ಹಾವೇರಿಯಲ್ಲಿ ಜ.6ರಿಂದ ಅಕ್ಷರ ಜಾತ್ರೆ: ಡಿ.1ರಂದು ಉತ್ತರ ಕನ್ನಡದಲ್ಲಿ 'ಕನ್ನಡ ರಥ'ಕ್ಕೆ ಚಾಲನೆ
ಬೆಂಗಳೂರು ನವೆಂಬರ್ 30: ಹಾವೇರಿಯಲ್ಲಿ 2023ರ ಜನವರಿ 6ರಿಂದ ಮೂರು 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ. ಅದರ ಪೂರ್ವಭಾವಿಯಾಗಿ 'ಕನ್ನಡ ಜ್ಯೋತಿ' ಹೊತ್ತ 'ಕನ್ನಡ ರಥ'ದ ಜಾಥಾಗೆ ಗುರುವಾರ (ಡಿ.1) ಉತ್ತರ ಕನ್ನಡದ ಸಿದ್ಧಾಪುರದಲ್ಲಿ ಚಾಲನೆ ನೀಡಲಾಗುವುದು.
ಈ ಕುರಿತು ಮಾಹಿತಿ ನೀಡಿರುವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಶಿ ಗುರುವಾರ ಬೆಳಗ್ಗೆ 10 ಗಂಟೆಗೆ ಉತ್ತರ ಕನ್ನಡದ ಸಿದ್ಧಾಪುರದ ಭುವನಗಿರಿಯಲ್ಲಿರುವ ಕನ್ನಡ ತಾಯಿ ಭುವನೇಶ್ವರಿ ದೇವಾಲಯದಲ್ಲಿ ಪೂಜೆ ನಡೆಯಲಿದೆ. ಕನ್ನಡ ಜ್ಯೋತಿ ರಥ ಅಲ್ಲಿಂದ ಹೊರಟು ರಾಜ್ಯದ ವಿವಿಧ ಭಾಗಗಳಲ್ಲಿ ಮತ್ತು ಹಾವೇರಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಂಚರಿಸಲಿದೆ.
ಸಮ್ಮೇಳನ ಉದ್ಘಾಟನೆ ಸಂದರ್ಭದಲ್ಲಿ ಕನ್ನಡ ರಥವು ವಿಶೇಷವಾಗಿ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದೆ.
ಇದರಲ್ಲಿನ ಕನ್ನಡ ಜ್ಯೋತಿಯಿಂದಲೇ 2023ರ ಜನವರಿ 6ರಂದು ನಡೆಯುವ ಸಮ್ಮೇಳನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ ಎಂದು ಜೋಶಿ ಹೇಳಿದರು.

'ಕನ್ನಡ ಜ್ಯೋತಿ' ಹೊತ್ತ 'ಕನ್ನಡ ರಥ'ದ ಜಾಥಾ
ಹಾವೇರಿಯಲ್ಲಿ ಹಿರಿಯ ಕವಿ ಡಾ. ದೊಡ್ಡರಂಗೇಗೌಡ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿಯೇ ಮೊದಲ ಬಾರಿಗೆ 'ಕನ್ನಡ ಜ್ಯೋತಿ'ಹೊತ್ತ 'ಕನ್ನಡ ರಥ'ದ ಜಾಥಾ ಹಮ್ಮಿಕೊಳ್ಳಲಾಗಿದೆ. ಇದೇ ರೀತಿ ಮುಂದಿನ ಎಲ್ಲ ಸಮ್ಮೇಳನಗಳಲ್ಲಿ ನಡೆಸಲು ಕೆಲವು ಯೋಜನೆಗಳನ್ನು ರೂಪಿಸಲಾಗಿದೆ. ಈ ಮೂಲಕ ಹಾವೇರಿಯ ಸಮ್ಮೇಳನ ವಿಜೃಂಭಣೆಯಿಂದ ಮತ್ತು ಮಾದರಿಯಾಗುವಂತೆ ನಡೆಸಲಾಗುವುದು ಎಂದರು.

