ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ₹ 2.55 ಕೋಟಿ ವಂಚನೆ: ಬಿಜೆಪಿ ಮುಖಂಡರ ವಿರುದ್ಧ ದೂರು- ಪ್ರಭಾವಿಗಳ ಹೆಸರು
ವಿಜಯನಗರ, ಅಕ್ಟೋಬರ್ 24: ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಗೆ ₹2.55 ಕೋಟಿ ವಂಚಿಸಿದ ಆರೋಪದಡಿ ಮೂವರನ್ನು ಬಂಧಿಸಲಾಗಿದೆ. ಈ ಪ್ರಕರಣವು ವಿಜಯನಗರ ( ಹೊಸಪೇಟೆ ) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಮೂವರು ಭಾರತೀಯ ಜನತಾ ಪಕ್ಷದ ನಾಯಕರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಿವೃತ್ತ ಎಂಜಿನಿಯರ್ ಪಿ ಶಿವಮೂರ್ತಿ ನೀಡಿದ ದೂರಿನ ಮೇರೆಗೆ ಕೊಟ್ಟೂರು ಪೊಲೀಸರು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಮೋಹನ್ ಕಟಾರಿಯಾ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮುಖಂಡರಾದ ರೇವಣ ಸಿದ್ದಪ್ಪ, ಶೇಖರ್ ಪುರುಷೋತ್ತಮ್ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಚುನಾವಣೆಗೆ ಟಿಕೆಟ್ ಕೊಡಿಸುವ ಭರವಸೆ ನೀಡಿ ಬಿಜೆಪಿ ಮುಖಂಡರು ಶಿವಮೂರ್ತಿ ಅವರನ್ನು ದಾರಿತಪ್ಪಿಸಿ ವಂಚಿಸಿದ್ದಾರೆ ಎಂಬ ಆರೋಪವಿದೆ. ಇದಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರಿಶಿಷ್ಟ ಜಾತಿಗೆ (ಎಸ್‌ಸಿ) ಮೀಸಲಾದ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡುವ ಭರವಸೆಯನ್ನು ಮೂವರು ಮುಖಂಡರು ಶಿವಮೂರ್ತಿಗೆ ನೀಡಿದ್ದರು.

ಈ ವಂಚನೆಯ ಬಗ್ಗೆ ತಿಳಿದ ನಂತರ ಶಿವಮೂರ್ತಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪಕ್ಷದ ಚಟುವಟಿಕೆಗಳಿಗೆ ₹ 65 ಲಕ್ಷ ಖರ್ಚು ಮಾಡಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಟಿಕೆಟ್ ಕೊಡಿಸುವ ಭರವಸೆ ನೀಡಿದ ವಂಚಕರು ₹ 1.90 ಕೋಟಿ ಲಪಟಾಯಿಸಿದ್ದಾರೆ. ಒಟ್ಟು ₹ 2.55 ಕೋಟಿ ವಂಚಿಸಲಾಗಿದೆ ಎಂದು ಅವರು ಆರೋಪ ಮಾಡಿದ್ದಾರೆ.
ಶಿವಮೂರ್ತಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ ಪರಮೇಶ್ವರ್ ಅವರನ್ನು ಭೇಟಿ ಮಾಡಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ವಂಚನೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿರುವ ಅವರು, ತಪ್ಪಿತಸ್ಥರ ವಿರುದ್ಧ ಶಿಕ್ಷಾರ್ಹ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅವರ ಹಣವನ್ನು ಹಿಂದಿರುಗಿಸಲು ಅನುಕೂಲ ಮಾಡಿಕೊಡುವಂತೆ ಸಿಎಂ ಹಾಗೂ ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ.
2022ರ ಅಕ್ಟೋಬರ್ 23ರಂದು ಮೂವರು ಆರೋಪಿಗಳು ಪುತ್ತೂರಿನ ಬಿಜೆಪಿ ಮುಖಂಡ ಶೇಖರ್ ಅವರಿಗೆ ಶಿವಮೂರ್ತಿಯನ್ನು ಪರಿಚಯಿಸಿದ್ದರು. ನಂತರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಶಿವಮೂರ್ತಿ ಭೇಟಿ ಮಾಡಿದ್ದರು ಎಂದು ತಿಳಿದುಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಿಜೆಪಿ ಮುಖಂಡ ಶೇಖರ್ ಅವರೊಂದಿಗೆ ಟಿಕೆಟ್ ವಿಚಾರವಾಗಿ ಚರ್ಚಿಸಿದ್ದನ್ನು ಕಟೀಲ್ ಒಪ್ಪಿಕೊಂಡಿದ್ದಾರೆ ಎಂದು ಶಿವಮೂರ್ತಿ ತಿಳಿಸಿದ್ದಾರೆ.
ಚುನಾವಣೆ ನಂತರ ಕಟೀಲ್ ಮತ್ತು ಇತರ ನಾಯಕರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ.
