2nd PUC Result: ದ್ವಿತೀಯ ಪಿಯು ಫಲಿತಾಂಶ ಇಂದು ಮಧ್ಯಾಹ್ನ 3 ಗಂಟೆಗೆ ಪ್ರಕಟ: ನೋಡುವುದು ಹೇಗೆ?
2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಬಹುದಿನಗಳ ಕಾಯುವಿಕೆ ಕೊನೆಗೊಳ್ಳಲಿದೆ. ಪರೀಕ್ಷೆಯ ಫಲಿತಾಂಶವನ್ನು ಏಪ್ರಿಲ್ 9ರಂದು (ಗುರುವಾರ) ಮಧ್ಯಾಹ್ನ 3 ಗಂಟೆಗೆ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಮಹತ್ವದ ಮಾಹಿತಿ ನೀಡಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆ-1 ಬರೆದ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಕಾಯುವಿಕೆಗೆ ಗುರುವಾರ ತೆರೆಬೀಳಲಿದೆ. ಈ ಕುರಿತು ಮಾಹಿತಿ ನೀಡಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು, ಈ ಬಾರಿ ಸುಮಾರು 7.10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಫಲಿತಾಂಶವನ್ನು ಆನ್‌ಲೈನ್ ಮೂಲಕ ಸುಲಭವಾಗಿ ವೀಕ್ಷಿಸಲು ಇಲಾಖೆ ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದಿದ್ದಾರೆ.

ಫಲಿತಾಂಶ ತಿಳಿಯುವುದು ಹೇಗೆ?
ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ವೀಕ್ಷಿಸಲು ಇಲಾಖೆಯ ಅಧಿಕೃತ ವೆಬ್‌ಸೈಟ್ ಆದ karresults.nic.in ಗೆ ಭೇಟಿ ನೀಡಬಹುದು. ಅಲ್ಲಿ ನಿಮ್ಮ ನೋಂದಣಿ ಸಂಖ್ಯೆಯನ್ನು (Registration Number) ನಮೂದಿಸುವ ಮೂಲಕ ಅಂಕಪಟ್ಟಿಯನ್ನು ನೋಡಬಹುದು. ವೆಬ್‌ಸೈಟ್ ಹೊರತಾಗಿ ನೋಂದಾಯಿತ ಮೊಬೈಲ್ ಸಂಖ್ಯೆಗಳಿಗೆ ಎಸ್‌ಎಂಎಸ್ (SMS) ಅಥವಾ ವಾಟ್ಸಾಪ್ ಮೂಲಕವೂ ಫಲಿತಾಂಶ ಕಳುಹಿಸುವ ವ್ಯವಸ್ಥೆಯನ್ನು ಇಲಾಖೆ ಮಾಡುತ್ತಿದೆ. 'Karnataka One' ಮೊಬೈಲ್ ಅಪ್ಲಿಕೇಶನ್ ಮೂಲಕವೂ ಫಲಿತಾಂಶದ ವಿವರಗಳನ್ನು ಪಡೆಯಬಹುದು.
ಡಿಜಿಲಾಕರ್‌ನಲ್ಲಿ ಡಿಜಿಟಲ್ ಅಂಕಪಟ್ಟಿ
ಈ ವರ್ಷದ ವಿಶೇಷವೆಂದರೆ, ಶಿಕ್ಷಣ ಇಲಾಖೆಯು ಪ್ರಪ್ರಥಮ ಬಾರಿಗೆ ಡಿಜಿಲಾಕರ್ (DigiLocker) ಮೂಲಕ ಡಿಜಿಟಲ್ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶ ನೀಡಿದೆ. ವಿದ್ಯಾರ್ಥಿಗಳು ತಮ್ಮ ಆಧಾರ ಕಾರ್ಡ್‌ಗೆ ಲಿಂಕ್ ಆಗಿರುವ ಡಿಜಿಲಾಕರ್ ಖಾತೆಯ ಮೂಲಕ ಅಧಿಕೃತ ಅಂಕಪಟ್ಟಿಯನ್ನು ಪಡೆಯಬಹುದಾಗಿದೆ.
