ರಾಮ, ಅಲ್ಲಾ ನಡುವಿನ ಚುನಾವಣೆ ಎನ್ನುತ್ತಲೇ ಇರುತ್ತೇನೆ: ಸುನಿಲ್ ಕುಮಾರ್
ಉಡುಪಿ, ಜನವರಿ 24: ಬಂಟ್ವಾಳದ ವಿಧಾನ ಸಭಾ ಕ್ಷೇತ್ರದಲ್ಲಿ ನಡೆಯುವ ಚುನಾವಣೆ ಶ್ರೀರಾಮ ಮತ್ತು ಅಲ್ಲಾನ ನಡುವೆ ನಡೆಯುವ ಸಮರ ಎಂದು ಇನ್ನೂ ಹತ್ತು ಸಭೆಗಳಲ್ಲಿ ಹೇಳುತ್ತೇನೆ ಎಂದು ಕಾರ್ಕಳ ಬಿಜೆಪಿ ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ.
ಉಡುಪಿಯಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ತಮ್ಮ ವಿವಾದಾತ್ಮಕ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
"ಎಲ್ಲರೂ ಬೇಕು ಅಂತ ಸಚಿವ ರಮಾನಾಥ ರೈ ಅವರು ಹೇಳಿದ್ದರೆ ನಮ್ಮ ಆಕ್ರೋಶ ಇರಲಿಲ್ಲ. ಆದರೆ ರೈ ಸ್ಪಷ್ಟವಾಗಿ ತಮ್ಮ ಭಾಷಣದಲ್ಲಿ ಅಲ್ಲಾನ ಕೃಪೆಯಿಂದಲೇ ಗೆದ್ದಿರುವುದಾಗಿ ಉಲ್ಲೇಖ ಮಾಡಿ ಹೇಳಿದ್ದಾರೆ," ಎಂದು ಅವರು ತಿಳಿಸಿದರು.

"ನಾನು ಅಧಿಕೃತವಾಗಿಯೇ ಬಂಟ್ವಾಳದಲ್ಲಿ ಮಾತನಾಡಿದ್ದೇನೆ. ರಮಾನಾಥ ರೈ ತಮ್ಮ ಹೇಳಿಕೆ ಮೊದಲು ವಾಪಾಸ್ ಪಡೆಯಲಿ. ಆರು ಬಾರಿ ಒಂದು ಸಮುದಾಯದಿಂದ ಗೆದ್ದಿದ್ದೇನೆ ಅಂತ ರಮಾನಾಥ ರೈ ಹೇಳಿದ್ದರು. ಅವರ ಹೇಳಿಕೆಯಿಂದ ಬಂಟ್ವಾಳ ಕ್ಷೇತ್ರದ ಹಿಂದೂಗಳಿಗೆ ಅಪಮಾನ ಮಾಡಿದಂತಾಗಿದೆ," ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
"ರಮಾನಾಥ ರೈ ಮಾಡಿರುವ ಅಪಮಾನಕ್ಕೆ ಉತ್ತರ ಕೊಡಬೇಕಾಗಿದೆ ಈ ಹಿನ್ನಲೆಯಲ್ಲಿ ಈ ಹೇಳಿಕೆ ನೀಡಿದ್ದೇನೆ. ಇನ್ನೂ ಹತ್ತು ಸಭೆಗಳಲ್ಲಿ ಇದನ್ನು ಉಲ್ಲೇಖ ಮಾಡುತ್ತೇನೆ," ಎಂದು ಅವರು ತಿಳಿಸಿದ್ದಾರೆ.
ಬಂಟ್ವಾಳ ಕ್ಷೇತ್ರದಲ್ಲಿ ಆರಂಭವಾಗಿರುವ ಈ ಧರ್ಮ ರಾಜಕಾರಣ ಇಲ್ಲಿಗೆ ನಿಲ್ಲುವ ಯಾವುದೇ ಸೂಚನೆಗಳು ಕಾಣಿಸುತ್ತಿಲ್ಲ. ಬದಲಿಗೆ ಮುಂಬರುವ ದಿನಗಳಲ್ಲಿ ರಾಮ ಮತ್ತು ಅಲ್ಲಾ ಹೆಸರಿನಲ್ಲಿ ಜಟಾಪಟಿ ತಾರಕಕ್ಕೇರುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ.












Click it and Unblock the Notifications