ಹಗರಿಬೊಮ್ಮನಹಳ್ಳಿ ಬಿಜೆಪಿ ಟಿಕೆಟ್ ಅನ್ನು ಬಲ್ಲಹುಣ್ಸಿ ರಾಮಣ್ಣ ಅವರಿಗೆ ನೀಡಿದ ಬಳಿಕೆವೇ ಶಿವಮೂರ್ತಿಗೆ ವಂಚನೆಯ ಬಗ್ಗೆ ತಿಳಿದುಬಂದಿದೆ ಎಂದು ಗೊತ್ತಾಗಿದೆ.
ಶಿವಮೂರ್ತಿ ಅವರ ದೂರಿನ ಮೇರೆಗೆ ಮೂವರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 420 (ವಂಚನೆ) 506 (ಜೀವ ಬೆದರಿಕೆ) ಮತ್ತು 34 ರ (ಸಾಮಾನ್ಯ ಉದ್ದೇಶದಿಂದ ಕೆಲವು ವ್ಯಕ್ತಿಗಳು ಮಾಡಿದ ಕ್ರಿಮಿನಲ್ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದು ಕೊಟ್ಟೂರು ಸಬ್ ಇನ್ಸ್‌ಪೆಕ್ಟರ್ ಗೀತಾಂಜಲಿ ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಭ್ರಷ್ಟ ಜನರ ಪಕ್ಷ ಎಂದು ಕಾಂಗ್ರೆಸ್
ವಂಚನೆಯ ಪ್ರಕರಣದ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, 'ಬಿಜೆಪಿ ಅಂದರೆ 'ಭ್ರಷ್ಟ ಜನರ ಪಕ್ಷ' ಎಂಬುದನ್ನು ಪದೇ ಪದೇ ಸಬೀತು ಮಾಡುತ್ತಿದ್ದಾರೆ' ಎಂದು ಟೀಕಿಸಿದೆ.
'ಬಿಜೆಪಿ ಟಿಕೆಟ್ ವಂಚನೆಯಲ್ಲಿ ಮತ್ತೊಂದು ದೂರು ಕೇಳಿಬಂದಿದೆ. ಸ್ವತಃ ಪಕ್ಷದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಹೆಸರು ಈ ವಂಚನೆಯಲ್ಲಿ ಕೇಳಿಬಂದಿದೆ' ಎಂದು ಆರೋಪಿಸಿದೆ.
'ಸರ್ಕಾರದಲ್ಲಿ ಒಂದು ಬಗೆಯ ಲೂಟಿ, ಪಕ್ಷದಲ್ಲಿ ಮತ್ತೊಂದು ಬಗೆಯ ಲೂಟಿ, ಲೂಟಿಯೇ ಬಿಜೆಪಿಯ ಮನೆದೇವರು' ಎಂದು ವ್ಯಂಗ್ಯವಾಡಿದೆ.
'ಟಿಕೆಟ್ ಹೆಸರಲ್ಲಿ ಕಲೆಕ್ಷನ್ ಮಾಡಿರುವುದು ಅಮಿತ್ ಶಾ ನಿರ್ದೇಶನದಿಂದಲೋ, ಮೋದಿ ನಿರ್ದೇಶನದಿಂದಲೋ?' ಎಂದು ಬಿಜೆಪಿಗೆ ಕಾಂಗ್ರೆಸ್ ಪ್ರಶ್ನಿಸಿದೆ.
'ಹೊಸ ಟಿಕೆಟ್ ವಂಚನೆಯಲ್ಲಿ ಬಾಗಿಯಾಗಿರುವುದು ಒಬ್ಬ ಬಿಜೆಪಿ ಮುಖಂಡ ಮತ್ತೊಬ್ಬ ನಳಿನ್ ಕುಮಾರ್ ಆಪ್ತ, ಇನ್ನೊಬ್ಬ ಸ್ವತಃ ಪಕ್ಷದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್. ತನ್ನ ಆಪ್ತ ಶೇಖರ್ ನೊಂದಿಗೆ ವ್ಯವಹರಿಸಲು ಸ್ವತಃ ನಳಿನ್ ಕುಮಾರ್ ಕಟೀಲ್ ಸಂತ್ರಸ್ತನಿಗೆ ತಿಳಿಸಿದ್ದಾರೆ. ನಂಬಿ ಬಂದವರಿಗೆ ವಂಚಿಸುವುದೇ ಬಿಜೆಪಿಯ ಬೈಲಾದಲ್ಲಿ ಬರೆದಿರುವ ಪ್ರಮುಖ ಅಜೆಂಡಾ ಇದ್ದಂತಿದೆ. 224 ಕ್ಷೇತ್ರಗಳಲ್ಲಿ ಇನ್ನೆಷ್ಟು ವಂಚನೆ ನಡೆಸಿದ್ದೀರಿ ಬಿಜೆಪಿಯವರೇ?' ಎಂದು ಕಾಂಗ್ರೆಸ್ ಕೇಳಿದೆ.












Click it and Unblock the Notifications