73 ಹೊಸ ಅಭ್ಯರ್ಥಿಗಳಿಗೆ ಬಿಜೆಪಿ ಮಣೆ: ಕಾಂಗ್ರೆಸ್ ವೋಟ್ ಬ್ಯಾಂಕ್ ಸೆಳೆಯಲು ಕೇಸರಿ ಪಕ್ಷ ತಂತ್ರ ರೂಪಿಸಿತೇ?
ಬೆಂಗಳೂರು, ಏಪ್ರಿಲ್ 17: ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುಣಾವಣೆಗೆ ( Karnataka Assembly Elections 2023 ) ಬಿಜೆಪಿ 73 ಹೊಸ ಅಭ್ಯರ್ಥಿಗಳಿಗೆ ಮಣೆ ಹಾಕಿದೆ. ಬಿಜೆಪಿ ( BJP ) ನಾಯಕತ್ವ ತೆಗೆದುಕೊಂಡಿರುವ ಈ ನಿಲುವು ಬಂಡಾಯದ ಬೆಂಕಿಯನ್ನೇ ಹೊತ್ತಿಸಿದೆ. ಆದರೆ, ಈ ಪ್ರಯತ್ನಕ್ಕೆ ಕೈ ಹಾಕಿರುವ ಬಿಜೆಪಿ ತಂತ್ರಗಳನ್ನು ಮುನ್ನೆಲೆಗೆ ತಂದಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ.
ಕಳೆದ ಎರಡು ದಶಕಗಳಿಂದ ಬಿಜೆಪಿ ಲಿಂಗಾಯತ ಮತಗಳ ಆಸರೆಯನ್ನು ಪಡೆದಿತ್ತು. ಲಿಂಗಾಯತ ಪ್ರಬಲ ನಾಯಕ ಬಿಎಸ್ ಯಡಿಯೂರಪ್ಪನವರು ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದರು. ಅವರು ಅಂದುಕೊಂಡಂತೆ ನಡೆದಿದ್ದರೆ, ಬಿಜೆಪಿ ಹಳೆಯ ಮುಖಗಳಿಗೆ ಮಣೆ ಹಾಕುತ್ತಿತ್ತು. ಆದರೆ, ಬಿಜೆಪಿಯ ಈ ಕ್ರಾಂತಿಕಾರಿ ಬದಲಾವಣೆ 'ಸೋಶಿಯಲ್ ಎಂಜನಿಯರಿಂಗ್'ನ ಭಾಗವಾಗಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಈ ಬೆಳವಣಿಗೆಯಲ್ಲಿ ಪಕ್ಷವು ಭಾರೀ ಆಘಾತಗಳನ್ನೇ ಅನುಭವಿಸಿದೆ. ಪ್ರಮುಖವಾಗಿ ಪ್ರಭಾವಿ ಲಿಂಗಾಯತ ನಾಯಕರನ್ನೇ ಪಕ್ಷ ಕಳೆದುಕೊಂಡಿದೆ. ಅಥಣಿಯಲ್ಲಿ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಬಿಜೆಪಿ ಟಿಕೆಟ್ ನೀಡಲಿಲ್ಲ. ಆ ಹಿನ್ನೆಲೆಯಲ್ಲಿ ಲಕ್ಷ್ಮಣ ಸವದಿ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಮಣೆ ಹಾಕಿದರು.
ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಬೇಡಿಕೆ ಇಟ್ಟಿದ್ದ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಮಣೆ ಹಾಕಲಿಲ್ಲ. ಸತತ ಆರು ಬಾರಿ ಶಾಸಕರಾಗಿದ್ದ ಜಗದೀಶ್ ಶೆಟ್ಟರ್ ಬಿಜೆಪಿ ವಿರುದ್ಧ ಮುಣಿಸಿಕೊಂಡು ಕಾಂಗ್ರೆಸ್‌ನ ಕೈ ಹಿಡಿದಿದ್ದಾರೆ. ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಬೆಂಗಳೂರಿನ ಮಹಾದೇವಪುರದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಆದರೆ, ಆ ಕ್ಷೇತ್ರದಲ್ಲಿ ಅವರ ಪತ್ನಿ ಮಂಜುಳಾ ಲಿಂಬಾವಳಿಗೆ ಟಿಕೆಟ್ ನೀಡುವ ಮೂಲಕ ಅವರನ್ನು ಸಮಾಧಾನ ಪಡಿಸಿದೆ.

ಆದರೆ, ಹಳೆಯ ಮುಖಗಳಿಗೆ ಮಣೆ ಹಾಕದಿರುವ ಬಿಜೆಪಿ ನಡೆಯು ಭಾರೀ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ರಾಷ್ಟ್ರೀಯ ( ಸಂಘಟನಾ ) ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರು ನಿರ್ಧಾರಗಳೇ ಈ ಎಲ್ಲ ಬೆಳವಣಿಗೆಗಳಿಗೆ ಕಾರಣವಾಗಿದೆ ಎಂಬ ಮಾತುಗಳೂ ಕೇಳಿಬಂದಿವೆ.
ಮೇಲ್ವರ್ಗದ ನಾಯಕರಿಗೆ ಮಣೆ ಹಾಕದೇ ಕೆಳ ವರ್ಗದ ಮುಖಂಡರನ್ನು ಬಿಜೆಪಿ ಮುನ್ನೆಲೆಗೆ ತಂದಿದೆ. ಇದು ಕಾಂಗ್ರೆಸ್ ಪಕ್ಷದ ಮೂಲ ಮತದಾರರನ್ನು ಸೆಳೆಯುವ ಕಾರ್ಯತಂತ್ರದ ಭಾಗವಾಗಿದೆ ಎಂದು ಹೇಳಲಾಗುತ್ತಿದೆ. ಮೇಲ್ವರ್ಗದ ಮತಗಳನ್ನೇ ಹೆಚ್ಚು ಆಶ್ರಯಿಸಿದ್ದ ಬಿಜೆಪಿ ಈಗ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯುವತ್ತ ಚಿತ್ರ ಹರಿಸಿದೆ.
ಕಳೆದ ವರ್ಷ ನಡೆದಿದ್ದ ಗುಜರಾತ್ ಚುನಾವಣೆಯಲ್ಲಿಯೂ ಬಿಜೆಪಿ ಹೊಸ ಮುಖಗಳಿಗೆ ಅವಕಾಶ ನೀಡಿತ್ತು. ಅದರಲ್ಲಿ ಕೇಸರಿ ಪಕ್ಷವು ಯಶಸ್ವಿಯನ್ನೂ ಕಂಡಿತ್ತು. ಇದೇ ತಂತ್ರವನ್ನು ಕರ್ನಾಟಕದಲ್ಲೂ ಬಳಸಲು ಬಿಜೆಪಿ ನಿರ್ಧರಿಸಿದೆ. ಆದರೆ, ಕರ್ನಾಟಕದ ರಾಜಕಾರಣ ಗುಜರಾತ್‌ಗಿಂತಲೂ ಭಿನ್ನವಾಗಿದೆ. ಇಲ್ಲಿ ಮುಖಂಡರ ವೈಯುಕ್ತಿಯ ವರ್ಚಸ್ಸು ಕೆಲಸ ಮಾಡುತ್ತದೆ. ಈ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿ ಗುಜರಾತ್ ಮಾಡೆಲ್ ಯಶಸ್ಸು ಕಾಣಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications