಷದ ಹಿಂದೆ ಮಹೇಶ್ ನಾಗಪ್ಪ ಮಾರಿಗೊಂಡ ಅವರ ವಿವಾಹವಾಗಿತ್ತು. ಯೋಧ ಅನೂಪ್ ಕಳೆದ 13 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅನುಪ್ ದಂಪತಿಗೆ ಎರಡು ವರ್ಷದ ಪುಟ್ಟ ಮಗು ಇದೆ. ಇನ್ನೂ ಘಟನೆಯಲ್ಲಿ ಕರ್ನಾಟಕದ ಮೂವರು ಸೇರಿದಂತೆ ಒಟ್ಟು ಐವರು ಹುತಾತ್ಮರಾಗಿದ್ದಾರೆ. ಈ ಘಟನೆಯಲ್ಲಿ 12 ಜನ ಸೈನಿಕರಿಗೆ ಗಂಭೀರ ಗಾಯಗಳಾಗಿವೆ. ಸೇನಾ ವಾಹನವು ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿಯ ಪೋಸ್ಟ್‌ಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಗಾಯಗೊಂಡಿರುವ ಯೋಧರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.












Click it and Unblock the Notifications