ನಟಿ ಶ್ರುತಿಗೆ ಕೊಕ್: ಯೋಗೇಶ್ವರ್ ವಿರುದ್ದ ಯಡಿಯೂರಪ್ಪ ಬೌನ್ಸರ್?
ಈ ರೀತಿಯ ಆದೇಶ ಮುಖ್ಯಮಂತ್ರಿಗಳ ಕಾರ್ಯಾಲಯದಿಂದ ಬರುತ್ತದೆ ಎನ್ನುವುದು ಖುದ್ದು ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೂ ಗೊತ್ತಿರಲಿಕ್ಕಿಲ್ಲ. ಶನಿವಾರ (ಜುಲೈ 17) ಹೊರಡಿಸಲಾದ ಅಧಿಸೂಚನೆಯ ಪ್ರಕಾರ ಪ್ರವಾಸೋದ್ಯಮ ಇಲಾಖೆಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲಾಗಿದೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷರನ್ನಾಗಿ ಕಾಪು ಸಿದ್ದಲಿಂಗಸ್ವಾಮಿ ಅವರನ್ನು ನೇಮಿಸಿ, ಸಿಎಂ ಕಚೇರಿ ಆದೇಶ ಹೊರಡಿಸಿದೆ. ಆ ಮೂಲಕ, ನಟಿ ಶ್ರುತಿಯವರ ನೇಮಕಾತಿಯನ್ನು ಸರಕಾರ ಹಿಂದಕ್ಕೆ ಪಡೆದಿದೆ.
ಮೇಲ್ನೋಟಕ್ಕೆ ಇದೊಂದು ಸಾಮಾನ್ಯ ಆಡಳಿತಾತ್ಮಕ ಬದಲಾವಣೆ ಎಂದಾದರೂ, ಇದರ ಹಿಂದೆ ಬೇರೊಂದು ರಾಜಕೀಯ ಕಾರಣವಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಕಾರಣ, ಯೋಗೇಶ್ವರ್ ಮತ್ತು ಯಡಿಯೂರಪ್ಪನವರ ನಡುವಿನ ಹಳಸಿದ ಸಂಬಂಧ.
ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಯೋಗೇಶ್ವರ್ ಅವರು ಇಲಾಖೆಯ ಕೆಲಸಕ್ಕಿಂತ ಹೆಚ್ಚಾಗಿ, ದೆಹಲಿಯಲ್ಲೇ ಕಾಲ ಕಳೆದವರು ಎನ್ನುವುದು ಬಿಜೆಪಿ ವಲಯದಲ್ಲೇ ಕೇಳಿ ಬರುತ್ತಿರುವ ಮಾತು.

ಯೋಗೇಶ್ವರ್ ಅವರು ಇಲಾಖೆಯನ್ನು ಲಾಭದತ್ತ ತರಲು ಪ್ರಯತ್ನ ಮಾಡಿಲ್ಲ
ಕೋವಿಡ್ ಕಾರಣದಿಂದಾಗಿ ಭಾರೀ ನಷ್ಟ ಅನುಭವಿಸಿದ ಇಲಾಖೆಗಳ ಪೈಕಿ ಮಂಚೂಣಿಯಲ್ಲಿ ಬರುವುದು ಪ್ರವಾಸೋದ್ಯಮ ಇಲಾಖೆ. ಲಾಕ್ ಡೌನ್ ತೆರವುಗೊಂಡ ನಂತರವೂ ಸಚಿವರಾದಂತಹ ಯೋಗೇಶ್ವರ್ ಅವರು ಇಲಾಖೆಯನ್ನು ಲಾಭದತ್ತ ತರಲು ಪ್ರಯತ್ನ ಮಾಡದೇ, ಬರೀ, ಮುಖ್ಯಮಂತ್ರಿಗಳ ವಿರುದ್ದ ಕಾರ್ಯತಂತ್ರ ರೂಪಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಪಕ್ಷದಲ್ಲೇ ಕೇಳಿ ಬರುತ್ತಿರುವ ಮಾತು.