ಜನಪ್ರತಿನಿಧಿಗಳು, ಕನ್ನಡಿಗರು ಕನ್ನಡ ರಥ ಸ್ವಾಗಿಸಬೇಕು
ಪರಿಷತ್ತಿನ 'ಕನ್ನಡ ರಥ'ವು ಆಯಾ ಜಿಲ್ಲೆಗಳಲ್ಲಿ ಸಂಚರಿಸುವ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಕನ್ನಡ ಪರ ಸಂಘಟನೆಗಳು, ರೈತರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ವಿದ್ಯಾಸಂಸ್ಥೆಗಳು, ಮಠಗಳು, ರೋಟರಿ ಕ್ಲಬ್, ಸ್ತ್ರೀ ಶಕ್ತಿ ಸಂಘಗಳು, ಇತರ ಎಲ್ಲ ಕನ್ನಡ ಸಂಘ-ಸಂಸ್ಥೆಗಳು ಜೊತೆಯಾಗಿ ಸ್ವಾಗತಿಸಬೇಕು ಮತ್ತು ಬಿಳ್ಕೊಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳು ತಿಳಿಸಿದ್ದಾರೆ. ಈ ಜಾಥಾ ಯಶಸ್ವಿಗೆ ಕನ್ನಡಿಗರೆಲ್ಲರು ಸಹಕರಿಸುವಂತೆ ಮಹೇಶ ಜೋಶಿ ಕೋರಿದ್ದಾರೆ.

'ಸಾಮರಸ್ಯದ ಭಾವ- ಕನ್ನಡದ ಜೀವ' ಧ್ಯೇಯ ವಾಕ್ಯ
2023ರ ಜನವರಿ 6, 7, 8ರಂದು ಹಾವೇರಿಯಲ್ಲಿ ಹುಬ್ಬಳ್ಳಿ- ಹಾವೇರಿ ಮುಖ್ಯರಸ್ತೆ ಆರ್‌ಟಿಓ ಕಚೇರಿ ಬಳಿ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಅದರ ಸಿದ್ಧತೆಗಳು ಭರದಿಂದ ಸಾಗಿವೆ. ಭಾವೈಕ್ಯತೆ, ಸಂಸ್ಕೃತಿ ಮತ್ತು ಪರಂಪರೆಗೆ ಹೆಸರುವಾಸಿಯಾದ ಹಾವೇರಿಯಲ್ಲಿ 'ಸಾಮರಸ್ಯದ ಭಾವ- ಕನ್ನಡದ ಜೀವ' ಎಂಬ ಧ್ಯೇಯ ವಾಕ್ಯದೊಂದಿಗೆ ಸಮ್ಮೇಳನ ಜರುಗಲಿದೆ. ಸಮ್ಮೇಳನದ ಸಂಪೂರ್ಣ ಮಾಹಿತಿ ಒದಗಿಸಲು ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆಧುನಿಕ ಮೊಬೈಲ್ ಆಪ್ ಅನ್ನು ಕನ್ನಡ ಸಾಹಿತ್ಯ ಪರಿಷತ್ತು ಸಿದ್ಧಪಡಿಸಿದೆ.

'ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿ' ಆಪ್
ಪರಿಷತ್ತು 'ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿ' ಮೊಬೈಲ್ ಆಪ್ ಅನ್ನು ಸಿದ್ಧಪಡಿಸಿದೆ. ಸಮ್ಮೇಳನದಲ್ಲಿ ಭಾಗವಹಿಸುವವರ ಪ್ರತಿನಿಧಿಗಳ ನೋಂದಣಿ, ಪುಸ್ತಕ ಹಾಗೂ ವಾಣಿಜ್ಯ ಮಳಿಗೆಗಳ ನೋಂದಣಿ, ಸಮ್ಮೇಳನದ ಆಮಂತ್ರಣ ಪತ್ರಿಕೆ, ವಿವಿಧ ಸಮಿತಿಗಳು ಮತ್ತು ಸಮಿತಿಯ ಸದಸ್ಯರ ವಿವರಗಳು, ಹಾವೇರಿ ಕುರಿತಂತೆ ಮಾಹಿತಿ, ಸಾರಿಗೆ, ಸಂಪರ್ಕ, ವಸತಿ ವಿವರ, ಸಹಾಯವಾಣಿ ಹಾಗೂ ಸಮ್ಮೇಳನದ ಮಾಹಿತಿಗಾಗಿ ಈ ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಗೂಗಲ್ ಪ್ಲೇ ಸ್ಟೋರ್‌ನಲ್ಲಿ 'ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿ' ಆಪ್ https://play.google.com/store/apps/details?id=com.tritantra.kasapa ಮೂಲಕ ಮಾತ್ರವೇ ರೂ. 500ರೂ. ಶುಲ್ಕವನ್ನು ಆಪ್ ಮೂಲಕವೇ ಪಾವತಿಸಿ ಪ್ರತಿನಿಧಿಯಾಗಿ ನೋಂದಾಯಿಸಿಕೊಳ್ಳಬಹು. ಇನ್ನಿತರ ಎಲ್ಲ ಮಾಹಿತಿಗಳು ಇದೇ ಆಪ್‌ನಲ್ಲಿ ಲಭ್ಯವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆ ತಿಳಿಸಿದೆ.












Click it and Unblock the Notifications