ಶ್ರೀಶೈಲದಲ್ಲಿ ಕನ್ನಡಿಗರ ಸುರಕ್ಷತೆ; ಆಂಧ್ರ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ಕುಮಾರಸ್ವಾಮಿ
ಬೆಂಗಳೂರು, ಏ.1: ಪುಣ್ಯಕ್ಷೇತ್ರ ಶ್ರೀಶೈಲದಲ್ಲಿ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅವರು ಆಂಧ್ರಪ್ರದೇಶ ಹಿರಿಯ ಅಧಿಕಾರಿಗಳ ಜತೆ ಮಾತನಾಡಿದ್ದಾರೆ.
ಕರ್ನೂಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಜತೆ ಮಾತನಾಡಿರುವ ಅವರು, ನಾಳೆ ಯುಗಾದಿ ಹಬ್ಬವು ಇದ್ದು, ಶ್ರೀ ಮಲ್ಲಿಕಾರ್ಜುನ ಸ್ವಾಮಿ ದರ್ಶನಕ್ಕೆ ಅಸಂಖ್ಯಾತ ಕನ್ನಡಿಗ ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಲಿದ್ದು, ಅವರೆಲ್ಲರಿಗೂ ಸೂಕ್ತ ಭದ್ರತೆ ಕೊಡಬೇಕು ಎಂದು ಕೋರಿದ್ದಾರೆ.
ಈ ಬಗ್ಗೆ ಆಂಧ್ರದ ಅಧಿಕಾರಿಗಳು ಕನ್ನಡಿಗರ ಸುರಕ್ಷತೆ ಬಗ್ಗೆ ತಮಗೆ ಭರವಸೆ ನೀಡಿದ್ದು, ದೇವರ ದರ್ಶನಕ್ಕೆ ತೊಂದರೆ ಇರುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ಅಲ್ಲದೆ, ವೈ ಎಸ್ ಜಗನ್ಮೋಹನ್ ರೆಡ್ಡಿ ಅವರ ಸರಕಾರ ಸೂಕ್ತ ಕ್ರಮ ವಹಿಸುತ್ತದೆ ಎಂದು ವಿಶ್ವಾಸ ವ್ಯಕ್ತಡಿಸಿದ್ದಾರೆ.

ಕುಮಾರಸ್ವಾಮಿ ಟ್ವೀಟ್:
ಶ್ರೀ ಮಲ್ಲಿಕಾರ್ಜುನನ ಪುಣ್ಯಕ್ಷೇತ್ರ, ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಒಂದು ಶ್ರೀಶೈಲ. ನಮ್ಮೆಲ್ಲರ ಪಾಲಿನ ಶ್ರದ್ಧಾಕೇಂದ್ರ. ಅಲ್ಲಿ ನಡೆದ ಸಣ್ಣ ಅಹಿತಕರ ಘಟನೆಯಿಂದ ಭಗವಂತನ ದರ್ಶನಕ್ಕೆ, ಭಕ್ತರಿಗೆ ಅಡ್ಡಿಯಾಗುವುದು ಬೇಡ.
ಆಂಧ್ರ, ತೆಲಂಗಾಣ, ಕರ್ನಾಟಕ ಅಷ್ಟೇ ಅಲ್ಲ, ಇಡೀ ದೇಶದ ಪ್ರತಿ ಭಕ್ತನೂ ಶ್ರೀ ಮಲ್ಲಿಕಾರ್ಜುನನ ದರ್ಶನಕ್ಕೆ ತವಕಿಸುತ್ತಾನೆ. ಅಂಥ ಪಾವನ ಕ್ಷೇತ್ರದಲ್ಲಿ ಹಿಂಸೆ ಬೇಡ. ಭಗವಂತನ ಸನ್ನಿಧಾನದಲ್ಲಿ ಭಕ್ತಿ ಬಿಟ್ಟರೆ ಬೇರೇನೂ ಅಗತ್ಯವಿಲ್ಲ.
ನಾಳೆ ಬೆಳಗ್ಗೆ ಯುಗಾದಿ ಹಬ್ಬ. ತಲೆ ತಲಾಂತರಗಳಿಂದ ಅಣ್ಣ ತಮ್ಮಂದಿರಂತೆ ಬಳಿ ಬದುಕುತ್ತಿರುವ ಕನ್ನಡಿಗರು, ತೆಲುಗರು ಅಷ್ಟೇ ಅಲ್ಲ, ಎಲ್ಲ ಭಕ್ತರು ಶ್ರೀಶೈಲ ಮಲ್ಲಿಕಾರ್ಜುನನ್ನು ದರ್ಶನ ಮಾಡಬೇಕು ಎನ್ನುವುದು ನನ್ನ ಕಾಳಜಿ.

ನಾನು ಈಗಾಗಲೇ ಕರ್ನೂಲು ಪೋಲಿಸ್ ಜಿಲ್ಲೆ ವರಿಷ್ಠಾಧಿಕಾರಿ ಅವರೊಂದಿಗೆ ಮಾತನಾಡಿದ್ದೇನೆ. ಅವರು ಸುರಕ್ಷತೆಯ ಎಲ್ಲ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ. ಕನ್ನಡಿಗ ಭಕ್ತರೆಲ್ಲರೂ ದೇವರ ದರ್ಶನ ಮಾಡಿಕೊಳ್ಳಬಹುದು.
ಆಂಧ್ರ ಪ್ರದೇಶದ ವೈ ಎಸ್ ಜಗನ್ಮೋಹನ್ ರೆಡ್ಡಿ ಅವರ ಸರಕಾರ ಕನ್ನಡಿಗರಿಗೆ ಭದ್ರತೆ ನೀಡುತ್ತದೆ ಎಂಬ ವಿಶ್ವಾಸವಿದೆ. ಒಂದು ವೇಳೆ ಏನಾದರೂ ಸಮಸ್ಯೆಯಾದರೆ ನನ್ನ ಗಮನಕ್ಕೆ ತನ್ನಿ ಎಂದು ನನ್ನ ಭಕ್ತ ಬಂಧುಗಳಲ್ಲಿ ವಿನಂತಿಸುತ್ತೇನೆ ಎಂದು ಟ್ವೀಟ್ ಮೂಲಕ ಮಾಜಿ ಮುಖ್ಯಮಂತ್ರಿಗಳು ಕೋರಿದ್ದಾರೆ.












Click it and Unblock the Notifications