ಡಿಜಿಲಾಕರ್ ಕೇಂದ್ರ ಸರ್ಕಾರದ ಒಂದು ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿದೆ. ಫಲಿತಾಂಶ ಬಂದ ನಂತರ ವಿದ್ಯಾರ್ಥಿಗಳು ತಮ್ಮ ಆಧಾರ್ ಸಂಖ್ಯೆಯನ್ನು ಬಳಸಿ ಡಿಜಿಲಾಕರ್‌ನಲ್ಲಿ ಲಾಗಿನ್ ಆಗಿ, ಕರ್ನಾಟಕ ಪಿಯು ಮಂಡಳಿಯನ್ನು ಆಯ್ಕೆ ಮಾಡಿ ತಮ್ಮ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದು ಭೌತಿಕ ಅಂಕಪಟ್ಟಿಯಷ್ಟೇ ಮಾನ್ಯತೆ ಹೊಂದಿರುತ್ತದೆ ಮತ್ತು ಕಾಲೇಜುಗಳಲ್ಲಿ ಪ್ರವೇಶ ಪಡೆಯುವಾಗ ಮೂಲ ದಾಖಲೆ ಸಿಗುವವರೆಗೂ ಇದನ್ನು ಬಳಸಬಹುದಾಗಿದೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಗಮನಕ್ಕೆ
— Madhu Bangarappa (@Madhu_Bangarapp) April 8, 2026
2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ದಿನಾಂಕ 09/04/2026 ರಂದು ನಾಳೆ ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲಾಗುವುದು.
ಶಾಲಾ ಶಿಕ್ಷಣ ಇಲಾಖೆ ಪ್ರಪ್ರಥಮ ಬಾರಿಗೆ ಡಿಜಿಲಾಕರ್ (DigiLocker) ಮೂಲಕ ದ್ವಿತೀಯ ಪಿಯುಸಿ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವನ್ನು… pic.twitter.com/EgLdgXrS1V
ಈ ಬಾರಿ ತಾಂತ್ರಿಕವಾಗಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಾಗಿದೆ. ಇದು ಮುಂದಿನ ಉನ್ನತ ಶಿಕ್ಷಣದ ದಾಖಲಾತಿಗಳಿಗೆ ಅನುಕೂಲವಾಗಲಿದೆ. ಒಂದು ವೇಳೆ ಈ ಪರೀಕ್ಷೆಯ ಫಲಿತಾಂಶದಲ್ಲಿ ಅಂಕಗಳು ಕಡಿಮೆ ಬಂದಲ್ಲಿ ಅಥವಾ ಅನುತ್ತೀರ್ಣರಾದಲ್ಲಿ ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ. ಅಂತಹವರಿಗಾಗಿ 'ಪರೀಕ್ಷೆ-2' ನಡೆಸಲು ಇಲಾಖೆ ಈಗಾಗಲೇ ವೇಳಾಪಟ್ಟಿ ಪ್ರಕಟಿಸಿದೆ.
ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಸರ್ವರ್ ಕಾರ್ಯಾರಂಭ ಮಾಡಲಿದೆ. ಆ ಸಮಯದಲ್ಲಿ ಟ್ರಾಫಿಕ್ ಹೆಚ್ಚಿರಬಹುದಾದ್ದರಿಂದ ತಾಳ್ಮೆಯಿಂದಿರಿ. ಫಲಿತಾಂಶ ವೀಕ್ಷಿಸುವ ಮೊದಲು ನಿಮ್ಮ ಹಾಲ್ ಟಿಕೆಟ್ ಹಾಗೂ ನೋಂದಣಿ ಸಂಖ್ಯೆಯನ್ನು ಕೈಯಲ್ಲಿಟ್ಟುಕೊಳ್ಳಿ. ಈ ಬಾರಿ ಉತ್ತೀರ್ಣರಾಗದ ಅಥವಾ ಅಂಕಗಳಿಂದ ತೃಪ್ತರಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆ-2 ಬರೆಯಲು ಅವಕಾಶವಿರಲಿದೆ. ಫಲಿತಾಂಶ ನಿರೀಕ್ಷೆಯಲ್ಲಿರುವ ಎಲ್ಲ ವಿದ್ಯಾರ್ಥಿಗಳಿಗೂ ಶುಭವಾಗಲಿ.












Click it and Unblock the Notifications