ಉಡುಪಿ : ಮಹಾ ಮಸ್ತಕಾಭಿಷೇಕದಲ್ಲಿ ಕಂಗೊಳಿಸಿದ ಬಾಹುಬಲಿ
ಉಡುಪಿ, ಜ.22 : ಕಾರ್ಕಳದ ಬೆಟ್ಟದಲ್ಲಿನ ಶ್ರೀ ಬಾಹುಬಲಿಗೆ ಮಹಾಮಜ್ಜನದ ಸಂಭ್ರಮ. ಮಸ್ತಕಾಭಿಷೇಕದ ಮೊದಲದಿನವಾದ ಬುಧವಾರ 108 ಕಲಶಾಭಿಷೇಕ ನಡೆಯಿತು. ಸಾವಿರಾರು ಭಕ್ತರು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.
ಬುಧವಾರ ರಾತ್ರಿ 8.15ಕ್ಕೆ ಜಲಾಭಿಷೇಕದೊಂದಿಗೆ ಮಹಾಮಸ್ತಕಾಭಿಷೇಕ ಆರಂಭವಾಯಿತು. ಇದಕ್ಕೆ ಮೊದಲು ಗಾನಶಾಲೆ ಬಳಿಯಿಂದ ಬ್ಯಾಂಡ್, ಚೆಂಡೆ, ವಾದ್ಯ ಸಹಿತವಾದ ಮೆರವಣಿಗೆಯಲ್ಲಿ ಕಾರ್ಕಳ ಜೈನ ಮಠದ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ ಮಹಾಸ್ವಾಮೀಜಿ ಸಹಿತ ಗಣ್ಯರನ್ನು ಬಾಹುಬಲಿ ಬೆಟ್ಟಕ್ಕೆ ಕರೆತರಲಾಯಿತು.

ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಕಟ್ಟಡ, ಮರಗಳಲ್ಲೆಲ್ಲ ವಿದ್ಯುತ್ ಬೆಳಕಿನ ಝಗಮಗ. ಅಹಿಂಸೆಯ ತತ್ವ ಸಾರುವ ಧರ್ಮಛತ್ರದಡಿ ನಡೆದ ಮಹಾಮಜ್ಜನವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಒಂದು ಅಭಿಷೇಕದಿಂದ ಇನ್ನೊಂದು ಅಭಿಷೇಕದ ಮಧ್ಯೆ ಕೆಂಪು ಮತ್ತು ಹಸಿರು ಬಾವುಟವನ್ನು ತೋರಿದಾಗ ಶುದ್ಧೋದಕ ಅಭಿಷೇಕ ನಡೆಯಿತು. [ಕಾರ್ಕಳದಲ್ಲಿ ಮಹಾ ಮಸ್ತಕಾಭಿಷೇಕ]
ಮೂರ್ತಿಯ ಪಾದಮೂಲದಲ್ಲಿರುವ ಬಾಹುಬಲಿ ಬಿಂಬಕ್ಕೂ ಸರದಿಯಲ್ಲಿ ಅಭಿಷೇಕ ನಡೆಯಿತು. ಕಬ್ಬಿನ ರಸದ ಅಭಿಷೇಕ, ಹಾಲಿನ ಅಭಿಷೇಕದಲ್ಲಂತೂ ಬಾಹುಬಲಿ ಸುಂದರವಾಗಿ ಕಂಗೊಳಿಸಿದ 10ರ ಕಲ್ಕ ಚೂರ್ಣ (ಅಕ್ಕಿ ಹಿಟ್ಟು), ಅರಿಶಿನ, ವನಸ್ಪತಿ ಕಶಾಯ, ಗಂಧ, ಶ್ರೀಗಂಧ, ಅಶ್ವಗಂಧ ಹಾಗೂ ಪುಷ್ಪಾಭಿಷೇಕ ನಡೆಯಿತು.

ಕಾರ್ಕಳದಲ್ಲಿ ಬಾಹುಬಲಿಯ ಮಹಾ ಮಸ್ತಕಾಭಿಷೇಕ 12 ವರ್ಷಗಳ ನಂತರ ನಡೆಯುತ್ತಿದ್ದು, ಜ.21ರಂದು ಆರಂಭವಾಗಿದೆ. ಜನವರಿ 31ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಮಸ್ತಕಾಭಿಷೇಕದ ಅಂಗವಾಗಿ ಹಮ್ಮಿಕೊಳ್ಳಲಾಗಿದೆ. [ಚಿತ್ರಗಳು : ಐಸಾಕ್ ರಿಚರ್ಡ್, ಮಂಗಳೂರು]












Click it and Unblock the Notifications