ಯೋಗೇಶ್ವರ್ ಗೆ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶ್ರುತಿ ಸಾಥ್
ಮುಖ್ಯಮಂತ್ರಿ ಬದಲಾವಣೆಗೆ ಯೋಗೇಶ್ವರ್ ದೆಹಲಿಯಲ್ಲಿ ಬೀಡು ಬಿಟ್ಟು, ಅದು ಸಾಧ್ಯವಾಗದ ನಂತರ ರಾಜ್ಯಕ್ಕೆ ವಾಪಸ್ ಬಂದಿದ್ದರು. ಇದಾದ ನಂತರ ಹಲವು ದೇವಾಲಯ, ಮಠಗಳಿಗೂ ಯೋಗೇಶ್ವರ್ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಯೋಗೇಶ್ವರ್ ಗೆ ನಟಿ ಮತ್ತು ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶ್ರುತಿ ಸಾಥ್ ನೀಡಿದ್ದರು. ಈಗ, ಶ್ರುತಿ ಸ್ಥಾನಕ್ಕೆ ಮುಖ್ಯಮಂತ್ರಿಗಳ ಪರಮಾಪ್ತ ಕಾಪು ಸಿದ್ದಲಿಂಗಸ್ವಾಮಿಗೆ ಆ ಜವಾಬ್ದಾರಿಯನ್ನು ನೀಡಲಾಗಿದೆ.

ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಆಪ್ತವಲಯದಲ್ಲಿರು ಸಿದ್ದಲಿಂಗ ಸ್ವಾಮಿ
ತಮ್ಮನ್ನು ಆ ಸ್ಥಾನದಿಂದ ತೆಗೆದು ಹಾಕಲಾಗಿದೆ ಎನ್ನುವುದು ಖುದ್ದು ಶ್ರುತಿಗೂ ತಿಳಿದಿರಲಿಲ್ಲ. ಯಾವುದೇ ಮುನ್ಸೂಚನೆ ಇಲ್ಲದೇ, ಮುಖ್ಯಮಂತ್ರಿಗಳ ನಿರ್ಧಾರ ಶ್ರುತಿಗೆ ಶಾಕ್ ನೀಡಿದೆ. ಮೈಸೂರು ಜಿಲ್ಲೆಯ ಕಾಪು ಸಿದ್ದಲಿಂಗ ಸ್ವಾಮಿಯವರು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಆಪ್ತವಲಯದಲ್ಲಿ ಹಿಂದಿನಿಂದಲೂ ಗುರುತಿಸಿಕೊಂಡವರು. ಈ ನಿರ್ಧಾರದ ಹಿಂದೆ ಬೇರೆ ಕಾರಣವಿದೆ ಎನ್ನುವುದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.
Recommended Video

ಯೋಗೇಶ್ವರ್‌ಗೆ ಮೂಗುದಾರ ಹಾಕಲು ಮುಂದಾದ ಬಿಎಸ್ವೈ
ಪ್ರವಾಸೋದ್ಯಮ ಇಲಾಖೆಗೆ ಸಿದ್ದಲಿಂಗಸ್ವಾಮಿ ನೇಮಕದ ಹಿಂದೆ ಇಲಾಖೆಯ ಸಚಿವರಾದ ಸಿ.ಪಿ.ಯೋಗೇಶ್ವರ್ ಅವರಿಗೆ ಕಡಿವಾಣ ಹಾಕುವ ಉದ್ದೇಶವನ್ನು ಮುಖ್ಯಮಂತ್ರಿಗಳು ಹೊಂದಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಯಡಿಯೂರಪ್ಪನವರನ್ನು ಬದಲಾಯಿಸಬೇಕು ಎನ್ನುವ ಪ್ರಯತ್ನಕ್ಕೆ ಯತ್ನಾಳ್ ಮತ್ತು ಸಿಪಿವೈ ಶತಪ್ರಯತ್ನ ಮಾಡುತ್ತಲೇ ಇರುವುದು ಗೌಪ್ಯವಾಗಿಯೇನೂ ಉಳಿದಿಲ್ಲ.












Click it and Unblock the Notifications