ಗಾಂಧಿಯನ್ನು ಕೊಂದವರೇ, ಸಿದ್ದರಾಮಯ್ಯ ಕೊಲೆಗೆ ಕರೆ ನೀಡಿದ್ದಾರೆ: ಕಾಂಗ್ರೆಸ್ ಕೆಂಡ, ಜಮೀರ್ ಎಚ್ಚರಿಕೆ, ಎಂಬಿ ಪಾಟೀಲ್ ಆಕ್ರೋಶ
ಗಾಂಧಿಯನ್ನು ಕೊಂದವರೇ, ಸಿದ್ದರಾಮಯ್ಯ ಕೊಲೆಗೆ ಕರೆ ನೀಡಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. ಅಶ್ವತ್ಥ್ ನಾರಾಯಣ ಅವರು ಕ್ಷಮೆಯಾಚಿಸಬೇಕೆಂದು ಶಾಸಕ ಜಮೀರ್ ಅಹ್ಮದ್ ಖಾನ್ ಹಾಗೂ ಎಂಬಿ ಪಾಟೀಲ್ ಒತ್ತಾಯಿಸಿದ್ದಾರೆ.
ಬೆಂಗಳೂರು, ಫೆಬ್ರವರಿ 16: ಮಹಾತ್ಮ ಗಾಂಧಿಯನ್ನು ಕೊಂದ ಸಿದ್ದಾಂತದವರೇ ಇಂದು ಸಿದ್ದರಾಮಯ್ಯರನ್ನೂ ಕೊಲ್ಲಲು ಕರೆ ಕೊಟ್ಟಿರುವುದು ಎಂದು ಕಾಂಗ್ರೆಸ್ ರಾಜ್ಯ ಘಟಕವು ವಾಗ್ದಾಳಿ ನಡೆಸಿದೆ. ಮಂಡ್ಯದಲ್ಲಿ ಬುಧವಾರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಉನ್ನತ ಶಿಕ್ಷಣ ಸಚಿವ ಡಾ ಸಿಎನ್ ಅಶ್ವತ್ಥ್ ನಾರಾಯಣ ಅವರ ಹೇಳಿಕೆ ವಿರುದ್ಧವಾಗಿ ಕಾಂಗ್ರೆಸ್ ಕೆಂಡಾಮಂಡಲವಾಗಿದೆ.
ಈ ವಿಚಾರವಾಗಿ ಗುರುವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಸಿದ್ದರಾಮಯ್ಯ ಅವರನ್ನು ಕೊಲೆ ಮಾಡುವಂತೆ ಕರೆ ನೀಡಿದ ಅಶ್ವತ್ಥ್ ನಾರಾಯಣ ಅವರು ಬಿಜೆಪಿಯ ಕೊಲೆಗಡುಕ ಮನಸ್ಥಿತಿಯನ್ನು ಅನಾವರಣಗೊಳಿಸಿದ್ದಾರೆ. ಬಹುಶಃ ಬಿಜೆಪಿ ಹೇಳುತ್ತಿದ್ದ ಯುಪಿ ಮಾಡೆಲ್ ಇದೇ ಇರಬಹುದು. ಬಸವರಾಜ ಬೊಮ್ಮಾಯಿ ಅವರಿಗೆ ಕನಿಷ್ಠ ನೈತಿಕತೆ ಇದ್ದರೆ ಅಶ್ವಥ್ ನಾರಾಯಣರನ್ನು ವಜಾಗೊಳಿಸಿ, ಕಾನೂನು ಕ್ರಮ ಜರುಗಿಸಬೇಕು' ಎಂದು ಹೇಳಿದೆ.
'ಇಷ್ಟು ದಿನ ವಿಪಕ್ಷಗಳ ನಾಯಕರಿಗೆ ಐಟಿ, ಇಡಿಗಳ ದಾಳಿ ಮೂಲಕ ಮಣಿಸಲು ಯತ್ನಿಸುತ್ತಿತ್ತು. ಈಗ ಸೋಲಿನ ಹತಾಶೆಯಲ್ಲಿ ಈಗ ಕೊಲೆ ಮಾಡುವ ಹಂತಕ್ಕೆ ಇಳಿದಿದೆ. ಇತಿಹಾಸದುದ್ದಕ್ಕೂ ಕೊಲೆ ರಾಜಕೀಯವನ್ನೇ ದಾಳ ಮಾಡಿಕೊಂಡು ಬಂದಿರುವ ಬಿಜೆಪಿ ಈಗಲೂ ಅದನ್ನೇ ಮುಂದುವರೆಸಿದೆ. ನಿಜಕ್ಕೂ ಕಾನೂನು ಪಾಲನೆಯಾಗುತ್ತಿದ್ದರೆ ಅಶ್ವತ್ಥ್ ನಾರಾಯಣ ಅವರನ್ನು ಬಂಧಿಸಬೇಕು' ಎಂದು ವಾಗ್ದಾಳಿ ನಡೆಸಿದೆ.

'ಕೊಲೆ ಮಾಡುವುದು ಬಿಜೆಪಿಗೆ RSSನಿಂದ ಬಂದಿರುವ ಬಂದಿರುವ ಗುಣ. ಅಂದು ಮಹಾತ್ಮ ಗಾಂಧಿಯನ್ನು ಕೊಂದ ಸಿದ್ದಾಂತದವರೇ ಇಂದು ಸಿದ್ದರಾಮಯ್ಯರನ್ನೂ ಕೊಲ್ಲಲು ಕರೆ ಕೊಟ್ಟಿರುವುದು. ಈ ಕೊಲೆ ಮಾಡುವ ಯೋಚನೆ & ಯೋಜನೆ ಬಂದಿರುವುದು ಕೇಶವ ಕೃಪದಿಂದಲೋ, ನಾಗಪುರದಿಂದಲೋ? ಇಲ್ಲಿನ ಬಿಜೆಪಿಗರಿಗೂ ತಾಲಿಬಾನಿನ ಉಗ್ರರಿಗೂ ವ್ಯತ್ಯಾಸವಿಲ್ಲ' ಎಂದು ಕಾಂಗ್ರೆಸ್ ಹರಿಹಾಯ್ದಿದೆ.
ಎಂಬಿ ಪಾಟೀಲ್ ಆಕ್ರೋಶ
'ಟಿಪ್ಪುವನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯ ಅವರನ್ನು ಹೊಡೆದುಹಾಕಬೇಕು' ಎಂಬ ಸಿಎನ್ ಅಶ್ವತ್ಥ್ ನಾರಾಯಣ ಅವರ ಹೇಳಿಕೆ ಆಘಾತ ತರಿಸಿದೆ. ಈ ಹೇಳಿಕೆಯನ್ನು ಖಂಡಿಸುತ್ತೇನೆ. ಶಾಸಕರಾಗಿ, ಸಚಿವರಾಗಿ ಈ ರೀತಿ ಹೇಳಿಕೆ ನೀಡಿರುವುದು ಅವರು ಹೊಂದಿರುವ ಹುದ್ದೆಗಾಗಲಿ, ರಾಜ್ಯಕ್ಕಾಗಲಿ ಗೌರವ ತರುವುದಿಲ್ಲ. ಕೂಡಲೇ ಸಿದ್ದರಾಮಯ್ಯನವರ ಕ್ಷಮೆ ಕೇಳಬೇಕು' ಎಂದು ಎಂಬಿ ಪಾಟೀಲ್ ಒತ್ತಾಯಿಸಿದ್ದಾರೆ.

ಜಮೀರ್ ಅಹ್ಮದ್ ಖಾನ್ ಎಚ್ಚರಿಕೆ
'ಟಿಪ್ಪುವನ್ನು ಮುಗಿಸಿದಂತೆ ನಮ್ಮ ನಾಯಕರಾದ ಸಿದ್ದರಾಮಯ್ಯ ಅವರನ್ನು ಮುಗಿಸಬೇಕೆಂದು ವಿಪಕ್ಷ ನಾಯಕರ ಹತ್ಯೆಗೆ ಬಹಿರಂಗ ಕರೆ ಕೊಟ್ಟಿರುವ ಸಚಿವ ಅಶ್ವತ್ಥ್ ನಾರಾಯಣ ಅವರ ವಿರುದ್ಧ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು, ತಕ್ಷಣ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸುತ್ತೇನೆ' ಎಂಬುದಾಗಿ ಜಮೀರ್ ಅಹ್ಮದ್ ಖಾನ್ ಟ್ವೀಟ್ ಮಾಡಿದ್ದಾರೆ.
'ರಾಜಕೀಯ ಭಿನ್ನಾಭಿಪ್ರಾಯದ ಕಾರಣಕ್ಕೆ ಸಿದ್ದರಾಮಯ್ಯ ಅವರ ಹತ್ಯೆಗೆ ಕರೆ ನೀಡಿರುವ ಸಚಿವ ಅಶ್ವತ್ಥ್ ನಾರಾಯಣ ಅವರು ಈ ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆದು, ಸಿದ್ದರಾಮಯ್ಯ ಅವರಲ್ಲಿ ಬಹಿರಂಗ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ನಾವು ಬೀದಿಗಿಳಿದು ಹೋರಾಟ ನಡೆಬೇಕಾದೀತು, ಎಚ್ಚರ..!' ಎಂದು ಜಮೀರ್ ಅಹ್ಮದ್ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications